




ಬೆಳ್ತಂಗಡಿ: ಪಂಜಾಬ್‌ನ ಫಗ್ವಾರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ೨೦೨೫ರ ಮೇ ೧೭ರಂದು ಅಸಹಜವಾಗಿ ಸಾವನ್ನಪ್ಪಿದ್ದ ಧರ್ಮಸ್ಥಳದ ಬೋಳಿಯಾರು ನಿವಾಸಿ ಸುರೇಂದ್ರನ್ ಮತ್ತು ಸಿಂಧೂ ದೇವಿ ದಂಪತಿಯ ಏಕೈಕ ಪುತ್ರಿ ಆಕಾಂಕ್ಷಾ ಎಸ್. ನಾಯರ್ ಅವರ ಪೋಸ್ಟ್ ಮಾಟಂ ವರದಿ ಇನ್ನೂ ಕುಟುಂಬದ ಕೈ ಸೇರಿಲ್ಲ. ಈ ಬಗ್ಗೆ ಸೂಕ್ತ ಕ್ರಮವಹಿಸುವಂತೆ ಕುಟುಂಬ ಈಗ ಜಿಲ್ಲಾ ಉಸ್ತುವಾರಿ ಸಚಿವರ ಮೊರೆ ಹೋಗಿದ್ದಾರೆ.
ಇಂದಿರಾ ಕ್ಯಾಂಟೀನ್ ಉದ್ಘಾಟನೆ ಸಹಿತ ಸರಕಾರಿ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗಂಡೂರಾವ್ ಅವರು ಕಳೆದ ವಾರ ಬೆಳ್ತಂಗಡಿಗೆ ಬಂದಿದ್ದಾಗ ಆಕಾಂಕ್ಷಾ ಹೆತ್ತವರು ಅವರನ್ನು ಭೇಟಿ ಮಾಡಿ ಇನ್ನೊಂದು ಅರ್ಜಿ ನೀಡಿದ್ದಾರೆ. ತನಿಖೆಗೆ ಚುರುಕು ಮುಟ್ಟಿಸಿ ನಮಗೆ ನ್ಯಾಯ ಕೊಡಿಸಿ ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.
ದೆಹಲಿಯಲ್ಲಿ ಜೆಟ್ ಏರ್‌ವೇಸ್‌ನಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿದ್ದ ಆಕಾಂಕ್ಷಾ ಎಸ್. ನಾಯರ್ ಅವರು ತಾನು ಕಲಿತಿದ್ದ ಪಂಜಾಬ್ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ (ಎಲ್.ಪಿ.ಯು) ಕಾಲೇಜಿನಲ್ಲಿ ಅಸಹಜವಾಗಿ ಸಾವನ್ನಪ್ಪಿದ್ದರು. ಅಲ್ಲೇ ತನ್ನ ವಿದ್ಯಾಭ್ಯಾಸ ಪೂರ್ತಿಗೊಳಿಸಿದ್ದ ಆಕಾಂಕ್ಷಾ ದೆಹಲಿಯಲ್ಲಿ ಕೆಲಸಕ್ಕೆ ಸೇರಿದ್ದರು. ಮುಂದಿನ ವಿದ್ಯಾಭ್ಯಾಸ ಮತ್ತು ಉದ್ಯೋಗಕ್ಕಾಗಿ ಅಕೆ ಜರ್ಮನಿಗೆ ತೆರಳುವ ಉzಶದಿಂದ ತಾನು ಕಲಿತಿದ್ದ ಕಾಲೇಜಿನ ಫೈನಲ್ ಸರ್ಟಿಫಿಕೇಟ್ ಪಡೆಯಲು ಮೇ.೧೫ ರಂದು ಹೊರಟು ಮರುದಿನ ಪಂಜಾಬ್ ಗೆ ತಲುಪಿದ್ದರು.
