ಉಜಿರೆ: ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಿ ಪ್ರಸ್ತುತ ಕಾಲದ ಜನರಿಗೆ ಐತಿಹಾಸಿಕ ಪರಂಪರೆಯ ಅರಿವು ಮೂಡಿಸುವಲ್ಲಿ ವಸ್ತು ಸಂಗ್ರಹಾಲಯಗಳು ಪ್ರಮುಖ ಪಾತ್ರ ವಹಿಸುತ್ತದೆ. ಅವುಗಳಿಲ್ಲದೆ ಇತಿಹಾಸ ರಚನೆ ಅಸಾಧ್ಯ ಎಂದು ಮಿಲಾಗ್ರೆಸ್ ಕಾಲೇಜು, ಕಲ್ಯಾಣಪುರ ಇಲ್ಲಿನ ಸಹಾಯಕ ಪ್ರಾಧ್ಯಾಪಕ ಡಾ.ಜಯರಾಮ್ ಶೆಟ್ಟಿಗಾರ್ ಅಭಿಪ್ರಾಯಪಟ್ಟರು.
ಉಜಿರೆಯ ಶ್ರೀ ಧ.ಮಂ. ಕಾಲೇಜಿನ ಇತಿಹಾಸ ವಿಭಾಗವು ಸೆ. 23ರಂದು ಕಾಲೇಜಿನಲ್ಲಿ ಆಯೋಜಿಸಿದ್ದ “ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹ” ಉದ್ಘಾಟನಾ ಕಾರ್ಯಕ್ರಮ ಮತ್ತು “ಐತಿಹಾಸಿಕ ಜ್ಞಾನ ರಕ್ಷಣೆಯಲ್ಲಿ ವಸ್ತು ಸಂಗ್ರಹಾಲಯಗಳ ಪಾತ್ರ” ಎಂಬ ವಿಷಯದ ಕುರಿತ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ವಸ್ತು ಸಂಗ್ರಹಾಲಯದ ವಸ್ತುಗಳಲ್ಲಿ ಅಗಾಧ ಜ್ಞಾನ ಅಡಗಿದೆ. ಅವುಗಳನ್ನು ನಿರ್ಜೀವ ಎಂದು ಪರಿಗಣಿಸದೆ ಅವುಗಳೊಂದಿಗೆ ಸಂವಾದ ಬೆಳೆಸುವ ಆಸಕ್ತಿ ನಮ್ಮಲ್ಲಿ ಮೈಗೂಡಬೇಕು.ನಾವು ಮರೆತು ಹೋಗಿರುವ ಪರಂಪರೆಯ ಹಳೆಯ ವಸ್ತುಗಳನ್ನು ವಸ್ತು ಸಂಗ್ರಹಾಲಯಗಳು ನಮಗೆ ಪರಿಚಯಿಸುವ ಮೂಲಕ ಅವುಗಳು ನಮ್ಮನ್ನು ಸಾಂಸ್ಕೃತಿಕವಾಗಿ ಶ್ರೀಮಂತರನ್ನಾಗಿಸುತ್ತವೆ ಎಂದರು.
ಸಾಮಾಜಿಕ ಬದಲಾವಣೆ ಶರವೇಗದಲ್ಲಿ ಆಗುತ್ತಿರುವ ಪರಿಣಾಮ ವಸ್ತುಗಳೊಂದಿಗಿನ ಭಾವನಾತ್ಮಕ ಸಂಬಂಧ ಮರೆಯಾಗಿ, ಎಲ್ಲವೂ ಯೂಸ್ ಆಂಡ್ ಥ್ರೋ ಹಂತಕ್ಕೆ ಬಂದು ತಲುಪಿದೆ. ಜಗತ್ತಿನ ಇತಿಹಾಸ ಓದಲು ಹೊರಟಿರುವ ನಮಗೆ ನಮ್ಮ ಕುಟುಂಬದ ಪರಂಪರೆಯ ಅರಿವೇ ಇಲ್ಲದಂತಾಗಿದೆ. ಪ್ರಾಥಮಿಕವಾಗಿ ನಮ್ಮ ಇತಿಹಾಸ ಕಲಿಕೆ ಸ್ವತಃ ನಮ್ಮ ಕುಟುಂಬದ ಪರಂಪರೆ ತಿಳಿಯುವುದರ ಮೂಲಕ ಪ್ರಾರಂಭವಾಗಬೇಕು ಎಂದರು.
ಹಳೆಯ ವಸ್ತುಗಳ ಹಿಂದೆ ಹತ್ತಾರು ಕಥೆಗಳಿರುತ್ತವೆ, ಅವುಗಳನ್ನು ಹುಡುಕಿ ಹೊರಡುವ ಆಸಕ್ತಿ ಬೆಳಯಬೇಕು. ಸುತ್ತ ಮುತ್ತಲಿನ ವಸ್ತುಗಳನ್ನು ಇತಿಹಾಸದ ದೃಷ್ಟಿಕೋನದಿಂದ ವೀಕ್ಷಿಸಿಸಲು ಪ್ರಾರಂಬಿಸಿದಾಗ ಹೊಸ ವಿಚಾರಗಳ ಕಲಿಕೆ ಸಾಧ್ಯವಾಗುತ್ತದೆ.ಇತಿಹಾಸ ಪರಂಪರೆಯನ್ನು ಉಳಿಸಿ, ಮುಂದಿನ ಜನಾಂಗಕ್ಕೆ ವರ್ಗಾಯಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಕಿವಿಮಾತು ಹೇಳಿದರು.
ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸನ್ಮತಿ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಲವರಲ್ಲಿ ಇತಿಹಾಸ ಪ್ರಜ್ಞೆಯ ಕೊರತೆ ಇರುವ ಕಾರಣ ಪ್ರಾಚೀನ ಸ್ಮಾರಕಗಳು ತಪ್ಪಾಗಿ ಬಳಕೆಯಾಗುತ್ತಿವೆ. ಪ್ರತಿಯೊಬ್ಬರಲ್ಲೂ ಇತಿಹಾಸ ಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಪೂರಕವಾಗಿದೆ. ಇತಿಹಾಸವನ್ನು ಬದುಕಿನ ಒಂದು ಭಾಗವಾಗಿ ಅಳವಡಿಸಿಕೊಂಡು ಮುನ್ನಡೆದಾಗ ಮಾತ್ರ ಇತಿಹಾಸದ ಉಳಿವು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಭಿಜ್ಞಾ ಉಪಾಧ್ಯಯ, ವಿದ್ಯಾರ್ಥಿ ಪ್ರತಿನಿಧಿಗಳಾದ ಅಕ್ಷಯ್ ಮತ್ತು ಕಿರಣ್ಮಯಿ ಹಾಗೂ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರೀತಿ ಮತ್ತು ಬಳಗದವರು ಪ್ರಾರ್ಥಿಸಿದರು. ದ್ವಿತೀಯ ಬಿಎ ವಿದ್ಯಾರ್ಥಿನಿಯರಾದ ಸುಶೀರ ಸ್ವಾಗತಿಸಿ, ತೃತೀಯ ಬಿಎ ವಿದ್ಯಾರ್ಥಿನಿಯರಾದ ಸೃಷ್ಟಿ ಮತ್ತು ಮಾನಸ ಕಾರ್ಯಕ್ರಮ ನಿರೂಪಿಸಿದರು. ಅಕ್ಷತಾ ವಂದಿಸಿದರು.