ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ‘ನಮ್ಮ ಮನೆ’ ಶಾಖೆಯ ವಾರ್ಷಿಕೋತ್ಸವ

0

ಬೆಳ್ತಂಗಡಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಬೆಳ್ತಂಗಡಿ ತಾಲೂಕಿನ ಮೊದಲ ಯೋಗ ತರಗತಿ ‘ನಮ್ಮ ಮನೆ’ ಶಾಖೆ ಗುರುವಾಯನಕೆರೆ ಇದರ ಮೊದಲನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ನಮ್ಮ ಮನೆ ಹವ್ಯಕ ಭವನ ಗುರುವಾಯನಕೆರೆಯಲ್ಲಿ ಆ. 24ರಂದು ಹಮ್ಮಿಕೊಳ್ಳಲಾಗಿತ್ತು.

ಬೆಳೆಗ್ಗೆ 9.15ರ ವೇಳೆಗೆ ಶಾಖೆಯ ಯೋಗಬಂಧುಗಳು ಸೇರಿ ಭಜನೆ ಹಾಗೂ ಕುಣಿತ ಭಜನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದರು. ಬಳಿಕ ಯೋಗಬಂಧುಗಳು ಹಾಗೂ ಯೋಗೇತರ ಬಂಧುಗಳಿಗಾಗಿ ಚಟುವಟಿಕೆಯುಕ್ತ ಆಟಗಳನ್ನು ಶಾಖೆಯ ಯೋಗ ಬಂಧುಗಳಾದ ಪ್ರೀತೇಶ್ ಹಾಗೂ ನಿತೇಶ್ ನಡೆಸಿಕೊಟ್ಟರು.

10.30ಕ್ಕೆ ಗಣ್ಯರಿಂದ ದೀಪ ಬೆಳಗಿಸಿ ಆರಂಭವಾದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖೆಯ ಸಂಚಾಲಕಿ ಸುಮ ಲತಾ ಅವರು ವಹಿಸಿದರು. ಮುಖ್ಯ ಅತಿಥಿಗಳಾಗಿ ನಮ್ಮ ಮನೆ, ಹವ್ಯಕ ಭವನ ಅಧ್ಯಕ್ಷ ಪರಮೇಶ್ವರ ಭಟ್ ಶುಭ ಹಾರೈಸಿದರು. ನಿಕಟಪೂರ್ವ ಅಧ್ಯಕ್ಷ ಕೃಷ್ಣ ಭಟ್ ಕಾಂತಜೆ ಅವರು ಶಾಖೆಯಲ್ಲಿ ನಿರಂತರ ಯೋಗ ನಡೆಸುತ್ತಾ ಇರುವ ಕಾರ್ಯವನ್ನು ಶ್ಲಾಘಿಸಿದರು ಹಾಗೂ ಶುಭ ಹಾರೈಸಿದರು.

ಮಂಗಳೂರು ಮಹಾನಗರ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಪ್ರಮುಖರು ಗೀತಾ ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ಶಾಖೆಯ ಯೋಗಬಂಧುವಾದ ಜಯಂತಿ ಮಾತನಾಡುತ್ತ ನಿರಂತರವಾಗಿ ಶಿಕ್ಷಕರಾಗಿ ಯೋಗ ಶಿಕ್ಷಣ ನೀಡುತ್ತಿರುವ ಶಿಕ್ಷಕರ ನಿಸ್ವಾರ್ಥ ಮನೋಭಾವವನ್ನು ಸ್ಮರಿಸುತ್ತಾ ಸದ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಗುರು-ಶಿಷ್ಯ ಸಂಬಂಧದ ಬಗ್ಗೆ ಮಾತನಾಡಿದರು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಉಪ್ಪಿನಂಗಡಿ ನಗರ ಸಂಚಾಲಕ ಸಂತೋಷ್ ಕುಮಾರ್ ಅವರು ಮಾರ್ಗದರ್ಶನ ನೀಡುತ್ತಾ ಸಮಿತಿಯಿಂದ ಪಡೆದ ಸಂಸ್ಕಾರ ಮರೆಯದೆ ಹೇಗೆ ನಾವು ವಿನಯವಂತರಾಗಿ ನಡೆದುಕೊಳ್ಳಬೇಕೆಂಬ ಸೂಚನೆ ನೀಡಿದರು.

12 ಘಂಟೆಯ ನಂತರ ನಮ್ಮ ಮನೆ ಶಾಖೆ ಗುರುವಾಯನಕೆರೆ, ಪಾಂಡುರಂಗ ಶಾಖೆ ಗುರುವಾಯನಕೆರೆ ಹಾಗೂ ನೆಲ್ಯಾಡಿ ಶಬರೀಶ ಶಾಖಾ ಯೋಗ ಬಂಧುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಶಾಖಾ ಯೋಗ ಬಂಧುಗಳಾದ ಗಿರೀಶ್ ಹಾಗೂ ದಮಯಂತಿಯವರ ನಿರೂಪಣೆಯಲ್ಲಿ ನೃತ್ಯ, ನಾಟಕ ಹಾಗೂ ಇತರ ಮನರಂಜನಾ ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿ ಬಂತು.

1.30ರ ಹೊತ್ತಿಗೆ ಪ್ರಸಾದ ಭೋಜನ ಗ್ರಹಣದೊಂದಿಗೆ ಮುಕ್ತಾಯಗೊಂಡ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಹಾಗೂ ಮಂಗಳೂರು ಭಾಗದ 88 ಯೋಗ ಬಂಧುಗಳು ಹಾಗೂ 45 ಯೋಗೇತರ ಬಂಧುಗಳು ಸೇರಿ 133 ಮಂದಿ ಭಾಗವಹಿಸಿದ್ದರು. ಸಮಿತಿಯ ಮಂಗಳೂರು ಮಹಾನಗರ ಸಂಚಾಲಕರು, ಪ್ರಮುಖರು ಹಾಗೂ ಉಪ್ಪಿನಂಗಡಿ ನಗರ ಪ್ರಮುಖರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಉತ್ತಮವಾಗಿ ನಡೆಯಿತು.

ಶಾಖೆಯ ಯೋಗ ಬಂಧುಗಳಾದ ಜಯಮಣಿ ಸ್ವಾಗತಿಸಿದರು. ಗಿರೀಶ್ ಅವರು ವಾರ್ಷಿಕ ವರದಿಯನ್ನು ಮಂಡಿಸಿದರು. ಅನಿಸಿಕೆಯನ್ನು ವಿಜಯ್, ಸುಚಿತ್ರ, ವಿನಯ್, ಜಯಂತಿ ಹಾಗೂ ಪುರಂದರ ಅವರು ಹಂಚಿಕೊಂಡರು. ಶಾಖಾ ಶಿಕ್ಷಕ ದಯಾನಂದ ಸಭಾ ಕಾರ್ಯಕ್ರಮದ ವೈಯಕ್ತಿಕ ಪ್ರಾರ್ಥನೆಯನ್ನು ಮಾಡಿದರು. ಶಿವಕುಮಾರ್ ಹಾಗೂ ಭಾರತಿ ಅವರು ನಿರೂಪಣೆಗೈದರು. ಯೋಗಬಂಧು ಪ್ರಿಯ ವಂದಿಸಿದರು.

LEAVE A REPLY

Please enter your comment!
Please enter your name here