ಮರೋಡಿ: ಆದಿಶಕ್ತಿ ಸೇವಾ ಸಮಿತಿ ಪಲಾರಗೋಳಿ ವತಿಯಿಂದ 13ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.27ರಂದು ಪಲಾರಗೋಳಿ ಮೈದಾನದಲ್ಲಿ ಆದಿಶಕ್ತಿ ಸೇವಾ ಸಮಿತಿಯ ಅಧ್ಯಕ್ಷ ರತ್ನಾಕರ ಬುಣ್ಣನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬೆಳಿಗ್ಗೆ ಮಹಾಗಣಪತಿ ದೇವರ ಪ್ರತಿಷ್ಠೆ, ಭಜನಾ ಕಾರ್ಯಕ್ರಮ, ಗಣಹೋಮ, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ, ಲಘು ಉಪಹಾರ, ಸಂಧ್ಯಾ ಪೂಜೆ, ರಾತ್ರಿ ಮಹಾ ಪೂಜೆ, ವಿಗ್ರಹ ವಿಸರ್ಜನಾ ಮೆರವಣಿಗೆ ನಡೆಯಿತು. ಶಾಸಕ ಹರೀಶ್ ಪೂಂಜ ಆಗಮಿಸಿ, ದೇವರ ಪ್ರಸಾದ ಸ್ವೀಕರಿಸಿದರು. ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆದಿಶಕ್ತಿ ಸೇವಾ ಸಮಿತಿಯ ಅಧ್ಯಕ್ಷ ರತ್ನಾಕರ್ ಬುಣ್ಣನ್ ವಹಿಸಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಕೃತಜ್ಞತೆ ಅರ್ಪಿಸಿದರು. ವಿಶ್ವಹಿಂದೂ ಪರಿಷತ್ ಗೋರಕ್ಷಾ ಪ್ರಮುಖ್ ಸುನಿಲ್ ಕೆ.ಆರ್. ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಮಂಡಲ ಜಿಲ್ಲಾ ಉಪಾಧ್ಯಕ್ಷೆ ಜಯಂತ್ ಕೋಟ್ಯಾನ್, ನಿವೃತ್ತ ಅಧ್ಯಾಪಕ ವೆಂಕಟ್ ರಾವ್ ಬಿ.ಕೆ, ಹೆಚ್‌ಡಿಎಫ್‌ಸಿ ಬ್ಯಾಂಕ್ ಉಡುಪಿ ಇದರ ಜಿಲ್ಲಾ ಮುಖ್ಯಸ್ಥ ರವೀಂದ್ರ ಅಂಚನ್, ಮರೋಡಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಪದ್ಮಶ್ರೀ ಜೈನ್, ಗ್ರಾ.ಪಂ. ಸದಸ್ಯರಾದ ಉಮೇಶ್ ಸಾಲ್ಯಾನ್, ಸುನಂದ ಉಪಸ್ಥಿತರಿದ್ದರು.
ಗಣೇಶೋತ್ಸವದ ಅಂಗವಾಗಿ ಪುರುಷರು ಮತ್ತು ಮಹಿಳೆಯರಿಗೆ ಮುಕ್ತ ಹಗ್ಗಜಗ್ಗಾಟ, ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಪೆರಾಡಿ ಶಾಂಭವಿ ನೃತ್ಯ ಕೇಂದ್ರದ ನಾಟ್ಯ ಗುರು ಹರಿಶ್ಚಂದ್ರ ಪೆರಾಡಿ ಇವರ ಶಿಷ್ಯ ವರ್ಗದವರಿಂದ ಭರತನಾಟ್ಯ ಹಾಗೂ ಜಾನಪದ ನೃತ್ಯ ಕಾರ್ಯಕ್ರಮ ನಡೆಯಿತು. ಗಣೇಶೋತ್ಸವ ಪದಾಧಿಕಾರಿಗಳು ಸಹಕರಿಸಿದರು.