ಬೆಳ್ತಂಗಡಿ: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ದ್ವಿತೀಯ ಹಂತದ ಕಾಮಗಾರಿ ಆರಂಭಗೊಂಡಿದೆ. ಒಟ್ಟು 700 ಕೋಟಿ ರೂ.ಗಿಂತ ಅಧಿಕ ಮೊತ್ತದಲ್ಲಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ಹೆದ್ದಾರಿ ಅಭಿವೃದ್ಧಿಗೊಳ್ಳಲಿದೆ. ಪ್ರಸ್ತುತ ಅಗಲ ಕಿರಿದಾಗಿರುವ ಈ ಹೆದ್ದಾರಿ ವ್ಯಾಪ್ತಿಯಲ್ಲಿ ವಿಪರೀತ ವಾಹನ ದಟ್ಟಣೆ ಇದ್ದು ಸಂಚಾರಕ್ಕೆ ಬವಣೆ ಪಡುವ ಸ್ಥಿತಿ ಇದೆ. ಗುರುವಾಯನಕೆರೆಯಿಂದ ಉಜಿರೆ ತನಕ ಸುಮಾರು 15 ಕಿಮೀ. ದೂರವನ್ನು ಸಾಗುವುದು ಕಷ್ಟದ ಕೆಲಸವಾಗಿದೆ.
ನೂತನ ಸಮೀಕ್ಷೆ ಪ್ರಕಾರ ಹೆಚ್ಚಿನ ಭಾಗಗಳಲ್ಲಿ ರಸ್ತೆ ನೇರಗೊಳ್ಳಲಿದ್ದು ಪ್ರಸ್ತುತ ಇರುವ 35 ಕಿಮೀ ವ್ಯಾಪ್ತಿ 33.1 ಕಿಮೀ.ಗೆ ಸೀಮಿತಗೊಳ್ಳಲಿದೆ. ರಸ್ತೆ ಅಗಲೀಕರಣ ಕಾಮಗಾರಿಗೆ ಜೈನ್ ಅಂಡ್ ಕೋ ಕಂಪನಿಗೆ 385 ಕೋಟಿ ರೂ. ಟೆಂಡರ್ ಸಿಕ್ಕಿದ್ದು ಇದೀಗ ರಸ್ತೆ ಅಭಿವೃದ್ಧಿಯ ಪೂರಕ ಕಾಮಗಾರಿಗಳು ಆರಂಭವಾಗಿವೆ. ಪುಂಜಾಲಕಟ್ಟೆಯಿಂದ ಕಾಮಗಾರಿ ಆರಂಭಗೊಂಡಿದ್ದು ರಸ್ತೆ ವ್ಯಾಪ್ತಿಯ ಸರಕಾರಿ ಸ್ಥಳಗಳಲ್ಲಿರುವ ಗಿಡ ಗಂಟಿ ತೆರವು ಇತರ ಕೆಲಸಗಳು ಆರಂಭವಾಗಿವೆ.
ಹೆದ್ದಾರಿ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಕಳೆದು ಸುಮಾರು ಎರಡು ತಿಂಗಳಿನಿಂದ ಬಿರುಸಿನ ಮರು ಸಮೀಕ್ಷೆಗಳು ನಡೆದಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಸಮೀಕ್ಷೆ ನಡೆಸುವ ಹಲವಾರು ತಂಡಗಳು ಕಂಡುಬರುತ್ತವೆ. ರಸ್ತೆ ವ್ಯಾಪ್ತಿಯಲ್ಲಿ ಸೆಂಟ್ರಲ್ ಮಾರ್ಕಿಂಗ್ ಸೇರಿದಂತೆ ಪೂರ್ಣ ಪ್ರಮಾಣದ ರಸ್ತೆ ವ್ಯಾಪ್ತಿ ಗುರುತಿಸಲಾಗಿದೆ.
ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ರಸ್ತೆ ಅಭಿವೃದ್ಧಿ ವೇಳೆ ತೆರವುಗೊಳ್ಳಬೇಕಾದ ಮರಗಳ ಸಮೀಕ್ಷೆ ಅಂತಿಮ ಹಂತವನ್ನು ತಲುಪಿದೆ. ತೆರವುಗೊಳ್ಳಬೇಕಾದ ಕಟ್ಟಡ,ಖಾಸಗಿ ಸ್ಥಳಗಳನ್ನು ಗುರುತಿಸಲಾಗಿದ್ದು ಇದರ ಕೆಲಸಗಳು ಪ್ರಗತಿಯಲ್ಲಿವೆ.