ಮಾತೃಶ್ರೀ ಡಾ| ಹೇಮಾವತಿ ವೀ. ಹೆಗ್ಗಡೆ ಯವರಿಂದ ವಾತ್ಸಲ್ಯ ಮನೆ ಹಸ್ತಾಂತರ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರ ಸಬಲೀಕರಣ ಮಾತ್ರವಲ್ಲದೇ ಅಸಹಾಯಕರಿಗೆ ವಾತ್ಸಲ್ಯ ಕಾರ್ಯಕ್ರಮದ ಮೂಲಕ ಮನೆ ನಿರ್ಮಾಣ ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಮಾತೃಶ್ರೀ ಡಾ| ಹೇಮಾವತಿ ವೀ. ಹೆಗ್ಗಡೆ ಯವರು ತಿಳಿಸಿ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನೆಕ್ಕೆರೆಯ ನಿವಾಸಿಯಾದ ಶಿವಣ್ಣ ಚಿರುಮನಾಯಿಲ್‌ರವರ ಕುಟುಂಬಕ್ಕೆ 1ಲಕ್ಷ ಮೌಲ್ಯದ ವಾತ್ಸಲ್ಯ ಮನೆಯನ್ನು ಹಸ್ತಾಂತರಿಸಿದರು.

ಪ್ರಸ್ತುತ ವಾತ್ಸಲ್ಯ ಕಾರ್ಯಕ್ರಮದಲ್ಲಿ ಒಟ್ಟು 60402 ಕುಟುಂಬಗಳ ಸರ್ವೇಕ್ಷಣೆ ನಡೆಸಿದ್ದು, ಈ ಪೈಕಿ 16821 ಫಲಾನುಭವಿಗಳನ್ನು ವಾತ್ಸಲ್ಯ ಕುಟುಂಬವೆಂದು ಆಯ್ಕೆ ಮಾಡಲಾಗಿದೆ. ಇದುವರೆಗೆ 12632 ಕುಟುಂಬಕ್ಕೆ ವಾತ್ಸಲ್ಯ ಕಿಟ್ ವಿತರಣೆ ಮಾಡಿದ್ದು ಪ್ರಸ್ತುತ ಈ ತಿಂಗಳು 4189 ಕುಟುಂಬಗಳಿಗೆ ವಾತ್ಸಲ್ಯ ಕಿಟ್ ವಿತರಣೆ ಮಾಡಲಾಗುತ್ತದೆ.

ವಾತ್ಸಲ್ಯ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಾತ್ಸಲ್ಯ ಕಿಟ್ ನೀಡುವುದರ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಕೂಡಾ ಒದಗಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಸರಿಸುಮಾರು 2 ಕೋಟಿ ಮೌಲ್ಯದ ಕಾಮಗಾರಿಗಳಿಗೆ ಮಂಜೂರಾತಿಯನ್ನು ಪಡೆದುಕೊಂಡು ಅನುಷ್ಠಾನಿಸಲಾಗಿದೆ. ಈ ಪೈಕಿ 245 ಮನೆ ರಚನೆ/ದುರಸ್ಥಿ ಕಾಮಗಾರಿ ಹಾಗೂ 214 ಶೌಚಾಲಯ/ ಸ್ನಾನಗೃಹ ರಚನೆ/ದುರಸ್ಥಿ ಕಾಮಗಾರಿ, ಸೋಲಾರ್/ ವಿದ್ಯುತ್ ಅಳವಡಿಕೆ/ದುರಸ್ಥಿ ಕಾಮಗಾರಿ, ಔಷಧಿ ಪೂರೈಕೆ, ಮಕ್ಕಳ ಶಿಕ್ಷಣಕ್ಕೆ ನೆರವು ನೀಡಲಾಗಿದೆ.

ವಾತ್ಸಲ್ಯ ಫಲಾನುಭವಿಗಳ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಧಾನ್ಯಗಳ ಬಳಕೆ ಮಾಡಿಕೊಂಡು ವಾತ್ಸಲ್ಯ ಮಿಕ್ಸ್ ತಯಾರಿಸಿ ಉತ್ತಮ ಆರೋಗ್ಯ ತಜ್ಞರ ಮೂಲಕ ಗುಣಮಟ್ಟ ಪರಿಶೀಲಿಸಿ ತಯಾರಿಸಲ್ಪಟ್ಟ ವಾತ್ಸಲ್ಯ ಮಿಕ್ಸ್ ಎಂಬ ಪೌಷ್ಠಿಕ ಆಹಾರವನ್ನು 1327 ಫಲಾನುಭವಿಗಳಿಗೆ ವಿತರಿಸಲಾಗುತ್ತಿದ್ದು ಫಲಾನುಭವಿಗಳ ನೆರವಿಗೆ 127 ಪೋಷಕರನ್ನು ಆಯ್ಕೆ ಮಾಡಿ ವಾತ್ಸಲ್ಯ ಮಿಕ್ಸ್ ತಯಾರಿಸಿ ಫಲಾನುಭವಿಗಳಿಗೆ ನೀಡಲು ಟಿಫೀನ್ ಬಾಕ್ಸ್ ಒದಗಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶರು ಡಾ. ಎಲ್ ಹೆಚ್ ಮಂಜುನಾಥ್, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರು ಡಿ.ಎ ರೆಹಮಾನ್, ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಉಡುಪಿ ಪ್ರಾದೇಶಿಕ ನಿರ್ದೇಶಕರಾದ ವಸಂತ್ ಸಾಲಿಯಾನ್, ಜಿಲ್ಲಾ ನಿರ್ದೇಶರಾದ ಸತೀಶ್ ಶೆಟ್ಟಿ, ತಾಲೂಕು ಯೋಜನಾಧಿಕಾರಿ ಸುರೇಂದ್ರ ಕುಮಾರ್ ಉಪಸ್ಥಿತರಿದ್ದು, ತಾಲೂಕು ಯೋಜನಾಧಿಕಾರಿ ಸ್ವಾಗತಿಸಿ ಜಿಲ್ಲಾ ನಿರ್ದೇಶಕರು ವಂದಿಸಿದರು.

LEAVE A REPLY

Please enter your comment!
Please enter your name here