ಬೆಳ್ತಂಗಡಿ: ಜು.13ರಂದು ಗಮಕ ಕಲಾ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮತ್ತು ಬೆಳ್ತಂಗಡಿ ತಾಲೂಕು ಘಟಕಗಳ ವತಿಯಿಂದ ಇತ್ತೀಚೆಗೆ 70 ವಸಂತಗಳನ್ನು ಪೂರೈಸಿದ ಖ್ಯಾತ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿಗಳಿಗೆ ಗೌರವ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಬೆಳ್ತಂಗಡಿ ತಾಲೂಕು ಗಮಕ ಕಲಾ ಘಟಕದ ನೂತನ ಪದಾಧಿಕಾರಿಗಳಾದ ರಾಮಕೃಷ್ಣ ಭಟ್ ನಿನ್ನಿಕಲ್ಲು ಉಜಿರೆ ಮತ್ತು ಮೇಧಾ ಅಶೋಕ ಭಟ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಗಮಕ ಪರಿಷತ್ತಿನ ಅಧ್ಯಕ್ಷರಾದ ಪ್ರೊ.ಮೋಹನ ಕಲ್ಲೂರಾಯ, ಮಧೂರು, ಗೇರುಕಟ್ಟೆ ಇವರು ಫಲಪುಷ್ಪಗಳನ್ನು ನೀಡಿ ಗೌರವ ವಂದನೆಗಳನ್ನು ಸಲ್ಲಿಸಿದರು.
ರಾಮಕೃಷ್ಣ ಭಟ್ ನಿನ್ನಿಕಲ್ಲು ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರೊ.ಮೋಹನ ಕಲ್ಲೂರಾಯರು ಮಾತನಾಡಿ ಪ.ರಾ.ಶಾಸ್ತ್ರಿಗಳು ಗಮಕಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.ವ್ಯಾಖ್ಯಾನಕಾರರಾಗಿ ಖ್ಯಾತ ಸಾಹಿತಿಗಳಾದ ಶಾಸ್ತ್ರಿಗಳ ಆಗಮನದಿಂದ ಬೆಳ್ತಂಗಡಿ ತಾಲೂಕಿನಲ್ಲಿ ಗಮಕ ಕಲೆಗೆ ವಿಶೇಷವಾದ ಶೋಭೆ ಬಂದಿದೆ ಮತ್ತು ಜನ ಮನ್ನಣೆಯನ್ನು ಗಳಿಸುವಲ್ಲಿ ಪೂರಕವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾರದಾ ಶಾಸ್ತ್ರಿ, ಶಿಕ್ಷಕ ಗೌರೀಶ್ ಗಜಾನನ ಭಟ್, ಉಪನ್ಯಾಸಕಿ ಸುವರ್ಣ ಕುಮಾರಿ ಕಲ್ಲೂರಾಯ ಮತ್ತಿತರರು ಉಪಸ್ಥಿತರಿದ್ದರು.