
ಬೆಳ್ತಂಗಡಿ: ಸಿಂಹ ಸಂಕ್ರಮಣದಂದು ಅಜಿಲಸೀಮೆಯ ಸಂಪ್ರದಾಯದಂತೆ ಆ.30ರಂದು ಸೋಮನಾಥೇಶ್ವರ ಗದ್ದೆಯಲ್ಲಿ ನಾಲ್ಕೆತ್ತು(ನಾಲೇರು) ಕಾರ್ಯಕ್ರಮ ನಡೆಯಲಿದೆ. ಕೃಷಿ ಕಾವ್ಯಕ್ಕೆ ನಾಂದಿ ಹಾಡುವ ಕಾರ್ಯಕ್ರಮ ಇದಾಗಿದ್ದು, ಕೃಷಿ ಸಲಕರಣೆಗಳ ಪೂಜೆಯೊಂದಿಗೆ ಕೃಷಿ ಆರಂಭಿಸಲಾಗುವುದು. ಅಳದಂಗಡಿ ಸೋಮನಾಥೇಶ್ವರೀ ದೇವಿ ಸನ್ನಿಧಿಯಲ್ಲಿ ಕೃಷಿ ಸಲಕರಣೆಗಳಿಗೆ ಅಸ್ರಣ್ಣರಿಂದ ಪೂಜೆ. ಅಸ್ರಣ್ಣರು ಕಲಶ ಸಮೇತ ಪರಿವಾರದೊಂದಿಗೆ ಮೆರವಣಿಗೆಯಲ್ಲಿ ದೇವರ ಗದ್ದೆಗೆ ಹೋಗಿ ಭೂಮಿ ಪೂಜೆ ಮಾಡುತ್ತಾರೆ. ದೇವರ ಗದ್ದೆಯಲ್ಲಿ ಅಂಗಾರ ಕಲ್ಕುಡ ದೈವಕ್ಕೆ ತಂಬಿಲ, ಹೂ ಕಂಬ ಹಾಕುವುದು. ಕಾನದ ಕಟದ ಆಳುಗಳಿಂದ ಗದ್ದೆಗೆ ನಾಲ್ಕು ಬರೆ ಹಾಕುವುದು, ನಾಲ್ಕು ಬದಿ ಕಡಿದು ಬೀಜ ಬಿತ್ತನೆ ಮಾಡುವುದು. ನಂತರ ಸೀಮೆಯಲ್ಲಿ ಕೃಷಿಕಾರ್ಯ ಆರಂಭ ಅನ್ನುವುದು ವಾಡಿಕೆ. ನಾಲ್ಕೆತ್ತು ಕಂಬಳದ ದಿನವೇ ರಾತ್ರಿ ಪಡ್ಡಾರಬೆಟ್ಟು ಕೊಡಮಣಿತ್ತಾಯ ಸ್ಥಾನದಲ್ಲಿ ನೇಮ ನಡೆಯಲಿದೆ.