ತಂದೆ ತಾಯಿ ಜೊತೆ ನಿತ್ಯ ಕರೆ ಮಾಡಿ ಕುಶಲೋಪರಿ ಮಾತನಾಡುತ್ತಿದ್ದ ಆಕಾಂಕ್ಷಾ ಮೇ.೧೬ರಂದು ದೆಹಲಿಯಿಂದ ಪಂಜಾಬ್ ತಲುಪಿ ತಾಯಿಗೆ ಕರೆ ಮಾಡಿದ್ದರು. ಕಾಲೇಜಿಗೆ ಭೇಟಿ ನೀಡಿದಾಗ, ಮೇ.೧೬ ಶನಿವಾರದಂದು ಬರುವಂತೆ ತಿಳಿಸಿದ್ದಾರೆ. ನಾನು ಖಾಸಗಿ ರೂಮ್ ನಲ್ಲಿ ಇzನೆ. ನನ್ನ ಕಾಲೇಜು ಗೆಳೆಯ ನನ್ನನ್ನು ಬೈಕಿನಲ್ಲಿ ಇಲ್ಲಿಗೆ ತಂದು ಬಿಟ್ಟಿದ್ದಾರೆ. ಸರ್ಟಿಫಿಕೇಟ್ ದೊರೆತ ಕೂಡಲೇ ಮೆಸೇಜ್ ಮಾಡುತ್ತೇನೆ ಎಂದು ತಿಳಿಸಿದ್ದರು. ಆದರೆ ದುರಾದೃಷ್ಟವೆಂದರೆ ಮರು ದಿವಸ ಪಂಜಾಬ್ ಫಗ್ವಾರಾ ಪೊಲೀಸ್ ಠಾಣೆಯಿಂದ ಹೆತ್ತವರಿಗೆ ಕರೆ ಬಂದು, ಆಕೆ ಸಾವನ್ನಪ್ಪಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಬಂದಿತ್ತು.
ಇತ್ತ ಮನೆಯಲ್ಲಿ ತಾಯಿ ಸಿಂಧೂದೇವಿಯವರು ಕರೆ ಸ್ವೀಕರಿಸಿ ಹೌಹಾರಿದ್ದರು. ನನ್ನ ಮಗಳು ಹಾಗೆಲ್ಲ ಮಾಡಿಕೊಳ್ಳುವವಳಲ್ಲ ಎಂಬ ದೃಢ ವಿಶ್ವಾಸದಿಂದಿದ್ದ ಅವರು, ಆರಂಭದಲ್ಲಿ ಪೊಲೀಸರು ಮಾಡಿದ್ದ ಕರೆಯನ್ನು ಸೈಬರ್ ಕ್ರೈಂ ಫೇಕ್ ಕಾಲ್ ಎಂದೇ ಪರಿಗಣಿಸಿದ್ದರು. ಆದರೆ ಬಳಿಕ ಸತ್ಯ ತಿಳಿಯಿತು. ಪೊಲೀಸರು ನೀಡಿದ ಮಾಹಿತಿಯಂತೆ, ಮಗಳು ಕಾಲೇಜಿನ ೪ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದರು.
ತಂದೆ ತಾಯಿ ಸಹಿತ ೯ ಮಂದಿ ಪ್ರಯಾಣ; ಆಕಾಂಕ್ಷಾ ಅಸಹಜ ಸಾವು ವಿಚಾರ ಗೊತ್ತಾದ ತಕ್ಷಣ ತಂದೆ ತಾಯಿ ಸಹೋದರ ಸಹಿತ ಕುಟುಂಬದ ೯ ಮಂದಿ ವಿಮಾನದ ಮೂಲಕ ಪಂಜಾಬ್ ಗೆ ಧಾವಿಸಿದ್ದರು. ಈ ವೇಳೆ ಅಲ್ಲಿ ಎರಡು ಎಳೆಯ ಮಕ್ಕಳನ್ನು ಹಿಡಿದಿದ್ದ ಮಹಿಳೆಯೊಬ್ಬರು ಇವರ ಕಾಲಿಗೆ ಬಿದ್ದು, ನನ್ನ ಪತಿಯನ್ನು ರಕ್ಷಿಸಿ ಎಂದು ಗೋಗರೆದಿದ್ದು ಯಾಕೆ ಎಂಬುದು ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿತ್ತು.
