ಉಜಿರೆ: “ತುಳುನಾಡಿನ ನಂಬಿಕೆ, ಆಚರಣೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಪಠ್ಯದ ಜೊತೆಗೆ ನೈತಿಕ ಮೌಲ್ಯಗಳನ್ನೂ ಬಿತ್ತುವ ಕೆಲಸ ಮಾಡುತ್ತಿದೆ” ಎಂದು ಎಸ್‌ಡಿಎಂ ತಾಂತ್ರಿಕ ಕಾಲೇಜಿನ ಸಿವಿಲ್ ವಿಭಾಗ ಮುಖ್ಯಸ್ಥ ಡಾ.ರವೀಶ್ ಪದುಮಲೆ ನುಡಿದರು.ಕಾಲೇಜಿನ ಇತಿಹಾಸ ವಿಭಾಗವು ಆಯೋಜಿಸಿದ್ದ ‘ ಬಿಸು ಹಬ್ಬ -2023’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
“ಬಿಸು ಹಬ್ಬದ ದಿನವು ತುಳುವರಿಗೆ ಮತ್ತು ತುಳುನಾಡಿಗೆ ವಿಶೇಷವಾದ ದಿನವಾಗಿದೆ.ನಮ್ಮ ಹಿರಿಯರ ನಂಬಿಕೆ, ಆಚರಣೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಮುಂದಿನ ತಲೆಮಾರುಗಳಿಗೆ ತಲುಪಿಸಲು ಇಂತಹ ಕಾರ್ಯಕ್ರಮಗಳು ಅತ್ಯಗತ್ಯ.ಸೂರ್ಯ ದೇವನನ್ನು ಆರಾಧಿಸುವ, ಸೌರಮಾನವನ್ನು ನಂಬುವ ತುಳುವರಿಗೆ ಬಿಸು ಹಬ್ಬವು ನಿಜವಾದ ಹೊಸ ವರ್ಷ.ಜಗತ್ತಿನ ಬೇರೆ ಭಾಗದಲ್ಲಿರದ ಎಷ್ಟೋ ಆಚಾರ ವಿಚಾರಗಳು ತುಳು ನಾಡಿನಲ್ಲಿ ಇನ್ನೂ ಜೀವಂತವಾಗಿವೆ” ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಕುಮಾರ್ ಹೆಗ್ಡೆ ಮಾತನಾಡಿ “ಕೇರಳ ಮತ್ತು ತುಳುನಾಡಿನ ಜನರಿಗೆ ಇಂದಿನಿಂದ ಹೊಸ ವರ್ಷದ ಆರಂಭ.ಪ್ರಕೃತಿಯ ಜೊತೆ ಮನುಷ್ಯನಲ್ಲೂ ಬದಲಾವಣೆಯಾಗಲಿ.ಬಿಸು ಹಬ್ಬವು ಸಂಸ್ಕೃತಿಯ ದ್ಯೋತಕವಾಗಿದ್ದು, ಪಾಶ್ಚಿಮಾತ್ಯ ಸಂಸ್ಕೃತಿಯ ದಾಸರಾಗುತ್ತಿರುವ ಕಾಲದಲ್ಲಿ ಪ್ರಾಚೀನ ನಂಬಿಕೆಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮಗಳು ಅಗತ್ಯ” ಎಂದರು.
ಬಿಸು ಹಬ್ಬ-2023ರ ಪ್ರಯುಕ್ತ ಕಾಲೇಜಿನ ವಿದ್ಯಾರ್ಥಿಗಳಿಗೆ ಸಂಸ್ಕೃತಿಯ ಹರಿವು ಮೂಡಿಸುವ ಉದ್ದೇಶದಿಂದ ವಿವಿಧ ಸ್ಪರ್ಧೆಗಳನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಸನ್ಮತಿ ಕುಮಾರ್, ಪ್ರಾಧ್ಯಾಪಕಿ ಅಭಿಗ್ನಾ ಉಪಾಧ್ಯಾಯ, ವಿದ್ಯಾರ್ಥಿ ಪ್ರತಿನಿಧಿ ಮನೋಜ್ ಮತ್ತು ಗೀತಾ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅನ್ನಪೂರ್ಣ ನಿರೂಪಣೆ ಮಾಡಿದರು.ಜಕ್ಷೀತಾ ಸ್ವಾಗತಿಸಿ, ಅಮಿತ ಧನ್ಯವಾದ ಸಮರ್ಪಣೆ ಮಾಡಿದರು.