ಬೆಳ್ತಂಗಡಿ: ಕರ್ನಾಟಕ ಪ್ರದೇಶ ಜನತಾದಳ ಜಾತ್ಯಾತೀತ ವಿಧಾನ ಸಭಾ ಕ್ಷೇತ್ರದ ಚುನಾವಣಾ ಕಚೇರಿಯನ್ನು ಎ.26 ರಂದು ಬೆಳ್ತಂಗಡಿ ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟಿಸಲಾಯಿತು.
ಪಕ್ಷದ ತಾಲೂಕಿನ ಹಿರಿಯ ಮುಖಂಡ ಸಯ್ಯಿದ್ ಸಲೀಮ್ ತಂಙಳ್ ಸಬರಬೈಲು ಕಚೇರಿ ಉದ್ಘಾಟಿಸಿದರು.ಈ ವೇಳೆ ಸ್ವಾಗತಿಸಿ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಅಶ್ರಫ್ ಆಲಿಕುಂಞಿ, ನಮ್ಮ ಪಕ್ಷ ಬೆಳ್ತಂಗಡಿ ಸೇರಿದಂತೆ ಜಿಲ್ಲೆಯ 8 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.ಉಳ್ಳಾಲದಲ್ಲಿ ಅಭ್ಯರ್ಥಿಯನ್ನು ಅಪಹರಿಸಿ ಅನ್ಯಾಯ ಮಾಡಿದ್ದಾರೆ.ಈ ಬಗ್ಗೆ ರಾಜ್ಯದ ಮುಖಂಡರು ಚುನಾವಣೆ ಅಧಿಕಾರಿ ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ.ಉಳಿದಂತೆ 7 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಎಚ್.ಡಿ.ಕುಮಾರ ಸ್ವಾಮಿಯವರ ಆಶೀರ್ವಾದದಿಂದ ನನಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ದೊರೆತಿದೆ.ಹಿರಿಯರ ತ್ಯಾಗ ಆದರ್ಶವನ್ನು ಪಾಲಿಸಿಕೊಂಡು ಚುನಾವಣೆಗೆ ಅಣಿಯಾಗಿದ್ದೇನೆ.ವಿರೋಧ ಪಕ್ಷದ ಪ್ರತಿಸ್ಪರ್ಧಿಗಳು ತೇಜೋವಧೆ ಮಾಡುವ ಮೂಲಕ ನನಗೆ ಪ್ರಚಾರ ಮಾಡಿದ್ದಾರೆ. ಅದನ್ನೇ ಪ್ರಚಾರ ಅಸ್ತ್ರವಾಗಿಸಿಕೊಳ್ಳುತ್ತೇನೆ. ಗ್ರಾಮ ಗ್ರಾಮಗಳಲ್ಲಿ ನಾಯಕರುಗಳನ್ನು ಭೇಟಿ ಮಾಡಿ ವಿಶ್ವಾಸ ಪಡೆದಿದ್ದೇನೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷರ ಜಾಕೆ ಮಾಧವ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳ್ತಂಗಡಿಯಲ್ಲಿ ಜಾತ್ಯಾತೀತ ಜನತಾದಳಕ್ಕೆ ಶಕ್ತಿಯಿದೆ.ಎರಡು ಬಾರಿಯ ಕುಮಾರ ಸ್ವಾಮಿಯವರ ಆಡಳಿತವನ್ನು ಜನ ಮೆಚ್ಚಿದ್ದಾರೆ. ರಾಜ್ಯದ ಸರ್ವ ಜನಾಂಗವು ಒಂದಾಗಿ ಜೀವಿಸಬೇಕೆಂಬ ಆದರ್ಶ ಬೆಳೆಸಿಕೊಂಡಿರುವ ಜೆಡಿಎಸ್ ರಾಜ್ಯದಲ್ಲಿ 123 ಕ್ಷೇತ್ರದಲ್ಲಿ ಗೆಲುವಿನ ಗುರಿಯಿಟ್ಟು ಕಳೆದ ಒಂದು ವರ್ಷಗಳಿಂದ ಕಾರ್ಯೋನ್ಮುಖವಾಗಿದೆ. ರೈತರ, ಜನಸಾಮಾನ್ಯರ ಏಳಿಗೆಗೆ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಸ್ಪಷ್ಟ ಜಾತ್ಯಾತೀತ ನಿಲುವು ಇರುವ ಗ್ರಾಮೀಣ ಪತ್ರಕರ್ತ, ನಮ್ಮ ಅಭ್ಯರ್ಥಿ ಅಶ್ರಫ್ ಆಲಿಕುಂಞಿ ಅವರನ್ನು ಬೆಂಬಲಿಸಿ ಮತ ನೀಡಿ ಎಂದು ಕೇಳಿಕೊಂಡರು.
ಕಾರ್ಯಾಧ್ಯಕ್ಷ ರಾಮಾಚಾರಿ ಮುಂಡಾಜೆ, ಸುಳ್ಯ ಕ್ಷೇತ್ರದ ಉಪಾಧ್ಯಕ್ಷ ಸುರೇಶ್ ಕುಮಾರ್ ನಡ್ಕ, ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಬಂಡಸಾಲೆ, ಕಾರ್ಯದರ್ಶಿ ಶಾಹಿದ್ ಪಾದೆ, ಸಂಘಟನಾ ಕಾರ್ಯದರ್ಶಿ ಎಚ್.ಎನ್.ನಾಗರಾಜ್, ರಾಮಕೃಷ್ಣ ಗೌಡ, ಯುವ ನ್ಯಾಯವಾದಿ ನವಾಝ್ ಶರೀಫ್ ಕಕ್ಕಿಂಜೆ, ಸಂಜೀವ ಗೌಡ ನೆರಿಯ, ಚಂದ್ರಶೇಖರ ಮುಂಡಾಜೆ, ಜಲೀಲ್ ಜಾರಿಗೆ ಬೈಲು, ಹಕೀಂ ಧರ್ಮಸ್ಥಳ, ನಈಮ್ ಕೇಂಬರ್ಜೆ, ರಹಿಮತ್ ಬೆಳ್ತಂಗಡಿ, ಇಬ್ರಾಹಿಂ ಜಾರಿಗೆ ಬೈಲು ಉಪಸ್ಥಿತರಿದ್ದರು.
ಮೇ.1 ಕ್ಕೆ ಸಮಾವೇಶ:
ಮೇ 1 ರಂದು ಬೆಳ್ತಂಗಡಿಯಲ್ಲಿ ಜೆಡಿಎಸ್ ಸಮಾವೇಶ ನಡೆಯಲಿದ್ದು, ರಾಜ್ಯಾಧ್ಯಕ್ಷ ಇಬ್ರಾಹಿಂ, ರಾಜ್ಯ ವಕ್ತಾರೆ ನಝ್ಮಾ, ಭೋಜೇ ಗೌಡ, ಬಿ.ಎಮ್ ಫಾರೂಕ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.