ಕಸ್ತೂರಿ ರಂಗನ್ ವರದಿ ಬಗ್ಗೆ ಸಚಿವ ಈಶ್ವರ ಖಂಡ್ರೆ ಹೇಳಿಕೆಗೆ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ವಿರೋಧ

0

ಬೆಳ್ತಂಗಡಿ: ಕಸ್ತೂರಿ ರಂಗನ್ ವರದಿಯನ್ನು ಅದಿವಾಸಿ ಯಥಾವತ್ತಾಗಿ ಜಾರಿ ಮಾಡುತ್ತೇವೆ ಎಂಬ ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆ ಅರಣ್ಯವಾಸಿಗಳ ಬದುಕನ್ನು ನಾಶಮಾಡುವ ಹುನ್ನಾರವಾಗಿದೆ , ತಕ್ಷಣ ರಾಜ್ಯ ಸರ್ಕಾರ ತನ್ನ ಜನವಿರೋಧಿ ನೀತಿಯನ್ನು ಬದಲಾವಣೆ ಮಾಡದಿದ್ದರೆ ಬೀದಿಗಿಳಿದು ಜನರ ಬದುಕುವ ಹಕ್ಕನ್ನು ಉಳಿಸಿಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಎಚ್ಚರಿಕೆ ನೀಡಿದೆ.

ಶತಮಾನಗಳಿಂದ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಜೀವನ ಕಟ್ಟಿಕೊಂಡಿರುವ ಸಾವಿರಾರು ಕುಟುಂಬಗಳನ್ನು ಬೀದಿಪಾಲು ಮಾಡುವ ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೆ ಮುಂದಾದರೆ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ರಕ್ತಪಾತವಾದರೂ ಸರಿ, ಯೋಜನೆಯ ವಿರುದ್ಧ ಮಾಡು ಇಲ್ಲವೇ ಮಡಿ ಎನ್ನುವ ಹೋರಾಟವನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ.ಕಾಡುಮೃಗಗಳ ಜೊತೆಗೆ ಸೆಣಸಾಡಿ ಜೀವನ ಕಟ್ಟಿಕೊಂಡಿರುವ ನಮಗೆ ಸರ್ಕಾರದ ಜನವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಗೊತ್ತಿದೆ ಎಂದು ಸಂಘಟನೆಯ ಜಿಲ್ಲಾ, ತಾಲೂಕು ಅಧ್ಯಕ್ಷ ವಸಂತ ನಡ, ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ ಎಚ್ಚರಿಕೆ ನೀಡಿದ್ದಾರೆ.ರಾಜ್ಯದ ಮುಖ್ಯಮಂತ್ರಿಗಳು ಈ ಬಗ್ಗೆ ಸ್ಪಷ್ಟನೆ ನೀಡಬೇಕು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದ ಯಾವುದೇ ಸಚಿವರು ಜಿಲ್ಲೆಗೆ ಭೇಟಿ ನೀಡಿದರೂ ಕಪ್ಪು ಬಾವುಟ ಪ್ರದರ್ಶಿಸಬೇಕಾಗುತ್ತದೆ.ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ಬಲವಾಗಿ ವಿರೋಧಿಸಿದ ಕಸ್ತೂರಿ ರಂಗನ್ ವರದಿಯನ್ನು ಇದೀಗ ಏಕಾಏಕಿ ಜಾರಿಗೆ ಮುಂದಾಗಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.
ಗ್ಯಾರಂಟಿಗಳ ಆಧಾರದಲ್ಲಿ ಅಧಿಕಾರ ವಹಿಸಿಕೊಂಡು ಇದೀಗ ಮತ್ತೊಂದೆಡೆ ಜನರ ಜೀವನದ ಜೊತೆಗೆ ಚೆಲ್ಲಾಟವಾಡಿದರೆ ನಿಮ್ಮನ್ನು ಜನರು ಮೆಚ್ಚಲಾರರು ಎಂಬ ಸಾಮಾನ್ಯ ಜ್ಞಾನ ಅರಣ್ಯ ಸಚಿವರಿಗೆ ಇಲ್ಲವೇ? ಸ್ವಾತಂತ್ರ್ಯ ಲಭಿಸಿ 76 ವರ್ಷಗಳಾದರೂ ಇಂದಿಗೂ ಮೂಲಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್ ವಂಚಿತರಾದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಶತಮಾನಗಳಿಂದ ವಾಸಿಸುವ ಜನರಿಗೆ ಬದುಕುವ ಹಕ್ಕುಗಳನ್ನು ಖಾತ್ರಿಪಡಿಸಬೇಕಾದ ರಾಜ್ಯ ಸರ್ಕಾರ ಜನವಿರೋಧಿ ನೀತಿಗಳನ್ನು ಜಾರಿಗೆ ತಂದರೆ ಮುಂದಾಗುವ ಅಹಿತಕರ ಘಟನೆಗಳಿಗೆ ನಾವು ಹೊಣೆಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here