ಬೆಳ್ತಂಗಡಿ: ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ನೀಡಲಾಗುವ ಪ್ರತಿಷ್ಠಿತ ‘ಮೈಸೂರು ದಿಗಂತ’ರಾಜ್ಯ ಪ್ರಶಸ್ತಿಗೆ ‘ಪ್ರಜಾವಾಣಿ’ ದಿನಪತ್ರಿಕೆಯ ಪತ್ರಕರ್ತ ಪ್ರದೀಶ್ ಮರೋಡಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಸದಾಶಿವ ಶೆಣೈ ಕೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಪರಿಗಣಿಸಿ ನಾಲ್ಕು ವರ್ಷಗಳ (2019, 2020, 2021 ಮತ್ತು 2022) ರಾಜ್ಯದ ವಿವಿಧ ಪತ್ರಕರ್ತರನ್ನು ಮಾಧ್ಯಮ ವಾರ್ಷಿಕ ಪ್ರಶಸ್ತಿ ಮತ್ತು ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇತರ ಸಚಿವರು ಹಾಗೂ ಗಣ್ಯರನ್ನು ಆಹ್ವಾನಿಸಿ ಶೀಘ್ರದಲ್ಲೇ ಸಾಧಕರಿಗೆ ಪ್ರದಾನ ಮಾಡಲಾಗುತ್ತದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಸದಾಶಿವ ಶೆಣೈ ಕೆ. ಅವರು ತಿಳಿಸಿದ್ದಾರೆ.
ಅತ್ಯುತ್ತಮ ಮಾನವೀಯ ಸಮಸ್ಯೆಯ ಲೇಖನಕ್ಕೆ ನೀಡಲಾಗುವ 2020ನೇ ಸಾಲಿನ ‘ಮೈಸೂರು ದಿಗಂತ’ ದತ್ತಿ ಪ್ರಶಸ್ತಿಗೆ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಹಾರೊದ್ದು ನಿವಾಸಿ ಪ್ರದೀಶ್ ಮರೋಡಿ ಆಯ್ಕೆಯಾಗಿದ್ದಾರೆ.
2020ರ ಜೂನ್ ತಿಂಗಳಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ‘ಕೇಳುತ್ತಿಲ್ಲ ಮಲೆಮಕ್ಕಳ ಅಳಲು’ ಲೇಖನವು ಈ ಪ್ರಶಸ್ತಿಗೆ ಆಯ್ಕೆಯಾಗಿದೆ. ಮೈಸೂರು ದಿಗಂತ ಪತ್ರಿಕೆ ಸ್ಥಾಪಿಸಿರುವ ‘ಮೈಸೂರು ದಿಗಂತ’ ದತ್ತಿ ಪ್ರಶಸ್ತಿಯು ರೂ.10,000 ನಗದು ಬಹುಮಾನ, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಮಾಧ್ಯಮ ಕ್ಷೇತ್ರದಲ್ಲಿ ಒಂದೂವರೆ ದಶಕದಿಂದ ಕರ್ತವ್ಯ ನಿರ್ವಹಿಸುತ್ತಿರುವ ಪ್ರದೀಶ್ ಮರೋಡಿ ಅವರು ಬೆಳ್ತಂಗಡಿಯ ಸುದ್ದಿಬಿಡುಗಡೆ ವರದಿಗಾರರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ಕೆಲ ವರ್ಷ ಟಿವಿ ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2013ರಿಂದ ಪ್ರಜಾವಾಣಿ ಪತ್ರಿಕೆಯಲ್ಲಿ ಮೈಸೂರಿನಲ್ಲಿ, ಪ್ರಸ್ತುತ ಮಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅವರು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ 2020ನೇ ಸಾಲಿನ ಪ್ರತಿಷ್ಠಿತ ‘ಪ.ಗೋ. ಪ್ರಶಸ್ತಿ’ಗೂ ಭಾಜನರಾಗಿದ್ದರು.