ಎಷ್ಟು ಹಣ ಬೇಕೆಂದು ಪೊಲೀಸರು ಕೇಳಿದ್ಯಾಕೆ? ಘಟನೆಯ ಬಗ್ಗೆ ಮನೆಯವರಿಗೆ ಮಾಹಿತಿ ನೀಡಿದಂತೆ ಪಂಜಾಬ್‌ನ ಫಗ್ವಾರ ಪೊಲೀಸ್ ಠಾಣೆಗೆ ತೆರಳಿದ್ದ ಕುಟುಂಬಸ್ತರನ್ನುzಶಿಸಿ, ಘಟನೆಯ ಬಗ್ಗೆ ಕೇಸು ಕೊಡುವುದು ಬೇಡ. ನಿಮಗೆ ಎಷ ಹಣ ಬೇಕು ಎಂದು ಪೊಲೀಸರು ಕೇಳಿದ್ಯಾಕೆ ಎಂಬುದೀಗ ದೊಡ್ಡ ಪ್ರಶ್ನೆ. ಇದಕ್ಕೆಲ್ಲ ಕ್ಯಾರೇ ಅನ್ನದ ಆಕೆಯ ಅಣ್ಣ ಆಕಷ ಎಸ್. ನಾಯರ್ ಠಾಣೆಗೆ ದೂರು ನೀಡಿದ್ದರು. ಪತಿಯನ್ನು ರಕ್ಷಿಸಿ ಎಂದು ಮಹಿಳೆ ಕೇಳಿದ್ಯಾಕೆ? ಇನ್ನೊಂದು ಪ್ರಮುಖ ಟ್ವಿಸ್ಟ್ ಎಂದರೆ ಫಗ್ವಾರಾ ಪೊಲೀಸ್ ಠಾಣೆಗೆ ಆಕಾಂಕ್ಷಾ ತಂದೆ ತಾಯಿ ಪ್ರವೇಶಿಸುವ ದ್ವಾರದ ಬಳಿ ಮಗುವನ್ನು ಅಡ್ಡಕ್ಕೆ ಮಲಗಿಸಿದ ತಾಯಿಯಿಬ್ಬರು ಇವರ ಕಾಲಿಗೆ ಬಿದ್ದು, ನನ್ನ ಪತಿ ಏನೂ ತಪ್ಪು ಮಾಡಿಲ್ಲ. ಅವರನ್ನು ರಕ್ಷಿಸಿ ಎಂದು ಅಂಗಲಾಚಿದ್ದು ಏಕೆ ಎಂಬುದೂ ದೊಡ್ಡ ಯಕ್ಷ ಪ್ರಶ್ನೆಯಾಗಿದೆ.
ಉಪನ್ಯಾಸಕನ ಪಾತ್ರ ಸಂದೇಹ; ಆಕಾಂಕ್ಷಾ ಕೋವಿಡ್ ಸಮಯದಲ್ಲಿ ಒಂದು ವಷ ಮನೆಯಿಂದಲೇ ಕಲಿಕೆಯಲ್ಲಿ ನಿರತಳಾಗಿದ್ದಳು. ನಂತರ ೩ ವಷ ಪಂಜಾಬ್‌ನ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪೂರ್ತಿಗೊಳಿಸಿದ್ದಳು. ಈ ವೇಳೆ ಆಕೆಯ ಉಪನ್ಯಾಸಕನಾಗಿದ್ದ ಕೇರಳ ರಾಜ್ಯದ ಕೋಟ್ಟಾಯ ಸ್ವದೇಶಿ ಬಿಲ್ಜಿ ಮ್ಯಾಥ್ಯೂ ಎಂಬವರು ಕ್ಲೋಸ್ ಆಗಿದ್ದರು. ಆಕಾಂಕ್ಷಾ ಖಾಸಗಿಯಾಗಿ ರೂಮಿನಲ್ಲಿ ಸಹಪಾಠಿ ವಿದ್ಯಾರ್ಥಿಯ ಜೊತೆಗೆ ವಾಸವಾಗಿದ್ದರು.


