ಉಜಿರೆ: ಗ್ರಾಮ ಪಂಚಾಯಿತಿ ಜನಸ್ಪಂದನ ಕಾರ್ಯಕ್ರಮ

0

ಉಜಿರೆ: ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಉಜಿರೆ ಗ್ರಾಮ ಪಂಚಾಯಿತಿಯಲ್ಲಿ ಜನಸ್ಪಂದನ ಕಾರ್ಯಕ್ರಮ ಡಿ. 8 ರಂದು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷೆ ಉಷಾಕಿರಣ ಕಾರಂತ್, ಉಪಾಧ್ಯಕ್ಷ ರವಿಕುಮಾರ್ ಬರಮೇಲು, ತಹಸೀಲ್ದಾರ್ ಪೃಥ್ವಿ ಸಾನಿಕಂ, ತಾಪಂ ಇಒ ಭವಾನಿ ಶಂಕರ್, ಪಿಡಿಒ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ, ಕಾರ್ಯದರ್ಶಿ ಶ್ರವಣ್ ಕುಮಾರ್, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಪ.ಜಾತಿ.,ಪ.ಪಂ.ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹಾಗೂ ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ ಮಾಡಲಾಯಿತು.

ಉಜಿರೆ ಗ್ರಾಮದಲ್ಲಿ ಜನಸಂಖ್ಯೆ ಹೆಚ್ಚಿದ್ದು ಮುಂದೆ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ಪ್ರವೀಣ್ ಫೆರ್ನಾಂಡಿಸ್ ಹೇಳಿದರು. ಇದರ ಬಗ್ಗೆ ಸಾಧಕ ಬಾಧಕಗಳನ್ನು ಚರ್ಚಿಸಿ ಜನರ ಅಭಿಪ್ರಾಯ ಸಂಗ್ರಹಿಸಿ, ವಿಶೇಷ ಗ್ರಾಮಸಭೆ ಕರೆಯುವ ಮೂಲಕ ಮುಂದೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.

ಇಚ್ಚಿಲ-ಗುರಿಪಳ್ಳ ಸಂಪರ್ಕ ರಸ್ತೆಗೆ ಸ್ಥಳೀಯರೊಬ್ಬರು ಬೇಲಿ ಹಾಕಿದ್ದು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಈ ಸ್ಥಳದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಪಟ್ಟಾ ಜಾಗದಲ್ಲಿದ್ದು ಈ ಬಗ್ಗೆ ಅವರನ್ನು ಮನವೊಲಿಸಿ ದುರಸ್ತಿ ಕಾರ್ಯ ಕೈಗೊಳ್ಳಲು ಕ್ರಮ ವಹಿಸುವುದಾಗಿ ಶಾಸಕರು ಹೇಳಿದರು.

ಉಜಿರೆ ದ್ವಾರದಿಂದ ಬೆಳಾಲು ಕ್ರಾಸ್ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥ ಜಗದೀಶ್ ಪ್ರಸಾದ್ ಹೇಳಿದರು.

ಗ್ರಾ.ಪಂ. ನಲ್ಲಿ ಮನೆ ತೆರಿಗೆ, ಭೂಮಿ ತೆರಿಗೆ ಪಾವತಿಸದವರಿಗೆ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗುವುದಿಲ್ಲ ಎಂದು ಗ್ರಾಮಸ್ಥ ಬಾಲಸುಬ್ರಹ್ಮಣ್ಯ ಭಟ್ ಬೊಳಂಬಿ ಆರೋಪಿಸಿದರು. ನಮ್ಮ ಪಂಚಾಯಿತಿಯಲ್ಲಿ ಶೇ.95 ರಷ್ಟು ತೆರಿಗೆ ವಸೂಲಾತಿ ನಡೆದಿದೆ ಎಂದು ಪಿಡಿಒ ಮಾಹಿತಿ ನೀಡಿದರು.

