ಉಜಿರೆ: ಮುಂಗಾರುಪೂರ್ವ ಸಿದ್ಧತೆ ಅಂಗವಾಗಿ ಶಾಸಕ ಹರೀಶ್ ಪೂಂಜ ಅವರ ಸೂಚನೆಯಂತೆ ಭಾನುವಾರ ಹಲವು ಕಡೆ ಕಿಂಡಿ ಅಣೆಕಟ್ಟುಗಳಲ್ಲಿ ಸ್ವಚ್ಛತೆ ಕಾರ್ಯಕ್ರಮ ನಡೆಯಿತು.
ಮಳೆಗಾಲದಲ್ಲಿ ನದಿ, ಹೊಳೆ, ಹಳ್ಳಗಳು ತುಂಬಿ ಹರಿಯುವ ಸಮಯ ಕೃಷಿ ನೀರಿನ ಉದ್ದೇಶಕ್ಕಾಗಿ ನಿರ್ಮಿಸಿರುವ ಕಿಂಡಿ ಅಣೆಕಟ್ಟುಗಳಲ್ಲಿ ನೀರಿನೊಂದಿಗೆ ತೇಲಿ ಬರುವ ಮರಮಟ್ಟು, ತ್ಯಾಜ್ಯ ಸಿಲುಕಿ ಅನೇಕ ಅನಾಹುತಗಳು ಉಂಟಾಗುತ್ತಿವೆ.
ಕಿಂಡಿ ಅಣೆಕಟ್ಟುಗಳಲ್ಲಿ ಮರಮಟ್ಟು,ತ್ಯಾಜ್ಯ ತುಂಬುವುದರಿಂದ ಕೃತಕ ನೆರೆ,ಸಮೀಪದ ತೋಟಗಳು ತ್ಯಾಜ್ಯಮಯವಾಗುವುದು. ನದಿ ನೀರು ಸರಾಗವಾಗಿ ಹರಿಯದೆ ತೋಟಗಳಿಗೆ ನುಗ್ಗುವುದು ಇತ್ಯಾದಿ ಸಂಭವಿಸುತ್ತದೆ.ಅಲ್ಲದೆ ಬೃಹತ್ ಗಾತ್ರದ ಮರಗಳು ಕಿಂಡಿ ಅಣೆಕಟ್ಟುಗಳಿಗೆ ಬಡಿದು ಹಾನಿಯು ಉಂಟಾಗುತ್ತದೆ.ಮರಮಟ್ಟು ಸಿಲುಕಿ ನೀರು ಸರಾಗವಾಗಿ ಹರಿಯದೆ ಕಿಂಡಿ ಅಣೆಕಟ್ಟು ಹಾಗೂ ನದಿ ಪ್ರದೇಶದಲ್ಲಿ ಸಾಕಷ್ಟು ಹೂಳು ತುಂಬುತ್ತದೆ. ನದಿಗಳಲ್ಲಿ ಹೂಳು ತುಂಬಿದರೆ ಅಂತರ್ಜಲ ಮಟ್ಟ ಕುಸಿತಗೊಂಡು ನೀರು ಕೂಡ ಬಹುಬೇಗ ಬತ್ತುತ್ತದೆ. ನದಿಗಳ ಪ್ರದೇಶದಲ್ಲಿ ಕಸಕಡ್ಡಿ ತ್ಯಾಜ್ಯಗಳು ತುಂಬಿದರೆ ಅವು ಬೇಸಿಗೆಯಲ್ಲಿ ಕಿಂಡಿ ಅಣೆಕಟ್ಟುಗಳಲ್ಲಿ ನೀರು ಸಂಗ್ರಹಿಸುವಗ ತೊಂದರೆ ಉಂಟಾಗುವುದರೊಂದಿಗೆ ನೀರು ಹರಿಯುವ ಕಾಲುವೆಗಳಿಗೂ ತುಂಬಿ ತೋಟಗಳಿಗೆ ಹರಿದು ಬರುತ್ತವೆ.
ಕಳೆದ ನಾಲ್ಕು ವರ್ಷಗಳಿಂದ ನದಿ ಪ್ರದೇಶಗಳಲ್ಲಿ ಕಿಂಡಿ ಅಣೆಕಟ್ಟುಗಳ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ಹೂಳು ತುಂಬಿದ ಕಾರಣ ಈ ಬಾರಿ ನೇತ್ರಾವತಿ ಸೇರಿದಂತೆ ಹಲವು ನದಿಗಳು ಮಾರ್ಚ್ ಮಧ್ಯ ಭಾಗದಲ್ಲಿ ಬತ್ತಿ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.