ಆರಂಭದ ದಿನಮಾನಗಳ ಅನಾರೋಗ್ಯ ಅಥವಾ ಇನ್ಯಾವುದೇ ಸಮಸ್ಯೆ ಬಂದಾಗ ಇದೇ ಬಿಲ್ಜಿ ಮ್ಯಾಥ್ಯೂ ಇವರ ಜೊತೆ ಪೂರ್ಣವಾಗಿ ಸಹಕರಿಸುತ್ತಿದ್ದ. ನನಗೆ ಅಣ್ಣನ ಹಾಗೆ ಇಲ್ಲಿ ಉಪನ್ಯಾಸಕರೊಬ್ಬರು ಸಹಕಾರಿಯಾಗಿದ್ದಾರೆ ಎಂದು ಆಕಾಂಕ್ಷಾಳೇ ಎಷ್ಟೋ ಬಾರಿ ಮನೆಯವರಿಗೆ ಮಾಹಿತಿ ನೀಡುತ್ತಿದ್ದರು. ಇವರೂ ಮೂಲತಃ ಮಲಯಾಳಿ ಭಾಷಿಗರಾದುದರಿಂದ ಸಹಜವಾದ ಆತ್ಮೀಯತೆ ಕೂಡ ಬೆಳೆದಿತ್ತು.
ಜರ್ಮನಿಗೆ ಹೋಗುವ ಸಿದ್ಧತೆ ನಡೆಸಿದ್ದಳು: ಎರೋಸ್ಪೇಸ್ ಇಂಜಿನಿಯರ್ ಆಗಿದ್ದ ಆಕಾಂಕ್ಷಾ ದೆಹಲಿಯ ಜೆಟ್ ಏರ್ ವೇಸ್‌ನಲ್ಲಿ ಉದ್ಯೋಗ ಪಡೆದಿದ್ದಳು. ಉತ್ತಮ ಕರ್ತವ್ಯ ನಿರ್ವಹಣೆಗಾಗಿ ಕೇವಲ ಮೂರೇ ತಿಂಗಳಲ್ಲಿ ಕಂಪೆನಿಯಿಂದ ಸ್ಟಾರ್ ಅವಾರ್ಡ್ ಗಿಟ್ಟಿಸಿಕೊಂಡಿದ್ದಳು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಜರ್ಮನಿಗೆ ಹೋಗುವ ಸಿದ್ಧತೆಯ ಭಾಗವಾಗಿ ಅಂತಿಮ ವಷದ ಸರ್ಟಿಫಿಕೇಟ್‌ಗಾಗಿ ಆಕೆ ತಾನು ಕಲಿತಿದ್ದ ಪಂಜಾಬ್ ಕಾಲೇಜಿಗೆ ಹೋಗಿದ್ದಳು.
