ಬೆಳ್ತಂಗಡಿ: 2006 ರ ನಂತರ ನೇಮಕಗೊಂಡ ಸರಕಾರಿ, ಅರೆ ಸರಕಾರಿ, ನಿಗಮಮಂಡಳಿಯ ನೌಕರರು ಹಳೆ ಪಿಂಚಣಿ ಗಾಗಿ ಒತ್ತಾಯಿಸಿ,ಡಿಸೆಂಬರ್ 19 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ‘ಮಾಡಿ ಇಲ್ಲವೇ ಮಡಿ’ ಅನಿರ್ದಿಷ್ಟಾವಧಿಯ ಹೋರಾಟ ಕೈಗೊಳ್ಳಲಾಗುವುದು, ಬೆಳ್ತಂಗಡಿ ತಾಲೂಕಿನಿಂದಲೂ ಸುಮಾರು ನೂರ ಐವತ್ತಕ್ಕೂ ಅಧಿಕ ನೌಕರರು ಭಾಗವಹಿಸಲಿದ್ದಾರೆ ಎಂದು ತಾಲೂಕು ಎನ್.ಪಿ.ಎಸ್.ನೌಕರರ ಸಂಘದ ಅಧ್ಯಕ್ಷ ಸುರೇಶ್ ಮಾಚಾರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈಗ ಜಾರಿಯಲ್ಲಿರುವ ಹೊಸ ಪಿಂಚಣಿ ಯೋಜನೆಯು ಸಂಪೂರ್ಣವಾಗಿ ಶೇರು ಮಾರುಕಟ್ಟೆ ಆಧಾರಿತವಾಗಿದ್ದು,ಅಭದ್ರತೆಯಿಂದ ಕೂಡಿದ್ದು,ಇದರಿಂದ ನೌಕರರಿಗೆ ಯಾವುದೇ ರೀತಿಯಲ್ಲಿ ಪ್ರಯೋಜನವಿಲ್ಲ.ಸರಕಾರದ ವಂತಿಗೆ ಹಣ ಮತ್ತು ನೌಕರರ ಕಟಾವಿನ ಹಣಕ್ಕೆ ಯಾವುದೇ ಭದ್ರತೆ ಇರುವುದಿಲ್ಲ. ಈ ಬಗ್ಗೆ ಕಳೆದ ಆರು ವರ್ಷಗಳಿಂದ ಸಂಘವು ನಿರಂತರವಾಗಿ ಹೋರಾಟ ಮಾಡುತ್ತಿರುವ ಫಲವಾಗಿ ಸರಕಾರ ಡಿ.ಸಿ.ಆರ್.ಜಿ. ಸೌಲಭ್ಯ,ಸರಕಾರದ ವಂತಿಗೆ ಶೇ 14 ಕ್ಕೆ ಏರಿಕೆ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಮಾಡಲು ಮುಂದಾಗಿದೆ.ಆದರೆ ಇದನ್ನು ಯಾವುದೇ ನೌಕರರು ಒಪ್ಪಲು ತಯಾರಿಲ್ಲ,ಯಾಕೆಂದರೆ ಎನ್.ಪಿ.ಎಸ್.ಅಡಿಯಲ್ಲಿ ನಿವೃತ್ತಿ ಯಾಗುತ್ತಿರುವ ನೌಕರರ ನಿವೃತ್ತಿ ವೇತನ ಕೇವಲ 900 ರೂಪಾಯಿಯಿಂದ 1500 ದಷ್ಟು ಮಾತ್ರ ಸಿಗುತ್ತಿದೆ.ಇದರಿಂದ ನಿವೃತ್ತಿಯ ನಂತರದ ನೌಕರನ ಬದುಕು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಅಲ್ಲದೇ ಸುಪ್ರೀಂ ಕೋರ್ಟ್ ಕೂಡಾ ‘ ಪಿಂಚಣಿ ನೌಕರರಿಗೆ ನೀಡುವ ಭಿಕ್ಷೆ ಅಲ್ಲ,ಅದು ಅವರ ಹಕ್ಕು’ ಎಂದಿದೆ.
ಈಗಾಗಲೇ ರಾಜಸ್ಥಾನ, ಛತ್ತೀಸ್ಗಢ, ಜಾರ್ಖಂಡ್, ಪಂಜಾಬ್ ನಲ್ಲಿ ಈ ಯೋಜನೆಯನ್ನು ರದ್ದು ಪಡಿಸಿ,ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿದೆ.ಸಿಕ್ಕಿಂ, ಆಂಧ್ರಪ್ರದೇಶ ದಲ್ಲಿ ರದ್ದತಿಗೆ ಸಮಿತಿ ರಚಿಸಲಾಗಿದೆ. ಇತ್ತೀಚೆಗೆ ಚುನಾವಣೆ ನಡೆದ ಹಿಮಾಚಲದಲ್ಲೂ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ ಮೊದಲ ದಿನದ ಕ್ಯಾಬಿನೆಟ್ ನಲ್ಲೇ ಎನ್.ಪಿ.ಎಸ್.ರದ್ದು ಪಡಿಸುವ ಭರವಸೆ ನೀಡಿದ್ದು,ಅದರಂತೆ ಅಲ್ಲಿನ ಚುನಾವಣೆಯ ಫಲಿತಾಂಶದಲ್ಲಿ ಈ ವಿಷಯ ಪ್ರಭಾವ ಬೀರಿದ್ದ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಬಹುವಾಗಿ ಚರ್ಚೆಯಾಗಿತ್ತು.ಆದ್ದರಿಂದ ಕರ್ನಾಟಕ ರಾಜ್ಯ ಸರಕಾರವೂ ಕೂಡಾ ಎನ್.ಪಿ.ಎಸ್.ರದ್ದುಗೊಳಿಸಿ ಹಳೆ ಪಿಂಚಣಿ ಜಾರಿಗೆ ತರಲು ನೌಕರರು ರಾಜ್ಯಾದ್ಯಂತ ವಿವಿಧ ರೀತಿಯಲ್ಲಿ ಹೋರಾಟ ನಡೆಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.