ಮಡಂತ್ಯಾರು:ಸೇಕ್ರೆಟ್ ಹಾರ್ಟ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ.ಬೇಬಿ.ಎ. ಮತ್ತು ಕಾಲೇಜು ಕಚೇರಿ ಸಿಬ್ಬಂದಿ ಶ್ರೀ.ಫೆಲಿಕ್ಸ್ ವಾಸ್ ಇವರಿಗೆ ಬೀಳ್ಕೊಡುಗೆ ಸಮಾರಂಭವು ಮಾ.31 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ಫಾ.ಬೇಸಿಲ್ ವಾಸ್ ವಹಿಸಿ, ಈರ್ವರಿಗೂ ಸನ್ಮಾನಿಸಿ, ಅವರ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಆಶೀರ್ವದಿಸಿದರು.
ಪ್ರೊ. ಬೇಬಿರವರ ಕುರಿತಾಗಿ ಕನ್ನಡ ವಿಭಾಗದ ಉಪನ್ಯಾಸಕಿ ಪ್ರೊ. ರಾಜೇಶ್ವರಿ ಅಭಿನಂದನಾ ಭಾಷಣ ನೆರೆವೇರಿಸಿದರು. ವಿದ್ಯಾರ್ಥಿನಿಯರಾದ ಸೌಂದರ್ಯ ಮತ್ತು ಮುಫೀದ ಬಾನು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಶ್ರೀ.ಫೆಲಿಕ್ಸ್ ವಾಸ್ ರವರ ಕುರಿತಾದ ಅಭಿನಂದನಾ ಭಾಷಣವನ್ನು ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ.ಅಲೆಕ್ಸ್ ಐವನ್ ಸಿಕ್ವೆರಾ ನೆರವೇರಿಸಿದರು.
ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಪ್ರೊ.ಬೇಬಿ ಎ ಇವರು ತನ್ನ 34 ವರ್ಷಗಳ ಸುದೀರ್ಘ ಸೇವೆಯಲ್ಲಿ ತಾನು ಎದುರಿಸಿದ ಸವಾಲುಗಳು, ಮತ್ತು ಅವುಗಳನ್ನು ತಾನು ಹೇಗೆ ಎದುರಿಸಿದ್ದೇನೆ ಎಂಬುದರ ಕುರಿತು ಮಾತನಾಡಿ ಈ ಬದಲಾಗುತ್ತಿರುವ ಆಧುನಿಕ ಸಮಾಜದಲ್ಲಿ ವಿದ್ಯಾರ್ಥಿಗಳು ಮೌಲ್ಯಯುತ ಜೀವನವನ್ನು ನಡೆಸಲು ಅಣಿಯಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಜೋಸೆಫ್ ಎನ್.ಎಂ ಈರ್ವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ 2022-23ನೇ ಸಾಲಿನ ಅಂತಿಮ ಪದವಿ ಪರೀಕ್ಷೆಯಲ್ಲಿ ಪ್ರಥಮ ರಾಂಕ್ ನೊಂದಿಗೆ ಚಿನ್ನದ ಪದಕ ವಿಜೇತೆ ತಾಹಿರ ಬಾನು ಇವರಿಗೆ ಸ್ಕಾಲರ್ಶಿಪ್ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಸಂಯೋಜಕರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಅಧಿಕಾರಿಯಾದ ಪ್ರೊ.ಪ್ರಕಾಶ್ ಕ್ರಮಧಾರಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ಈಶ್ವರ್ ಗೌಡ ಧನ್ಯವಾದವಿತ್ತರು.
ವಿದ್ಯಾರ್ಥಿ ಶಾಹಿದ್ ಆಫ್ರೀದ್ ಕಾರ್ಯಕ್ರಮ ನಿರೂಪಿಸಿದರು.