ಶಿಕ್ಷಣಕ್ಕಾಗಿ ಮನೆಯನ್ನೇ ಕಳೆದುಕೊಂಡಿದ್ದರು: ಮಗಳ ಆಕಾಂಕ್ಷೆಯಂತೆ ಆಕೆಗೆ ಇಷವಾದ ಶಿಕ್ಷಣ ನೀಡುವುದಕ್ಕಾಗಿ ತಂದೆ ತಾಯಿ ಮಗಳನ್ನು ಅಷ ದೂರದ ಪಂಜಾಬ್‌ಗೆ ಕಳಿಸಿಕೊಟ್ಟಿದ್ದರು. ಏಕೈಕ ಪುತ್ರಿಯಾಗಿರುವುದರಿಂದ ಆಕೆಯ ಶಿಕ್ಷಣಕ್ಕಾಗಿ ತಮ್ಮ ಒಡವೆಗಳನ್ನೆಲ್ಲ ಮಾರಿದ್ದರು. ಸಾಲದೆಂಬುದಕ್ಕೆ ಸ್ವಂತ ಮನೆಯನ್ನೂ ಅಡವಿಟ್ಟು ಬ್ಯಾಂಕ್ ಸಾಲ ಮಾಡಿ ಅದನ್ನು ಮರುಪಾವತಿಸಲಾಗದೆ ಮನೆಯನ್ನೇ ಕಳೆದುಕೊಂಡು ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಕಣ್ಣೀರಿನಲ್ಲಿ ಕುಟುಂಬ; ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ತಾಯಿ ಸಿಂಧೂ ದೇವಿ, ಸಿವಿಲ್ ಗುತ್ತಿಗೆದಾರರಾಗಿ ಜನಾನುರಾಗಿಯಾಗಿರುವ ತಂದೆ ಸುರೇಂದ್ರನ್ ನಾಯರ್ ಅವರು ತಮ್ಮ ಏಕೈಕ ಹೆಣ್ಣು ಮಗಳನ್ನು ಕಳೆದುಕೊಂಡು ತಿಂಗಳು ೫ ಕಳೆದರೂ ಈಗಲೂ ಆ ದುಃಖದಿಂದ ಹೊರಬಂದಿಲ್ಲ. ರಾತ್ರಿ ಹಗಲು ಮುದ್ದು ಮಗಳನ್ನೇ ನೆನೆದುಕೊಂಡು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ತಂದೆ ಇದುವರೆಗೆ ಗುತ್ತಿಗೆ ಕೆಲಸ ಮರು ಆರಂಭಿಸಿಲ್ಲ. ಈ ಕಾರಣದಿಂದ ಕುಟುಂಬ ಮತ್ತಷ ಆರ್ಥಿಕ ಹೊಡೆತಕ್ಕೆ ಗುರಿಯಾಗಿದೆ. ತಾಯಿಯಂತೂ ಕಣ್ಣೀರು ಸುರಿಸುತ್ತಾ ದಿನಕಳೆಯುತ್ತಿದ್ದಾರೆ.
ಮರು ಪೋಸ್ಟ್ ಮಾರ್ಟಂ ಅಪೇಕ್ಷೆಯಿಂದ ಮೃತದೇಹ ದಫನ; ಮಗಳ ಮೃತದೇಹ ವಿಮಾನದ ಮೂಲಕ ಬೆಂಗಳೂರಿಗೆ ಬಂತು. ಅಲ್ಲಿಂದ ಅಂಬುಲೆನ್ಸ್ ಮೂಲಕ ಧರ್ಮಸ್ಥಳದ ಬೊಳಿಯಾರ್‌ಗೆ ತರಲಾಗಿತ್ತು. ಅಲ್ಲಿನ ಪೊಲೀಸ್ ಇಲಾಖೆ ಮತ್ತು ಒಟ್ಟು ವ್ಯವಸ್ಥೆಗಳ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದ ದಂಪತಿ ಮರುಪೋಸ್ಟ್ ಮಾರ್ಟಂ ಉzಶದಿಂದ ಕಾನೂನಾತ್ಮಕ ಅವಕಾಶಕ್ಕಾಗಿ ಇತ್ತ ಮಗಳ ದೇಹವನ್ನು ದಹನ ಮಾಡದೆ ದಫನ ಮಾಡಿದ್ದರು. ಒಟ್ಟಾರೆಯಾಗಿ ತಂದೆ ತಾಯಿಯ ಪ್ರೀತಿಯ ಮಗಳಾಗಿ ಉದ್ಯೋಗದ ಮೂಲಕ ಭವಿಷ ಕಟ್ಟಿಕೊಳ್ಳಬೇಕಾಗಿದ್ದ ಪುತ್ರಿ ಆಕಾಂಕ್ಷಾ ಅವರ ಈ ಅಕಾಲಿಕ ಅಗಲುವಿಕೆ ಆ ಇಡೀ ಕುಟುಂಬವನ್ನೇ ಜರ್ಝರಿತಗೊಳಿಸಿದ್ದು ಈಗಲೂ ನ್ಯಾಯಕ್ಕಾಗಿ ಹಾತೊರೆಯುತ್ತಿದ್ದಾರೆ. ಮಗಳ ಸಾವಿಗೆ ಪ್ರಚೋದನೆ ನೀಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಪಂಜಾಬ್ ಜಲಂಧರ್ ಫಗ್ವಾರಾ ಠಾಣೆಗೆ ದೂರು ನೀಡಿರುವ ಹೆತ್ತವರು ಮುಂದಕ್ಕೆ ವಿಳಂಬವಾದರೆ ಕಾನೂನು ಹೋರಾಟ ಮಾಡುವ ಬಗ್ಗೆಯೂ ಆಲೋಚಿಸುತ್ತಿದ್ದಾರೆ.