ಶಾಸಕರ ಸೂಚನೆ:
ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಬುಧವಾರ ಮುಂಗಾರು ಪೂರ್ವ ಸಿದ್ಧತೆ ಸಭೆ ನಡೆದಿದ್ದು, ಶಾಸಕರು ಪಂಚಾಯತಿ ಅಧ್ಯಕ್ಷರು ಹಾಗೂ ಪಿಡಿಒಗಳಿಗೆ ತಮ್ಮ ವ್ಯಾಪ್ತಿಯಲ್ಲಿರುವ ಕಿಂಡಿ ಅಣೆಕಟ್ಟುಗಳ ಪ್ರದೇಶದಲ್ಲಿ ಭಾನುವಾರದಂದು ಸಂಘ, ಸಂಸ್ಥೆಗಳ ಸಹಕಾರದಲ್ಲಿ ಮರಮಟ್ಟು, ತ್ಯಾಜ್ಯ ತೆರವುಗೊಳಿಸಿ ನದಿ ಪ್ರದೇಶವನ್ನು ಸ್ವಚ್ಛ ಮಾಡಲು ಸೂಚಿಸಿದ್ದರು.ಇಂತಹ ಮುನ್ನೆಚ್ಚರಿಕೆ ಕೈಗೊಂಡರೆ ಮಳೆಗಾಲದಲ್ಲಿ ಉಂಟಾಗಬಹುದಾದ ಸಂಭವನೀಯ ಅವಘಡಕ್ಕೆ ಕಡಿವಾಣ ಹಾಕಲು ಸಾಧ್ಯ ಇರುವ ಕಾರಣ ಇದು ಉತ್ತಮ ಸೂಚನೆಯಾಗಿದೆ.
ಕಿಂಡಿ ಅಣೆಕಟ್ಟುಗಳ ಸ್ವಚ್ಛತೆ:
ಶಾಸಕರ ಸೂಚನೆಯಂತೆ ಮುಂಡಾಜೆಯ ಕಡಂಬಳ್ಳಿ, ಕಾಪು ಕಿಂಡಿ ಅಣೆಕಟ್ಟುಗಳ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.ಮುಂಡಾಜೆ ಗ್ರಾಮ ಪಂಚಾಯಿತಿ, ಮುಂಡಾಜೆ ಪದವಿ ಪೂರ್ವ ವಿದ್ಯಾಲಯದ ಎನ್.ಎಸ್.ಎಸ್ ವಿದ್ಯಾರ್ಥಿಗಳು, ರೋಟರಿ ಸಮುದಾಯ, ಮುಂಡಾಜೆ ಯುವಕ ಮಂಡಲ, ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್, ವಿವೇಕಾನಂದ ಗ್ರಾಮ ವಿಕಾಸ ಸಮಿತಿ, ಮತ್ತಿತರ ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.ಜಿ.ಪಂ ಮಾಜಿ ಅಧ್ಯಕ್ಷ ಕೊರಗಪ್ಪ ನಾಯ್ಕ್, ಗ್ರಾಪಂ.ಅದ್ಯಕ್ಷೆ ರಂಜಿನಿ, ಸದಸ್ಯರಾದ ರಾಮಣ್ಣ ಶೆಟ್ಟಿ, ವಿಶ್ವನಾಥ ಶೆಟ್ಟಿ,ಗಣೇಶ ಬಂಗೇರ, ರವಿಚಂದ್ರ, ಸಿಬ್ಬಂದಿ ವರ್ಗ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾದ ಬಾಬು ಪೂಜಾರಿ, ಶೀನಪ್ಪ ಗೌಡ, ಪುರುಷೋತ್ತಮಶೆಟ್ಟಿ, ನಮಿತಾ, ಕಿಂಡಿ ಅಣೆಕಟ್ಟು ಸಮಿತಿ ಅಧ್ಯಕ್ಷ ವಿದ್ಯಾಧರ ಮರಾಠೆ, ಕಾರ್ಯದರ್ಶಿ ಶಶಾಂಕ್ ಮರಾಠೆ ಹಾಗೂ ಸ್ಥಳೀಯರು ಸಹಕರಿಸಿದರು.