ಉಜಿರೆ: “ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ರಾಜ್ಯದ ಹಾಗೂ ಜನತೆಯ ಬಗ್ಗೆ ವಿಶೇಷ ಗೌರವ ಹೊಂದಿದ್ದರು.ದೂರದೃಷ್ಟಿ ಹಾಗೂ ಬದ್ಧತೆಯ ಆಡಳಿತಕ್ಕೆ ಹೆಸರಾದ ಇವರು ಕನ್ನಡ ಮತ್ತು ಕರ್ನಾಟಕದ ಅಭಿವೃದ್ದಿ ಶಕೆಯ ಹರಿಕಾರ.ಶಿಕ್ಷಣ ಸಂಸ್ಥೆಗಳ ಸಹಿತ ಸಮಾಜಕ್ಕೆ ಉಪಯೋಗವಾಗುವ ಅನೇಕ ಸಂಸ್ಥೆಗಳನ್ನು ಆರಂಭಿಸಿದ ಅವರು 1915ರಲ್ಲೆ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ್ದರು.”ಎಂದು ಎಸ್ ಡಿ ಎಂ ಸ್ವಾಯತ್ತ ಕಾಲೇಜಿನ ಆಡಳಿತ ಕುಲಸಚಿವ ಪ್ರೊ.ಎಸ್.ಎನ್. ಕಾಕತ್ಕರ್ ಹೇಳಿದರು.
ದ.ಕ ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಧೀಮಂತ್-ಧೀಮಹಿ ವಸತಿ ನಿಲಯದ ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ನಾಲ್ವಡಿ ಕೃಷ್ಣರಾಜ ಒಡೆಯರ 139ನೇ ಜಯಂತ್ಯುತ್ಸವ ಆಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಮಾತನಾಡಿ “ನಾಲ್ವಡಿ ಕೃಷ್ಣರಾಜ ಒಡೆಯರ್ ವ್ಯಕ್ತಿಯಲ್ಲ ಶಕ್ತಿ, ಮಹಾನ್ ಚೇತನ, ಅದ್ವಿತೀಯ ಸಾಧಕರಾಗಿದ್ದರು.ಅವರ ಆಶಯದಂತೆ ಜಿಲ್ಲಾ ಸಾಹಿತ್ಯ ಪರಿಷತ್ತು ವಿದ್ಯಾರ್ಥಿ ಹಾಗೂ ಜನರ ಬಳಿ ಹೋಗಿ ಅನೇಕ ಕಾರ್ಯಕ್ರಮ ನೆರವೇರಿಸುವ ಪ್ರಯತ್ನ ನಡೆಸುತ್ತಿದೆ”ಎಂದರು.
ಉಪನ್ಯಾಸ ನೀಡಿದ ಎಸ್ ಡಿ ಎಂ ಪಪೂ ಕಾಲೇಜಿನ ಪ್ರಾಧ್ಯಾಪಕ ಡಾ.ರಾಜೇಶ್ ಬಿ.ಮಾತನಾಡಿ “ತಾಯಿ ನೀಡಿದ ಉತ್ತಮ ಸಂಸ್ಕಾರದಲ್ಲಿ ಮಾನವೀಯ ಮೌಲ್ಯ ಗಳೊಂದಿಗೆ ಬೆಳೆದ ವಿಶಿಷ್ಟ ವ್ಯಕ್ತಿ, ಕನ್ನಡ ಸಾಹಿತ್ಯ, ಸಂಸ್ಕೃತಿಯ ಸಂರಕ್ಷಕ.ಮಾನವೀಯ ಅಂತಃಕರಣ ಹೊಂದಿದ್ದ ಇವರು ಪ್ರಜೆಗಳ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು.ತಮ್ಮ ಸ್ವಂತ ಒಡವೆಗಳನ್ನು ಮಾರಾಟ ಮಾಡಿ ಪ್ರಜೆಗಳಿಗೆ ಅನುಕೂಲ ನೀಡುವ ಯೋಜನೆಗಳನ್ನು ಅನುಷ್ಠಾನಕ್ಕೆ ತಂದವರು.ಅನೇಕ ಕವಿಗಳಿಗೆ ಆಶ್ರಯದಾತ.ಅನಿಷ್ಟ ಪದ್ಧತಿಗಳನ್ನು ದೂರ ಮಾಡಿದವರು”ಎಂದರು.
ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಬಿ.ಸೋಮಶೇಖರ ಶೆಟ್ಟಿ ಮಾತನಾಡಿದರು.
ತಾಲೂಕು ಘಟಕ ಅಧ್ಯಕ್ಷ ಯದುಪತಿ ಗೌಡ ಸ್ವಾಗತಿಸಿದರು.ಕಾರ್ಯದರ್ಶಿ ರಾಮಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು