ಬೆಳ್ತಂಗಡಿ: ತಾಲೂಕಿನ ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಮತ್ತು ವಿವಿಧೋದ್ದೇಶ ಸಹಕಾರ ಸಂಘಗಳ ಒಟ್ಟುಗೂಡುವಿಕೆಯಲ್ಲಿ ಭವಿಷ್ಯದಲ್ಲಿ ಭದ್ರ ಸಹಕಾರ ಸಂಘದ ಬೆಳವಣಿಗೆಗೆ ಪೂರಕವಾದ ನಿಯಮಗಳನ್ನು ಜಾರಿಗೊಳಿಸಬೇಕೆನ್ನುವ ಸದುದ್ದೇಶವನ್ನು ಇಟ್ಟುಕೊಂಡು ಪ್ರಾರಂಭಗೊಂಡಿರುವ ಸಹಕಾರ ಸಂಘಗಳ ಹಿತರಕ್ಷಣಾ ವೇದಿಕೆ ಬೆಳ್ತಂಗಡಿ ತಾಲೂಕು ಇತ್ತೀಚಿಗೆ ಸಹಕಾರ ಸಂಘಗಳ ಕಾಯಿದೆಗಳಿಗೆ ಮಾಡಿರುವ ತಿದ್ದುಪಡಿಯಿಂದ ಉಂಟಾಗುವ ಪರಿಣಾಮಗಳ ಕುರಿತಾದ ಸಭೆಯು ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಸೆ. 23ರಂದು ನಡೆಯಿತು. ಹಿತರಕ್ಷಣಾ ವೇದಿಕೆಯ ನೂತನ ಅಧ್ಯಕ್ಷರಾಗಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಭಗೀರಥ ಜಿ. ಅವರನ್ನು ಆಯ್ಕೆ ಮಾಡಲಾಯಿತು.
ಈ ಬಗ್ಗೆ ಅಧ್ಯಕ್ಷ ಭಗೀರಥ ಜಿ. ಮಾತನಾಡಿ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮಕ್ಕೆ ಮಾಡಿರುವ ಕೆಲವೊಂದು ತಿದ್ದುಪಡಿಗಳಿಂದ ಸಹಕಾರ ಸಂಘಗಳ ಮುಂದಿನ ಬೆಳವಣಿಗೆ ಅತ್ಯಂತ ಕಷ್ಟಕರವಾಗಿದ್ದು ಈ ಬಗ್ಗೆ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ತಿಳಿಸಿದರು. ಈ ಬಗ್ಗೆ ಮುಂದಿನ ಕಾನೂನು ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಹಿತರಕ್ಷಣಾ ವೇದಿಕೆಯ ಮುಂದಿನ ಯೋಜನೆಗಳ ಬಗ್ಗೆ ಚರ್ಚೆಸಲಾಯಿತು. ಹಿತರಕ್ಷಣಾ ವೇದಿಕೆಯ ಸದಸ್ಯ ಸಂಘಗಳಿಗೆ ಸದಸ್ಯತ್ವ ಶುಲ್ಕ ನಿಗಧಿಪಡಿಸಿ ಬಾಕಿ ಉಳಿದಿರುವ ಸಹಕಾರ ಸಂಘಗಳನ್ನು ಸದಸ್ಯರನ್ನಾಗಿ ಮಾಡುವುದಾಗಿ ನಿರ್ಣಯಿಸಲಾಯಿತು. ಸದಸ್ಯ ಸಹಕಾರ ಸಂಘಗಳಿಗೆ ಸಮಸ್ಯೆಗಳು ಉಂಟಾದಾಗ ಸಹಕಾರ ಸಂಘಗಳ ಹಿತರಕ್ಷಣಾ ವೇದಿಕೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು.
ಹಿತರಕ್ಷಣಾ ವೇದಿಕೆಯ ಉಪಾಧ್ಯಾಕ್ಷ ಡಾ.ಜಯಕೀರ್ತಿಜೈನ್, ಕಾರ್ಯದರ್ಶಿ ಅಶ್ವತ್ಕುಮಾರ್, ಜೊತೆ ಕಾರ್ಯದರ್ಶಿ ಸುಜಯ್ ಶೆಟ್ಟಿ, ಹಿತರಕ್ಷಣಾ ವೇದಿಕೆಯ ಸದಸ್ಯ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.