ಉಜಿರ: ಬೆಂಕಿ ಅನಾಹುತ ಸಂಭವಿಸಿದಾಗ ಆಪ್ತಮಿತ್ರರಂರೆ ಧಾವಿಸಿ ಜನರ ಪ್ರಾಣ-ಆಸ್ತಿಪಾಸ್ತಿ ಹಾನಿ ತಪ್ಪಿಸುವಂತಹ ಅಗ್ನಿಶಾಮಕದವರ ಕಾರ್ಯ ಶ್ಲಾಘನೀಯವಾದುದು ಎಂದು ಶ್ರೀ ಧ.ಮಂ.ಶಿಕ್ಷಣಸಂಸ್ಥೆ(ರಿ) ಉಜಿರೆ ಇಲ್ಲಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ವೈ.ಹರೀಶ್ ತಿಳಿಸಿದರು. ಅವರು ಫೆ.23 ರಂದು ಶ್ರೀ ಧ.ಮಂ.ಶಿಕ್ಷಣಸಂಸ್ಥೆ( ರಿ) ಉಜಿರೆ ಹಾಗೂ ಅಗ್ನಿಶಾಮಕದಳ ಬೆಳ್ತಂಗಡಿ ಇವುಗಳ ಜಂಟಿ ಆಶ್ರಯದಲ್ಲಿ ವಿಪತ್ತು ನಿರ್ವಹಣಾ ದಿನದ ಅಂಗವಾಗಿ ಉಜಿರೆಯ ಶಾಲಾ ಕ್ರೀಡಾಂಗಣದಲ್ಲಿ ಅಗ್ನಿ ಅವಘಡಗಳ ಅರಿವು ಮತ್ತು ಅಗ್ನಿ ಅನಾಹುತಗಳ ತಡೆಗಟ್ಟುವಿಕೆ ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಅಗ್ನಿಶಾಮಕ ಠಾಣೆ ಬೆಳ್ತಂಗಡಿ ಇಲ್ಲಿನ ಉಸ್ಮಾನ್ ಪ್ರಾತ್ಯಕ್ಷಿಕೆಯೊಂದಿಗೆ ಅಗ್ನಿದುರಂತಗಳಿಂದ ಆಗಬಹುದಾದ ಅನಾಹುತಗಳನ್ನು ಎದುರಿಸುವ ವಿಧಾನಗಳನ್ನು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಕೆ.ನೀಲಯ್ಯ ಗೌಡ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಬೆಳ್ತಂಗಡಿ ಇವರು ಆಗಮಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಂ. ಆಂಗ್ಲಮಾಧ್ಯಮ ಶಾಲೆ (ಸಿಬಿಎಸ್‌ಇ) ಉಜಿರೆ ಇಲ್ಲಿನ ಪ್ರಾಂಶುಪಾಲ ಮನಮೋಹನ್ ನಾಯ್ಕ ವಹಿಸಿದ್ದರು. ಕಾರ್ಯಕ್ರಮವು ಕು.ಬ್ರಾಹ್ಮಿ ಮತ್ತು ತಂಡದವರ ಪ್ರಾರ್ಥನೆಯೊಂದಿಗೆ ಆರಂಭಗೊಂಡು, ಶಿಕ್ಷಕಿ ಶ್ರೀಮತಿ ಸೃಜನಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಂತರ ಆಗ್ನಿಶಾಮಕ ಇಲಾಖೆಯಿಂದ ಪ್ರಾತ್ಯಕ್ಷಿಕೆ ನಡೆಯಿತು. ಸಾವಿರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡರು.