ಬೆಳ್ತಂಗಡಿ: ‘ರಾಷ್ಟ್ರೀಯ ಸೇವಾ ಯೋಜನೆ ಬದುಕನ್ನು ಪ್ರಬುದ್ಧವಾಗಿ ರೂಪಿಸುವ ಜತೆಗೆ ರಾಷ್ಟ್ರ ನಿರ್ಮಾಣದಲ್ಲಿ ಬಹು ದೊಡ್ಡ ಕಾಣಿಕೆಯನ್ನು ನೀಡುತ್ತಾ ಬಂದಿದೆ. ವಿದ್ಯಾರ್ಥಿ ದೆಸೆಯಲ್ಲಿ ಈ ಚಟುವಟಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಬದುಕನ್ನು ಬೆಳಗಿಸಿಕೊಳ್ಳಬೇಕು’ ಎಂದು ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ಹೇಳಿದರು.
ಅವರು ಸೆ. 22ರಂದು ನಾರಾವಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
‘ಇಂದು ಸಂಸ್ಕಾರಯುತ ಜೀವನಶೈಲಿ ದೂರವಾಗಿದೆ. ಪ್ರತಿಯೊಂದನ್ನು ವ್ಯವಹಾರಿಕವಾಗಿ ನೋಡುವ ದೃಷ್ಟಿಕೋನ ನಮ್ಮದಾಗಿದೆ. ಹಾಗಾಗಿಯೇ ಇಂದು ಮನುಷ್ಯತ್ವ, ಮಾನವೀಯತೆ ನಮ್ಮಿಂದ ದೂರವಾಗಿದೆ. ಸಂಸ್ಕಾರ ನೀಡುವ ಚಟುವಟಿಕೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವುದರಿಂದ ಬದುಕು ಅರ್ಥವತ್ತಾಗುವುದು’ ಎಂದರು.
‘ಶ್ರೀ ಗುರುದೇವ ವಿದ್ಯಾಸಂಸ್ಥೆಯ ಸ್ಥಾಪಕ ಕೆ. ವಸಂತ ಬಂಗೇರ ಅವರು ಸ್ವಚ್ಛ ವ್ಯಕ್ತಿತ್ವದ ರಾಜಕಾರಣಿಯಾಗಿದ್ದರು. ಬಡವರು ಮತ್ತು ಸಮಾಜದ ಬಗ್ಗೆ ಅಪಾರ ಕಾಳಜಿ ಬೆಳೆಸಿಕೊಂಡವರು. ಎಂದಿಗೂ ವ್ಯವಹಾರದ ಲಾಭ ನೋಡದೆ ಸಕಲ ವ್ಯವಸ್ಥೆಗಳೊಂದಿಗೆ ಬಡ ವಿದ್ಯಾರ್ಥಿಗಳ ಬದುಕು ಬೆಳಗಲು ಆರಂಭವಾದ ವಿದ್ಯಾಸಂಸ್ಥೆ ಮುಂದಿನ ದಿನಗಳಲ್ಲಿ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿ ಬೆಳಗಲಿ’ ಎಂದರು.
ಪಿ.ಡಬ್ಲ್ಯೂ.ಡಿ ಗುತ್ತಿಗೆದಾರರ ತಾಲ್ಲೂಕು ಸಂಘದ ಅಧ್ಯಕ್ಷ ವಿನಯ್ ಹೆಗ್ಡೆ ಮಾತನಾಡಿ, ‘ನಾರಾವಿಯಂತ ಪರಿಸರದಲ್ಲಿ ಎನ್.ಎಸ್.ಎಸ್.ಕಾರ್ಯ ಚಟುವಟಿಕೆ ನಡೆಯುತ್ತಿರುವುದು ಊರಿಗೆ ಸಂಭ್ರಮವಾಗಿದೆ. ವಿದ್ಯಾಭ್ಯಾಸದ ಜತೆ ಉತ್ತಮ ಕಾರ್ಯಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿರುವುದು ಅತೀವ ಸಂತಸ ನೀಡಿದೆ’ ಎಂದರು.
ನಡ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಮಾತನಾಡಿ, ‘ ಉತ್ತಮವಾದುದನ್ನು ಕಲಿಸುವುದು, ಉತ್ತಮವಾದುದನ್ನು ಬೆಳೆಸುವುದು ಎನ್.ಎಸ್.ಎಸ್. ಚಟುವಟಿಕೆಯಾಗಿದೆ. ಇದರಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಸಮಾಜದ ಸತ್ಪ್ರಜೆಗಳಾಗಿ , ಉತ್ತಮ ಸಂಸ್ಕಾರವಂತರಾಗಿ ಬದುಕು ರೂಪಿಸಿಕೊಂಡಿದ್ದಾರೆ’ ಎಂದರು.
ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷೆ ಪ್ರಿತಿತ ಧರ್ಮ ವಿಜೇತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್ ನಾರಾವಿ ಘಟಕದ ಅಧ್ಯಕ್ಷ ಮುರಾರಿ ರಾವ್, ನಾರಾವಿ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಶೀಲ, ಜನ ಸೇವಾ ಟ್ರಸ್ಟ್ ನಾರಾವಿ ಇದರ ಅಧ್ಯಕ್ಷ ಅಭಿಜಿತ್ ಜೈನ್ ಶುಭ ಹಾರೈಸಿದರು.
ವೇದಿಕೆಯಲ್ಲಿ ನಾರಾವಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಜವರ್ಮ ಜೈನ್, ನಾರಾವಿ ಸುಗಮ ಕಾಂಪ್ಲೆಕ್ಸ್ ಮಾಲಕ ಪ್ರಕಾಶ್ ಜೈನ್ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುರೇಶ್ ಪೂಜಾರಿ, ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ, ಕಾಲೇಜಿನ ಎನ್.ಎಸ್.ಎಸ್. ಘಟಕದ ನಾಯಕ ಮಹಮ್ಮದ್ ಜುನೈದ್ ಹಾಗೂ ನಾಯಕಿ ಸಂಧ್ಯಾ ಉಪಸ್ಥಿತರಿದ್ದರು.
ಸೆ. 23 ರಂದು ನಾರಾವಿ ಮದುವನ ಕಾಂಪ್ಲೆಕ್ಸ್ ಮಾಲಕ ರೂಪಕ್ ಧ್ವಜಾರೋಹಣ ನೆರವೇರಿಸಿ, ಉದ್ಯಮಿ ಜಗದೀಶ್ ಅಂಚನ್ ಶ್ರಮದಾನ ಉದ್ಘಾಟಿಸಿದರು. ಶ್ರೀ ಗುರುದೇವ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಮೇಶ್ ಎಸ್. ಮಾಳಗೊಂಡ ಅಧ್ಯಕ್ಷತೆಯಲ್ಲಿ ‘ಹಾವುಗಳು – ನಾವುಗಳು – ಪರಿಸರ’ ಎಂಬ ವಿಷಯದಲ್ಲಿ ನಡೆದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ನಿತ್ಯಾನಂದ ನಾವರ, ವೇಣೂರು ಯುವವಾಹಿನಿ ಘಟಕದ ಅಧ್ಯಕ್ಷ ಶುಭಕರ ಪೂಜಾರಿ ಸಾವ್ಯ, ಶ್ರೀ ಸೂರ್ಯ ನಾರಾಯಣ ಯುವಕ ಮಂಡಲ ಅಧ್ಯಕ್ಷ ಧೀರಜ್ ಹೆಗ್ಡೆ, ಗ್ರಾಮ ಪಂಚಾಯಿತಿ ಸದಸ್ಯೆ ಡಯಾನಾ ಪ್ರಮೀಳಾ ರೊಡ್ರಿಗಸ್, ಶಾಲಾಭಿವೃದ್ಧಿ ಸಮಿತಿ ಸದಸ್ಯೆ ಸರೋಜಿನಿ ಇದ್ದರು. ಮೂಡಬಿದಿರೆ ಉಪವಲಯ ಅರಣ್ಯಾಧಿಕಾರಿ ಬಸಪ್ಪ ಹಲಗೇರ, ಉರಗ ತಜ್ಞ ಸ್ನೇಕ್ ಕಿರಣ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಉಪ ಪ್ರಾಂಶುಪಾಲ ಬಿ.ಎ. ಶಮೀವುಲ್ಲಾ ಪ್ರಸ್ತಾವಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಹಾಗೂ ಶಿಬಿರಾಧಿಕಾರಿ ಗಣೇಶ್ ಬಿ. ಶಿರ್ಲಾಲು ಸ್ವಾಗತಿಸಿದರು. ಸಹ ಕಾರ್ಯಕ್ರಮಾಧಿಕಾರಿಗಳಾದ ಚಂದನಾ ಉದ್ಘಾಟಕರನ್ನು ಪರಿಚಯಿಸಿ, ಸಹ ಶಿಬಿರಾಧಿಕಾರಿಗಳಾದ ಸೌಜನ್ಯ ಹಾಗೂ ರಾಕೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸುಷ್ಮಾ ವಂದಿಸಿದರು.