ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ 2025-26ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಸೆ.13ರಂದು ಹಮ್ಮಿಕೊಳ್ಳಲಾಯಿತು.
ಘಟಕ 1ರ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ. ರೊನಾಲ್ಢ್ ಪ್ರವೀಣ್ ಕೊರೆಯಾ ಪ್ರಾಸ್ತವಿಕ ನುಡಿಗಳನ್ನು ಆಡಿದರು. ಸಮಾರಂಭವನ್ನು ದೀಪ ಬೆಳಗಿಸುವುದರ ಮೂಲಕ ಮಂಗಳೂರು ಹೊಸ ದಿಗಂತ ಪತ್ರಿಕಾ ಪ್ರತಿನಿಧಿ ಕೀರ್ತಿ ರಾಜ್ ಕರಂದಾಡಿ ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ತಮ್ಮ ಕಾಲೇಜಿನ ದಿನಗಳಲ್ಲಿ ಎನ್. ಎಸ್. ಎಸ್. ಸ್ವಯಂ ಸೇವಕರಾಗಿ ತಮ್ಮಲ್ಲಿ ಆದ ಪರಿಪೂರ್ಣ ವ್ಯಕ್ತಿತ್ವ ವಿಕಸನದ ಸವಿ ನೆನಪನ್ನು ಹಂಚಿಕೊಂಡರು. ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಸಂವಹನ ಕುಶಲತೆ, ಮುಂದಾಳತ್ವ ಕುಶಲತೆ, ಆತ್ಮವಿಶ್ವಾಸ ಮತ್ತು ಮಾನವೀಯ ಸಂಬಂಧಗಳ ಕುಶಲತೆಯ ವಿಕಾಸನಕ್ಕೆ ವೇದಿಕೆಯನ್ನು ಕಲ್ಪಿಸುತ್ತದೆ ಎಂದೂ ತಮ್ಮ ಭಾಷಣದಲ್ಲಿ ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುರೇಶ್ ವಿ. ಅವರು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ವಿದ್ಯಾರ್ಥಿಗಳಿಗೆ ಸೇವಾ ಯೋಜನೆಯ ಮಹತ್ವವನ್ನು ವಿವರಿಸುವ ಜೊತೆಗೆ, ತಾವು ಎನ್. ಎಸ್. ಎಸ್. ಅಧಿಕಾರಿಯಾಗಿದ್ದ ದಿನಗಳ ಅನುಭವವನ್ನು ಹಂಚಿಕೊಂಡರು. ಸಮಾರಂಭದಲ್ಲಿ ಘಟಕ 1ಮತ್ತು 2ರ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಪ್ರೊ. ರೊನಾಲ್ಢ್ ಪ್ರವೀಣ್ ಕೊರೆಯಾ ಮತ್ತು ಪ್ರೊ. ಕವಿತ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಪದಾಧಿಕಾರಿಗಳಾದ ಕ್ರಿತಿಕ್, ಮನೀಷ್, ನೀಶಾ, ತೇಜಾಕ್ಷಿ ಉಪಸ್ಥಿತರಿದ್ದರು. ಸ್ವಯಂ ಸೇವಕರು ಶ್ರಮದಾನ ನಡೆಸಿದರು. ಸ್ವಯಂ ಸೇವಕಿ ಶೈನಾ ಸ್ವಾಗತಿಸಿದರು. ಚಿತ್ರ ಮತ್ತು ಅನ್ವಿತ ಕಾರ್ಯಕ್ರಮವನ್ನು ನಿರೂಪಿಸಿದರು. ನೀಶಾ ವಂದನಾರ್ಪಣೆಯನ್ನು ಸಲ್ಲಿಸಿದರು.