


ಮಂಗಳೂರು: ದೀರ್ಘಕಾಲದವರೆಗೆ ಕ್ಲೇಮ್ ಮಾಡದಿರುವ ಠೇವಣಿಗಳನ್ನು ಗುರುತಿಸಿ, ಅವುಗಳನ್ನು ಖಾತೆದಾರರಿಗೆ ಅಥವಾ ಅವರ ಕಾನೂನುಬದ್ಧ ವಾರಸುದಾರರಿಗೆ ಹಸ್ತಾಂತರಿಸುವ ಉದ್ದೇಶದಿಂದ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ‘ಅನ್ಕ್ಲೇಮ್ಡ್ ಡೆಪಾಸಿಟ್’ ಜಾಗೃತಿ ಅಭಿಯಾನ ಚಾಲನೆ ನೀಡಲಾಯಿತು. ಅಭಿಯಾನಕ್ಕೆ ಜಿಲ್ಲಾ ಪಂಚಾಯತ್ ಉಪಕಾರ್ಯನಿರ್ವಾಹಕ ಅಧಿಕಾರಿ ಜಯಲಕ್ಷ್ಮಿ ಚಾಲನೆ ನೀಡಿ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ಲೇಮ್ ಮಾಡದೇ ಒಟ್ಟು 633960 – ಖಾತೆಗಳಲ್ಲಿ 142.79 ಕೋಟಿ ರೂಪಾಯಿ ಇದ್ದು ,ಈ ಅಭಿಯಾನದ ಪ್ರಯೋಜನವನ್ನು ಸೂಕ್ತ ವಾರಸುದಾರರು ಪಡೆಯಲು ಸಹಕಾರಿ ಎಂದು ತಿಳಿಸಿದರು.


ಅಭಿಯಾನದಲ್ಲಿ ಬ್ಯಾಂಕರರಿಗೆ ವೇಗವಾಗಿ ಕ್ಲೇಮ್ ಇತ್ಯರ್ಥ ಮಾಡುವ ವಿಧಾನ, ಅಗತ್ಯ ದಾಖಲೆಗಳು, ಹಾಗೂ ಸರ್ಕಾರದ ಮಾರ್ಗಸೂಚಿಗಳ ಕುರಿತು ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಕವಿತಾ ಎನ್. ಶೆಟ್ಟಿ ಮಾಹಿತಿ ನೀಡಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಈ ಅಭಿಯಾನದ ಭಾಗವಾಗಿ ಒಟ್ಟು 359 ಖಾತೆಗಳನ್ನು ಕ್ಲೇಮ್ ಮಾಡಿ, ರೂ. 1.50 ಕೋಟಿ ಹಣವನ್ನು ಸಂಬಂಧಿಸಿದ ಮಾಲೀಕರು/ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.
ಹಣಕಾಸು ಸಚಿವಾಲಯದ ಮಾರ್ಗಸೂಚಿಯಂತೆ, ದೇಶಾದ್ಯಂತ ಈ ‘ನಿಮ್ಮ ಹಣ ನಿಮ್ಮ ಹಕ್ಕು’ ವಿಶೇಷ ಅಭಿಯಾನವು ಬ್ಯಾಂಕಿಂಗ್, ವಿಮೆ ಹಾಗೂ ಸಂಬಂಧಿತ ವಲಯದ ಎಲ್ಲಾ ಶಾಖೆಗಳಲ್ಲಿ 31 ಡಿಸೆಂಬರ್ 2025ರವರೆಗೆ ಮುಂದುವರಿಯಲಿದೆ.ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಐಸಿ ಪ್ರತಿನಿಧಿಗಳು, ಹಾಗೂ ಜಿಲ್ಲಾ ಬ್ಯಾಂಕ್ ಸಂಯೋಜಕರು ಪಾಲ್ಗೊಂಡಿದ್ದರು.









