ಬೆಳ್ತಂಗಡಿ : ರಾಜ್ಯ ಕಾಂಗ್ರೆಸ್ ಸಮಿತಿ ಸೂಚನೆಯಂತೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯೂ ಮಾ.3ರಂದು ಬೆಳ್ತಂಗಡಿ ತಾಲೂಕಿನಲ್ಲಿ ನಡೆಯಲಿದೆ. ಒಂದೇ ದಿನದಲ್ಲಿ 4 ಕಡೆಗಳಲ್ಲಿ ಸಭೆ ನಡೆಯಲಿದ್ದು ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ತಿಳಿಸಿದೆ.
ಮಾ.1ರಂದು ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಶಾಸಕ ವಸಂತ ಬಂಗೇರರು, “ಮುಂಬರುವ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಪ್ರತೀ ಕಡೆಯಲ್ಲಿಯೂ ಪಕ್ಷ ಸಂಘಟನೆಯಾಗುತ್ತಿದೆ. ಸಣ್ಣ ಪುಟ್ಟ ಭಿನ್ನಮತವನ್ನು ಶಮನ ಮಾಡಲಾಗಿದೆ. ಇದೀಗ ತಾಲೂಕಿನಲ್ಲಿ ಪ್ರಜಾಧ್ವನಿ ಯಾತ್ರೆ ಮಾ.3ರಂದು ನಡೆಯಲಿದೆ. ರಾಷ್ಟ್ರ, ರಾಜ್ಯ ನಾಯಕರು ಭಾಗವಹಿಸಲಿದ್ದಾರೆ. ಸಿದ್ಧರಾಮಯ್ಯರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಅನೇಕ ಜನಪರ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಗೃಹಜ್ಯೊತಿ, ಗೃಹಲಕ್ಷ್ಮೀಯಂತ ಯೋಜನೆಯನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಇದೆಲ್ಲವನ್ನು ಜನರ ಮುಂದಿಡುವ ಕೆಲಸ ಆಗುತ್ತಿದೆ” ಎಂದವರು ಹೇಳಿದರು.
ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ ಗೌಡ ಮಾತನಾಡಿ “ಮಾ.3ರಂದು ಒಂದೇ ದಿನ ನಾಲ್ಕು ಕಡೆ ಪ್ರಜಾಧ್ವನಿ ಯಾತ್ರೆ ಸಭೆಗಳು ನಡೆಯುವುದು. ಬೆಳಗ್ಗೆ 11 ಗಂಟೆಗೆ ಅಳದಂಗಡಿಯಲ್ಲಿ, ಮಧ್ಯಾಹ್ನ 1.30 ಕ್ಕೆ ಕೊಕ್ಕಡ, 3.30ಕ್ಕೆ ಉಜಿರೆ ಪೇಟೆಯಲ್ಲಿ ಹಾಗೂ ಸಂಜೆ 5 ಗಂಟೆಗೆ ತಣ್ಣೀರುಪಂತ ಅಂಬೇಡ್ಕರ್ ಭವನದ ಬಳಿ ಸಭೆ ನಡೆಯುವುದು. ನಾಯಕರಾದ ಬಿ.ಕೆ. ಹರಿಪ್ರಸಾದ್, ಎಂ.ಬಿ.ಪಾಟೀಲ್, ಸಲೀಮ್ ಅಹಮ್ಮದ್ ಸಹಿತ ಹಲವರು ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಮಾತನಾಡಿ, ಈ ಭಾರೀ ಕರಾವಳಿಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಕಾಂಗ್ರೆಸ್ ಯೋಜನೆ ರೂಪಿಸಿದೆ. ಕರಾವಳಿಗೆ ಈಗಾಗಲೇ ಪ್ರತ್ಯೇಕ ಪ್ರಣಾಳಿಕೆ, ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ. ಕಾರ್ಯಕ್ರಮದಲ್ಲಿ ಸುಮಾರು 12 ಸಾವಿರ ಮಂದಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್ ಉಪಸ್ಥಿತರಿದ್ದರು.