ಬೆಳ್ತಂಗಡಿ: ದೇಶವು ಸದೃಢತೆಯಿಂದ ಅಭಿವೃದ್ಧಿಯ ಪಥದತ್ತ ಸಾಗಲು ಪ್ರತಿಯೊಬ್ಬ ನಾಗರಿಕನೂ ಸಂವಿಧಾನಾತ್ಮಕ ಕಾನೂನುಗಳನ್ನು ಪಾಲಿಸಬೇಕು ಎಂದು ಕರ್ನಾಟಕ ವಿಧಾನ ಪರಿಷತ್ತಿನ ಶಾಸಕ ಪ್ರತಾಪ್ ಸಿಂಹ ನಾಯಕ್ ಹೇಳಿದರು. ಅವರು ವಾಣಿ ಪದವಿ ಪೂರ್ವ ಕಾಲೇಜಿನ ಮತದಾರರ ಸಾಕ್ಷರತಾ ಸಂಘದಿಂದ ನಡೆದ ‘ಸಂಸತ್ತಿನ ಅಣಕು ಪ್ರದರ್ಶನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಜಗತ್ತಿಗೇ ಮಾದರಿಯಾದ ಬೃಹತ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಹೆಮ್ಮೆಯಿಂದ ಬದುಕುತ್ತಿದ್ದೇವೆ. ಇದಕ್ಕೆ ಕಾರಣ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಆಗಿನ ಹಿರಿಯ ಮುಖಂಡರು ಕಂಡ ಕನಸಾಗಿದೆ. ವಿದ್ಯಾರ್ಥಿಗಳು ಆಡಳಿತಾತ್ಮಕ ವ್ಯವಸ್ಥೆಗಳನ್ನು ತಿಳಿದುಕೊಳ್ಳಬೇಕು. ಮತದಾನ ಮಾಡುವುದು ನಮ್ಮ ಹಕ್ಕಾಗಿದೆ. ಪ್ರತಿಯೊಬ್ಬರು ಮತದಾನ ಮಾಡುವುದರ ಮೂಲಕ ದೇಶಕ್ಕೆ ಉತ್ತಮ ನಾಯಕರನ್ನು ನೀಡಬಹುದು. ಇದರಿಂದ ದೇಶವು ಬಲಿಷ್ಠವಾಗಲು ಸಾಧ್ಯವಾಗುತ್ತದೆ ಎಂದರು.
ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ. ಅಧ್ಯಕ್ಷತೆ ವಹಿಸಿದ್ದರು. ವಾಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಿ.ಕುಶಾಲಪ್ಪ ಗೌಡ, ಜೊತೆ ಕಾರ್ಯದರ್ಶಿ ಶ್ರೀನಾಥ್ ಕೆ.ಎಂ., ಆಡಳಿತಾಧಿಕಾರಿ ಪ್ರಸಾದ್ ಕುಮಾರ್, ವಾಣಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಲಕ್ಷ್ಮೀನಾರಾಯಣ ಕೆ. ಉಪಸಿತರಿದ್ದರು.
ಕಾಲೇಜಿನ ಮತದಾರರ ಸಾಕ್ಷರತಾ ಸಂಘದ ಸಂಯೋಜಕಿ ಮೀನಾಕ್ಷಿ ಸ್ವಾಗತಿಸಿದರು. ಅರುಫಾ ಸುಹಾನ ಮತ್ತು ಸುಮಶ್ರೀ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ದಿನೇಶ್ ಗೌಡ ಧನ್ಯವಾದವಿತ್ತರು.