ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿ ಯೂನಿಯನ್ ವತಿಯಿಂದ ಶಿಕ್ಷಕರ ದಿನವನ್ನು ಸೆ.5ರಂದು ಆಚರಿಸಲಾಯಿತು.ಪ್ರಾಂಶುಪಾಲ ಸಹಿತ ಎಲ್ಲ ಬೋಧಕ ಸಿಬ್ಬಂದಿ ಕಾಲೇಜಿನ ವರಾಂಡದಲ್ಲಿ ಸಾಗಿ ವಿದ್ಯಾರ್ಥಿಗಳ ಗೌರವ ಸ್ವೀಕರಿಸಿದರು.
ವಿದ್ಯಾರ್ಥಿಗಳು ವರಾಂಡದ ಎರಡೂ ಬದಿಯಲ್ಲಿ ಸಾಲಾಗಿ ನಿಂತು ಶಿಕ್ಷಕ ವೃಂದಕ್ಕೆ ಗೌರವಪೂರ್ಣ ಪ್ರಣಾಮ ಸಲ್ಲಿಸಿದರು.ಕಾಲೇಜು ಒಳಾಂಗಣದಲ್ಲಿ ಸಂಘದ ಸದಸ್ಯರು ಬೋಧಕರಿಗೆ ಪುಷ್ಪ, ಲೇಖನಿ ನೀಡಿ ಗೌರವಿಸಿದರು.ವಿದ್ಯಾರ್ಥಿಗಳ ಚೆಂಡೆವಾದನ ತಂಡವು ಕಾರ್ಯಕ್ರಮಕ್ಕೆ ಮೆರುಗು ನೀಡಿತು.
ಸಮ್ಯಗ್ದರ್ಶನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, ಉಪ ಪ್ರಾಂಶುಪಾಲ ಪ್ರೊ. ಶಶಿಶೇಖರ ಎನ್. ಕಾಕತ್ಕರ್ ಹಾಗೂ ಆಡಳಿತ ಕುಲಸಚಿವೆ ಡಾ. ಶಲೀಪ್ ಕುಮಾರಿ ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲರು, ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಯೋಜಿಸಿದ ವಿದ್ಯಾರ್ಥಿ ಸಂಘವನ್ನು ಶ್ಲಾಸಿದರು. ಜೀವನಪರ್ಯಂತ ಸ್ಮರಣೀಯ ಕಾರ್ಯಕ್ರಮ ಇದು ಎಂದು ಬಣ್ಣಿಸಿದ ಅವರು, ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸ, ಗುರು-ಶಿಷ್ಯ ಅನುಬಂಧ ಶಾಶ್ವತವಾಗಿರಲಿ ಎಂದು ಆಶಿಸಿದರು.ವಿದ್ಯಾರ್ಥಿಗಳಾದ ವೈದೇಹಿ ಮತ್ತು ತಂಡದವರು ಶಿಕ್ಷಕರ ಕುರಿತು ಗಾಯನ ಪ್ರಸ್ತುತಪಡಿಸಿದರು. ವಿಜ್ಞಾನ ಸಂಘದ ಅಧ್ಯಕ್ಷ ಕಿರಣ್ ಕೆ. ಅನಿಸಿಕೆ ವ್ಯಕ್ತಪಡಿಸಿದರು.
ಯೂನಿಯನ್ನ ಕಲಾ ಸಂಘದ ಅಧ್ಯಕ್ಷೆ ಪ್ರತೀಕ್ಷಾ, ವಾಣಿಜ್ಯ ಸಂಘದ ಅಧ್ಯಕ್ಷ ಚಿದ್ವಿಲಾಸ್ ಹಾಗೂ ಇತರ ಪದಾಧಿಕಾರಿಗಳು ಕಾರ್ಯಕ್ರಮ ಸಂಘಟಿಸಿದ್ದರು. ಕಲಾ ಸಂಘದ ಸಯೋಜಕಿ ಮಾನಸಾ ಅಗ್ನಿಹೋತ್ರಿ ಕಾರ್ಯಕ್ರಮ ನಿರ್ವಹಿಸಿದರು.