
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬೆಳ್ತಂಗಡಿ ತಾಲೂಕಿನ 81 ಗ್ರಾಮಗಳಿಂದ ಸಮಸ್ತ ಜೈನ ಧರ್ಮೀಯ ಶ್ರಾವಕ ಶ್ರಾವಿಕೆಯರು ವಾಹನದ ಮೂಲಕ ಜಾಥಾವನ್ನು ಆ.31ರಂದು ಕ್ಷೇತ್ರಕ್ಕೆ ಬಂದು ನಂತರ ಅಮೃತವರ್ಷಿಣಿ ಸಭಾಂಗಣದಲ್ಲಿ ಧರ್ಮ ಸಂರಕ್ಷಣಾ ಸಮಾವೇಶ ನಡೆಯಿತು.
ಈ ಜಾಥಾದಲ್ಲಿ ತಾಲೂಕಿನ ಮೂಲೆ ಮೂಲೆಗಳಿಂದ 580ಕ್ಕೂ ಅಧಿಕ ವಾಹನಗಳಿಂದ ಎಲ್ಲ ಶ್ರಾವಕರು ಪಾಲ್ಗೊಂಡಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದೊಂದಿಗೆ ಹಾಗೂ ಡಾ. ಡಿ. ವೀರೇಂದ್ರ ಹೆಗ್ಗಡೆಯವರೊಂದಿಗೆ ನಾವಿದ್ದೇವೆ. ಹಾಗೂ ಪುಣ್ಯ ಕ್ಷೇತ್ರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆ ಎಂದು ಸಂದೇಶ ಸಾರುವ ಮೂಲ ಉದ್ದೇಶದೊಂದಿಗೆ ಈ ವಾಹನ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.
ಸದ್ರಿ ಜಾಥಾವು ಬೆಳ್ತಂಗಡಿಯ ಇತಿಹಾಸ ಪ್ರಸಿದ್ಧ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಬಸದಿಯಿಂದ ಬೆಳಗ್ಗೆ 8:30ಕ್ಕೆ 3 ಬಸದಿಗಳಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿ ವಾಹನ ಜಾಥಾ ಆರಂಭಿಸಲಾಗಿದೆ.
ವಿಶ್ವದ ಎಲ್ಲಾ ಕಡೆ ಶಾಂತಿ ನೆಲೆಸಿ ಪ್ರತಿಯೊಬ್ಬರ ಬದುಕು ಸುಂದರವಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿ ಜಾಥಾ ಮುನ್ನಡೆಸಿದರು. ವಿಶೇಷವಾಗಿ ಈ ಜಾಥಾದಲ್ಲಿ ಸಂಘಟಕರು ಯಾರೆಂದರೆ ಪ್ರತಿಯೊಬ್ಬ ಶ್ರಾವಕ ಮತ್ತು ಶ್ರಾವಕಿಯರು ಈ ರೀತಿಯ ಹೊಸ ಯೋಚನೆ ಮತ್ತು ಯೋಜನೆಯೊಂದಿಗೆ ಜಾಥಾವನ್ನು ಹಮ್ಮಿಕೊಂಡಿದ್ದರು.
ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಮಾತನಾಡಿ ಎಷ್ಟೋ ದೂರದವರು ಬರುತ್ತಾರೆ ಹತ್ತಿರದವರು ಯಾಕೆ ಬರುತ್ತಿಲ್ಲ ಎಂಬ ಮಾತು ಬರುತ್ತಿತ್ತು. ಅದಕ್ಕೆ ನೀವೆಲ್ಲರೂ ಸೇರಿರುವುದು ತುಂಬಾ ಸಂತೋಷವಾಯಿತು. ನಿಮ್ಮೆಲ್ಲರಿಗೂ ನಮ್ಮ ಮೇಲೆ ಪ್ರೀತಿ ಇತ್ತು ಅದನ್ನು ತೋರಿಸುವ ಅವಕಾಶ ಇರಲಿಲ್ಲ ಆದರೆ ಇಂದು ಅವಕಾಶ ಸಿಕ್ಕಿದೆ. ಸತ್ಯಕ್ಕೆ ಯಾವತ್ತು ಜಯ ಇದೆ ಅದು ಹೊರ ಬರುತ್ತದೆ ಧರ್ಮಸ್ಥಳದಲ್ಲಿ ಹುಟ್ಟಬೇಕಾದರೆ ನಾವೆಲ್ಲರೂ ಪುಣ್ಯ ಮಾಡಿರಬೇಕು ನಾವು ಪುಣ್ಯ ಮಾಡಿದ್ದೇವೆ. ಪುಣ್ಯಕ್ಷೇತ್ರದಲ್ಲಿ ಸೇವೆ ಮಾಡುವ ಅವಕಾಶ ನಮಗೆ ಸಿಕ್ಕಿದೆ ಎಂದರು.
ಬಳಿಕ ಭಗವಾನ್ ಚಂದ್ರ ಸ್ವಾಮಿ ಬಸದಿಗೆ ಭೇಟಿ ನೀಡಿ 9 ಬಾರಿ ಪಂಚ ನಮಸ್ಕಾರ ನೆರವೇರಿಸಿದರು. ವೇದಿಕೆಯಲ್ಲಿ ಡಿ. ಹರ್ಷೇಂದ್ರ ಕುಮಾರ್, ಸುರೇಂದ್ರ ಕುಮಾರ್, ಹೇಮಾವತಿ ವಿ ಹೆಗ್ಗಡೆ, ಸುಪ್ರಿಯಾ ಹರ್ಷೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಅಮಿತ್ ಜೈನ್, ನೀತಾ ರಾಜೇಂದ್ರ ಕುಮಾರ್, ಶ್ರಾದ್ಧ ಅಮಿತ್ ಜೈನ್, ಶ್ರೇಯಸ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಧರಣೇಂದ್ರ ಕುಮಾರ್ ಜೈನ್ ಸ್ವಾಗತಿಸಿ, ನಿರೂಪಿಸಿದರು. ಶಶಿಕಿರಣ್ ಜೈನ್ ವಂದಿಸಿದರು l.