ಕರ್ನಾಟಕ ಸರಕಾರದಿಂದಲೇ ಪತ್ರ; ಸ್ಪೈಸ್ ಜೆಟ್‌ನ ಮಹಿಳಾ ಸಿಬ್ಬಂದಿ ಮತ್ತು ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದ ಪದವೀಧರೆ ಆಕಾಂಕ್ಷಾ (೨೨) ಅವರ ಅನುಮಾನಾಸ್ಪದ ಸಾವಿನ ಬಗ್ಗೆ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಕರ್ನಾಟಕ ಸರ್ಕಾರ ಪಂಜಾಬ್ ಸರ್ಕಾರಕ್ಕೆ ಪತ್ರ ಬರೆದಿತ್ತು.
ಮುಖ್ಯ ಕಾರ್ಯದರ್ಶಿ ಕಚೇರಿಯು ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿಯ ಆಪ್ತ ಕಾರ್ಯದರ್ಶಿಗೆ ಪತ್ರ ಬರೆದಿತ್ತು. ಮೃತರ ಕುಟುಂಬವು ಕಾಲೇಜಿನ ಪ್ರಾಧ್ಯಾಪಕರೊಬ್ಬರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಸ್ಥಳೀಯರು ಎಫ್‌ಐಆರ್ ದಾಖಲಿಸಿಲ್ಲ ಮತ್ತು ಬದಲಿಗೆ ಘಟನೆಯನ್ನು ಕೇವಲ ಅಸ್ವಾಭಾವಿಕ ಮರಣ ಎಂದು ಪರಿಗಣಿಸುತ್ತಿದ್ದಾರೆ ಎಂದು ನಮ್ಮ ಗಮನಕ್ಕೆ ತರಲಾಗಿದೆ. ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ತಕ್ಷಣ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಬೇಕು ಎಂದು ಪತ್ರದಲ್ಲಿ ತಿಳಿಸಲಾಗಿತ್ತು.
ಮೊದಲ ನೋಟದಲ್ಲಿ ಇದು ಅಸಹಜ ಸಾವು ಎಂದು ತೋರುತ್ತದೆ. ಉಪನ್ಯಾಸಕ ಮ್ಯಾಥ್ಯೂ ಕಿರುಕುಳದಿಂದ ಆಕಾಂಕ್ಷಾ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಆಕಾಂಕ್ಷಾ ಅವರ ನಿಗೂಢ ಸಾವಿನ ಬಗ್ಗೆ ನ್ಯಾಯ ಒದಗಿಸಲು ಪಂಜಾಬ್ ಸರ್ಕಾರವು ಸಮಗ್ರ ತನಿಖೆ ನಡೆಸಬೇಕೆಂದು ನಾನು ಒತ್ತಾಯಿಸುತ್ತೇನೆ. ಈ ವಿಷಯದ ಬಗ್ಗೆ ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿಯೊಂದಿಗೆ ಚರ್ಚಿಸಿzನೆ ಮತ್ತು ಪಂಜಾಬ್ ಸರ್ಕಾರದೊಂದಿಗೆ ನಿರಂತರ ಸಂವಹನ ನಡೆಸುವಂತೆ ಸೂಚನೆ ನೀಡಿzನೆ ಎಂದು ಸಚಿವ ಗುಂಡೂ ರಾವ್ ಈ ಹಿಂದೆ ಹೇಳಿದ್ದರು.