ಸರ್ವೇ ಇಲಾಖೆಗೆ ಹಿರಿಯ ವ್ಯಕ್ತಿಗಳಿಗೆ ಹೋಗಲು ಎರಡು ಮಹಡಿಯ ಮೆಟ್ಟಿಲು ಹತ್ತಲು ಕಷ್ಟವಾಗುತ್ತದೆ ಎಂದು ಹಿರಿಯ ನಾಗರಿಕ ಉಮೇಶ್ ತಮ್ಮ ನೋವನ್ನು ಶಾಸಕರಲ್ಲಿ ತಿಳಿಸಿದರು.ಸರ್ವೇ ಇಲಾಖೆಗೆ ಲಿಫ್ಟ್ ವ್ಯವಸ್ಥೆ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಹೊಸ ಬಸ್ ನಿಲ್ದಾಣ ಕಟ್ಟಡದ ಮೊದಲ ಮಹಡಿಯನ್ನು ಕಂದಾಯ ಇಲಾಖೆಗೆ ಮೀಸಲಿರಿಸಲಾಗಿದೆ ಇದರಲ್ಲಿ ಸುಸಜ್ಜಿತವಾದ ಲಿಫ್ಟ್ ವ್ಯವಸ್ಥೆ ಅಳವಡಿಕೆ ಮಾಡಲಾಗುತ್ತದೆ ಎಂದು ಶಾಸಕರು ಮಾಹಿತಿ ನೀಡಿದರು
ಡಿ‌. 25ರ ಒಳಗೆ ಅಧಿಕೃತ 94ಸಿ ಕಡತಗಳ ವಿಲೇವಾರಿ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಶಾಸಕರು ಮಾಹಿತಿ ನೀಡಿದರು.

ಪ್ರತೀ ಆರು ತಿಂಗಳಿಗೊಮ್ಮೆ ಗ್ರಾಮ ಸಭೆಗಳು ನಡೆಯುತ್ತಿದೆ ಆದರೆ ಹೆಚ್ಚಿನ ಇಲಾಖಾಧಿಕಾರಿಗಳು ಭಾಗವಹಿಸುವುದಿಲ್ಲ ಎಂದು ಸಭೆಯಲ್ಲಿ ಗ್ರಾಮಸ್ಥರು ಹೇಳಿದಾಗ ಹೋಬಳಿ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಗ್ರಾಮ ಸಭೆಗೆ ಬಿಡುವು ಮಾಡಿಕೊಂಡು ಭಾಗವಹಿಸಬೇಕು ಎಂದು ಮೇಲಾಧಿಕಾರಿಗಳಿಗೆ ಸೂಚಿಸಿರುವುದಾಗಿ ಶಾಸಕರು ಪ್ರತಿಕ್ರಿಯಿಸಿದರು.

ಮುಂಡತ್ತೋಡಿ ಎಸ್. ಸಿ. ಕಾಲೋನಿ ರಸ್ತೆ ಹದಗೆಟ್ಟಿದೆ ಸಮಾಜ ಕಲ್ಯಾಣ ಇಲಾಖೆಯ ಮೂಲಕ ರಸ್ತೆಯ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಜಿ.ಪಂ.ಮಾಜಿ ಸದಸ್ಯೆ ಸಿ.ಕೆ.ಚಂದ್ರಕಲಾ ಹೇಳಿದರು. ಅನುದಾನ ಕೊರತೆಯಿದ್ದ ಕಳೆದ ಅವಧಿಯಾಗೆ ರಸ್ತೆ ದುರಸ್ತಿಯ ಸಂಪೂರ್ಣ ಭರವಸೆ ನೀಡಲು ಸಾಧ್ಯವಿಲ್ಲ ಆದರೆ ಸಮಾಜ ಕಲ್ಯಾಣ ಇಲಾಖೆ ಅನುದಾನ ಮೀಸಲಿರಿಸಿದರೆ ದುರಸ್ತಿ ಕಾರ್ಯ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.

LEAVE A REPLY

Please enter your comment!
Please enter your name here