


ಕೊಕ್ಕಡ: ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯ ಕೊಕ್ಕಡ ಗ್ರಾಮದಲ್ಲಿ ರೈತನೊಬ್ಬ ಅಕಾಲಿಕವಾಗಿ ಮೃತಪಟ್ಟ ಘಟನೆ ನ.9ರಂದು ಮಧ್ಯಾಹ್ನ ಸಂಭವಿಸಿದೆ. ಮೃತರನ್ನು ಕೊಕ್ಕಡ ಗ್ರಾಮದ ಕೋಡಿಮನೆ ನಿವಾಸಿ ಮಣಿಕಂಟನ್(52) ಎಂದು ಗುರುತಿಸಲಾಗಿದೆ.
ಮೃತ ಮಣಿಕಂಟನ್ ರವರಿಗೆ ಕೆಲಕಾಲದ ಹಿಂದೆ ಹೃದಯಾಘಾತ ಉಂಟಾಗಿ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಬಳಿಕ ಅವರು ತೋಟದ ಕೃಷಿ ಕೆಲಸಗಳನ್ನು ಮುಂದುವರಿಸುತ್ತಿದ್ದರು.


ನ.9ರಂದು ಬೆಳಿಗ್ಗೆ ಮಣಿಕಂಟನ್ ಅವರು ಕೊಕ್ಕಡ ಗ್ರಾಮದ ತೋಟದಮೂಲೆ ಎಂಬಲ್ಲಿಗೆ ಕಳೆ ತೆಗೆಯಲು ಹೋದವರು. ಬೆಳಿಗ್ಗೆ 10ಗಂಟೆಗೆ ಬಂದು ಕಾಫಿ, ತಿಂಡಿ ಮಾಡಿ ಪುನಃ ಕಳೆ ತೆಗೆಯಲು ಯಂತ್ರದೊಂದಿಗೆ ಹೊರಟಿದ್ದರು. ಮಧ್ಯಾಹ್ನ 3ಗಂಟೆಯವರೆಗೂ ಅವರು ಮನೆಗೆ ಮರಳದೆ ಇದ್ದಾಗ ಪತ್ನಿ ಜಯಂತಿ ಊಟ ಮಾಡಿಕೊಂಡು ಅವರಿಗಾಗಿ ಕಾಯುತ್ತಿದ್ದರು. ಸಂಜೆ 6.30ರ ಹೊತ್ತಿಗೂ ಅವರು ಮನೆಗೆ ಬಾರದೆ ಇದ್ದಾಗ ರಬ್ಬರ್ ತೋಟವನ್ನು ಲೀಸಿಗೆ ತೆಗೆದುಕೊಂಡಿದ್ದ ಅನಿಲ್ ಎಂಬ ವ್ಯಕ್ತಿಗೆ ಕರೆ ಮಾಡಿ ವಿಚಾರಿಸಲು ತಿಳಿಸಿದ್ದಾರೆ. ಅನಿಲ್ ತೋಟಕ್ಕೆ ತೆರಳಿ ಪರಿಶೀಲಿಸಿದಾಗ, ಮಣಿಕಂಟನ್ ರವರು ಕಳೆ ತೆಗೆಯುತ್ತಿದ್ದ ಸ್ಥಳದಲ್ಲೇ ಕಳೆ ತೆಗೆಯುವ ಯಂತ್ರದ ಬಳಿ ಬಿದ್ದುಕೊಂಡಿರುವುದು ಕಂಡುಬಂದಿದೆ. ತಕ್ಷಣವೇ ಅವರು ಮೃತರ ಪತ್ನಿ ಜಯಂತಿ ಮಾಹಿತಿ ನೀಡಿದ್ದು, ಜಯಂತಿ ಅವರು ತಮ್ಮ ಅತ್ತೆ ಕಲ್ಯಾಣಿ ಕುಟ್ಟಿ, ಮಕ್ಕಳು ಶ್ರೇಯಸ್ ಮತ್ತು ಶ್ರದ್ದಾ ಸೇರಿದಂತೆ ಸಂಬಂಧಿಕರಿಗೆ ವಿಷಯ ತಿಳಿಸಿದರು.
ಮಣಿಕಂಟನ್ ಅವರು ಹೃದಯ ಸಂಬಂಧಿ ಖಾಯಿಲೆಯಿಂದಲೋ ಅಥವಾ ಬೇರೆ ಆರೋಗ್ಯ ಸಮಸ್ಯೆಯಿಂದಲೋ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ಮೃತರ ಪತ್ನಿ ಜಯಂತಿ ಅವರ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









