ಗುರುವಾಯನಕೆರೆ: ಅಕ್ರಮ ಕಸಾಯಿಖಾನೆ ಅಡ್ಡೆ ಮೇಲೆ ಬೆಳ್ತಂಗಡಿ ಪೊಲೀಸರಿಂದ ದಾಳಿ-ದನಗಳ ಪರಿಕರಗಳು ವಶಕ್ಕೆ: ಆರೋಪಿಗಳು ಪರಾರಿ

0

ಬೆಳ್ತಂಗಡಿ: ಅಕ್ರಮ ಕಸಾಯಿಖಾನೆ ಅಡ್ಡೆ ಮೇಲೆ ಬೆಳ್ತಂಗಡಿ ಪೊಲೀಸರಿಂದ ದಾಳಿ ದನಗಳ ತಲೆ ಸಹಿತ ಪರಿಕರಗಳು ಪತ್ತೆಯಾದ ಘಟನೆ ಗುರುವಾಯನಕೆರೆಯ ಕುವೆಟ್ಟು ಎಂಬಲ್ಲಿ ಸೆ.4ರಂದು ರಾತ್ರಿ ನಡೆದಿದೆ. ದಾಳಿ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಅಕ್ರಮವಾಗಿ ದನವನ್ನು ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಗುರುವಾಯನಕೆರೆ ಪಿಲಿಚಂಡಿಕಲ್ಲಿನ ಸಮೀಪ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ಸಂದರ್ಭದಲ್ಲಿ ದಾಳಿ ಮಾಡಿದಾಗ ಮಾಂಸಕ್ಕಾಗಿ ಕಡಿದ ದನಗಳ ತಲೆಗಳು ಹಾಗೂ ಇತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಎಂಬಲ್ಲಿ ಮಹಮ್ಮದ್ ರಫೀಕ್ ಯಾನೆ ಅಪ್ಪಿ ಎಂಬಾತನ ಮನೆಯಲ್ಲಿ ಅಕ್ರಮವಾಗಿ ದನಗಳನ್ನು ವಧೆ ಮಾಡುತ್ತಿರುವ ಮಾಹಿತಿ ಮೇರೆಗೆ ಮೇಲಾಧಿಕಾರಿಗಳಿಂದ ಸರ್ಚ್ ವಾರಂಟ್ ಪಡೆದು ಬೆಳ್ತಂಗಡಿ ಪೊಲೀಸರು ದಾಳಿ ಮಾಡಿದ್ದಾರೆ.

ಈ ವೇಳೆ ಸ್ಥಳದಿಂದ ಮೂರು ಕತ್ತಿ, ಎರಡು ಮರದ ಹಿಡಿ ಇರುವ ಚೂರಿ, ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರ, ಒಂದು ಮರದ ತುಂಡು, ಒಂದು ನೀಲಿ ಟರ್ಪಾಲು, ಜೀವಂತ ಒಂದು ಹಸು ಮತ್ತು ಒಂದು ಕರು, ದನದ ತ್ಯಾಜ್ಯ ತುಂಬಿದ ಒಂದು ಓಮಿನಿ ಕಾರು, ಕಡಿದ ದನಗಳ 9 ತಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಪಶು ಇಲಾಖೆಯ ವೈದ್ಯರನ್ನು ಕರೆದು ಮಹಜರು ನಡೆಸಿ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ 112(2),303(2) BNS 2023 ಮತ್ತು ಕಲಂ 4,5,6,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ಅಡಿಯಲ್ಲಿ ಆರೋಪಿ ಮಹಮ್ಮದ್ ರಫೀಕ್ ಯಾನೆ ಅಪ್ಪಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳು ದಾಳಿ ವೇಳೆ ಪರಾರಿಯಾಗುವಲ್ಲಿ ಯಶಸ್ವುಯಾಗಿದ್ದಾರೆ. ಪ್ರಮುಖ ಆರೋಪಿ ಮೊಹಮ್ಮದ್‌ ರಫೀಕ್ ಯಾನೆ ಅಪ್ಪಿಗೆ ಬೆಳ್ತಂಗಡಿ ಪೊಲೀಸರು ಹಲವು ಭಾರಿ ಎಚ್ಚರಿಕೆ ನೀಡಿದ್ದರು ಈತ ಮತ್ತೆ ದನ ವಧೆ ಮಾಡುವ ದಂಧೆ ಮುಂದುವರಿಸಿದ್ದ ಎನ್ನಲಾಗಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ್ ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್ ಯಲ್ಲಪ್ಪ ಹೆಚ್ ಮಾದರ ಹಾಗೂ ಸಿಬ್ಬಂದಿ ಶ್ರೀನಿವಾಸ್, ಸತೀಶ್, ಜಗದೀಶ್ ಚಾಲಕ ಧರೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here