ಸಿಸಿ ಟಿವಿ ಪುಟೇಜ್ ಇನ್ನೂ ನೀಡಿಲ್ಲ; ಆಮ್‌ಆದ್ಮಿ ಪಾರ್ಟಿಯ ಸಂಸದರೊಬ್ಬರಿಗೆ ಸೇರಿದ ಈ ಕಾಲೇಜಿನಲ್ಲಿ ಘಟನೆ ಆಗಿದ್ದು, ಅವರು ಮಾಹಿತಿ ನೀಡಿದಂತೆ, ಆಕಾಂಕ್ಷಾ ಕಾಲೇಜಿನಲ್ಲಿ ಓಡಾಡುವ ದೃಶ್ಯಗಳನ್ನಷ್ಟೇ ಮನೆಯವರಿಗೆ ತೋರಿಸಿದ್ದಾರೆ. ಆದರೆ ಜಿಗಿದ ಬಗ್ಗೆ ಸಿಸಿ ಟಿವಿ ಪುಟೇಜ್ ಒದಗಿಸಿಕೊಟ್ಟಿಲ್ಲ. ಅಲ್ಲದೆ ಸಂಸ್ಥೆಯ ಶಿಸ್ತಿನ ಹೆಸರಿನಲ್ಲಿ ಐಡಿ ಕಾರ್ಡ್ ಇಲ್ಲ ಎಂದು ಕಾಲೇಜು ಕ್ಯಾಂಪಸ್ ಒಳಗೆ ಸ್ವತಃ ತಂದೆ ತಾಯಿಗೂ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಅಷ ಮಾತ್ರವಲ್ಲದೆ ಮಗಳು ಅಷ ಎತ್ತರದಿಂದ ಬಿದ್ದಿದ್ದಾರೆನ್ನಲಾಗಿದ್ದರೂ ಆಕೆಯ ಕೈ ಮತ್ತು ಕಾಲಿಗೆ ಮಾತ್ರ ಸಣ್ಣ ಏಟಾಗಿದ್ದು ತಲೆಗೆ ಯಾವುದೇ ಏಟು ಬಿದ್ದಿಲ್ಲ ಎಂಬುದು ವಿಶೇಷ.
೨೦-೨೫ ಹೆಣ್ಣು ಮಕ್ಕಳ ಅಸಹಜ ಸಾವು-ಹೆತ್ತವರ ಆರೋಪ: ಪಂಜಾಬ್ ಎಲ್ ಪಿ.ಯು ಕಾಲೇಜಿನಲ್ಲಿ ಇದೇ ರೀತಿ ಈ ಹಿಂದೆಯೂ ೨೦-೨೫ ಹೆಣ್ಣು ಮಕ್ಕಳ ಅಸಹಜ ಸಾವು ಆಗಿದೆ ಎಂಬ ಮಾಹಿತಿ ಇದೆ ಎಂದು ಆಕಾಂಕ್ಷಾ ಹೆತ್ತವರು ಆಪಾದಿಸಿದ್ದಾರೆ. ಪ್ರತಿಯೊಬ್ಬರೂ ಸುಸೈಡ್ ಮಾಡಿಕೊಂಡದ್ದೆಂದೇ ವರದಿಯಾಗುತ್ತಿದೆ. ಬಲಾಡ್ಯರ ಬಳಗವೇ ಇದರ ಹಿಂದಿದ್ದು ಉಪನ್ಯಾಸಕರೇ ಇದಕ್ಕೆಲ್ಲ ಕಾರಣರಾಗಿದ್ದಾರೆ. ನಮ್ಮಮಗಳು ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ಅವಳನ್ನು ಕೊಲೆಮಾಡಲಾಗಿದೆ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ಈ ಮೂಲಕವೇ ಕೊಲೆಯ ಸರಣಿ ನಿಲ್ಲಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.








