ಬೆಳ್ತಂಗಡಿ: ಧರ್ಮಸ್ಥಳ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕೊಲೆಗಳಾದ ಮತ್ತು ಅತ್ಯಾಚಾರಕ್ಕೊಳಗಾಗಿ ಕೊಲೆಗೊಳಗಾದ ಅನೇಕ ಮೃತದೇಹಗಳನ್ನು ಹಾಗೂ ಸಾಕ್ಷ್ಯಗಳನ್ನು ತನಗೆ ನಿರಂತರವಾಗಿ ಪ್ರಾಣ ಬೆದರಿಕೆಯೊಡ್ಡಿ ಬಲವಂತವಾಗಿ ತನ್ನಲ್ಲಿ ಹೂತು ಹಾಕಿಸಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಪೊಲೀಸ್ ಇಲಾಖೆಗೆ ದೂರು ನೀಡಿದ್ದ ಅನಾಮಿಕ ವ್ಯಕ್ತಿ ಜು.೧೧ರಂದು ಬೆಳ್ತಂಗಡಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸಂದೇಶ್ ಕೆ. ಅವರ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ದೇಶಪಾಂಡೆ ಅವರ ಜೊತೆ ಇನ್ನೋವಾ ಕಾರಿನಲ್ಲಿ ಸಂಜೆ ೪.೩೫ರ ವೇಳೆಗೆ ನ್ಯಾಯಾಲಯಕ್ಕೆ ಬಂದ ಅನಾಮಧೇಯ ವ್ಯಕ್ತಿ ಸುಮಾರು ಒಂದು ಗಂಟೆ ೨೫ ನಿಮಿಷಗಳ ಕಾಲ ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆ ದಾಖಲಿಸಿದ್ದಾರೆ. ಗುರುತು ಪತ್ತೆಯಾಗದಂತೆ ತಲೆಯಿಂದ ಕಾಲಿನವರೆಗೆ ಕಪ್ಪು ಬಣ್ಣದ ಮುಸುಕು ಧರಿಸಿ ಬಂದಿದ್ದ ಅನಾಮಿಕ ವ್ಯಕ್ತಿ ತಾನು ಹೂತು ಹಾಕಿದ್ದ ಸ್ಥಳವೊಂದರಿಂದ ಈಗಾಗಲೇ ಹೊರ ತೆಗೆದಿರುವ ಮೃತದೇಹದ ಕೆಲವು ವಸ್ತುಗಳನ್ನು ಬ್ಯಾಗ್‌ನಲ್ಲಿರಿಸಿಕೊಂಡು ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಧೀಶರ ಎದುರು ಹೇಳಿಕೆ ನೀಡಿದ ಬಳಿಕ ದೂರುದಾರನನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದೊಯ್ದು ಸುಮಾರು ೪ ಗಂಟೆ ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿದೆ. ಈ ವೇಳೆ ದೂರುದಾರ ತನ್ನ ಬ್ಯಾಗ್‌ನಲ್ಲಿದ್ದ ಮೃತದೇಹದ ಭಾಗಗಳನ್ನು ವಕೀಲರ ಸಮ್ಮುಖದಲ್ಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಮೃತದೇಹದ ಭಾಗಗಳನ್ನು ತಮ್ಮ ವಶಕ್ಕೆ ಪಡೆದಿರುವ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ತನ್ನ ದೂರಿನಲ್ಲಿ ತಾನು ಈ ಹಿಂದೆ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೆ ಎಂದು ತಿಳಿಸಿದ್ದ ವ್ಯಕ್ತಿ ನ್ಯಾಯಾಧೀಶರ ಮತ್ತು ಪೊಲೀಸರ ಎದುರು ನಿರಾತಂಕವಾಗಿ ಮಾತನಾಡಿ ವಿವರ ನೀಡಿದ್ದಾರೆ. ಅಲ್ಲದೆ ದೂರಿನಲ್ಲಿ ಉಲ್ಲೇಖಿಸಿರುವಂತೆ ತನ್ನನ್ನು ಬೆದರಿಸಿ ಹೆಣಗಳನ್ನು ಹೂತು ಹಾಕಲಾಗಿರುವ ಸ್ಥಳಗಳನ್ನು ತಾನು ಗುರುತಿಸಲು ಸಿದ್ಧ ಎಂದು ತಿಳಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಮುಸುಕು ಹಾಕಿಕೊಂಡು ನ್ಯಾಯಾಲಯಕ್ಕೆ ಹಾಜರು -ವಕೀಲರಿಗೂ ಅವಕಾಶ ನೀಡದ ನ್ಯಾಯಾಧೀಶರು: ಬೆಳ್ತಂಗಡಿ ನ್ಯಾಯಾಲಯಕ್ಕೆ ಬಂದಿದ್ದ ದೂರುದಾರರ ದೂರನ್ನು ಬಿಎನ್‌ಎಸ್‌ಎಸ್ ಸೆಕ್ಷನ್ ೧೮೩ರಡಿಯಲ್ಲಿ ನ್ಯಾಯಾಧೀಶರು ದಾಖಲಿಸಿಕೊಂಡಿದ್ದಾರೆ. ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ದೇಶಪಾಂಡೆ ಮತ್ತಿತರರೊಂದಿಗೆ ಅನಾಮಧೇಯ ದೂರುದಾರ ನ್ಯಾಯಾಲಯಕ್ಕೆ ಆಗಮಿಸಿದ್ದರೂ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲು ಮಾಡುವ ವೇಳೆ ವಕೀಲರಿಗೆ ನ್ಯಾಯಾಧೀಶರ ಎದುರು ನಿಲ್ಲಲು ಅವಕಾಶ ನೀಡಲಾಗಿಲ್ಲ. ದೂರುದಾರ ನ್ಯಾಯಾಲಯದಲ್ಲಿ ಹೇಳಿಕೆ ನೀಡುವಾಗ ನಿಮ್ಮಿಬ್ಬರಲ್ಲಿ ಒಬ್ಬ ವಕೀಲರು ಜೊತೆಗಿರುವಂತೆ ಓಜಸ್ವಿ ಗೌಡ ಮತ್ತು ಸಚಿನ್ ಆರ್. ದೇಶಪಾಂಡೆಗೆ ಮೊದಲೇ ತಿಳಿಸಿದ್ದರು. ತಾವು ಅನಕ್ಷರಸ್ಥರಾಗಿದ್ದು ಈವರೆಗೆ ಯಾವುದೇ ನ್ಯಾಯಾಲಯಕ್ಕೆ ಹೋಗಿಲ್ಲ. ಆದ್ದರಿಂದ ನ್ಯಾಯಾಧೀಶರ ಎದುರು ಹಾಜರಾಗಿ ಹೇಳಿಕೆ ನೀಡುವಾಗ ನೀವು ಇರಬೇಕು ಎಂದು ದೂರುದಾರ ಹೇಳಿಕೊಂಡಿದ್ದರು. ಈ ಅಂಶವನ್ನು ಓಜಸ್ವಿ ಗೌಡ ಮತ್ತು ಸಚಿನ್ ದೇಶಪಾಂಡೆ ಅವರು ನ್ಯಾಯಾಧೀಶರಿಗೆ ತಿಳಿಸಿದರಾದರೂ ನ್ಯಾಯಾಧೀಶ ಸಂದೇಶ್ ಕೆ. ಅವರು ಅವಕಾಶ ನೀಡಲಿಲ್ಲ. ದೂರುದಾರನ ಹೇಳಿಕೆ ಪಡೆಯುವ ವೇಳೆ ವಕೀಲರು ಹಾಜರಿರುವುದನ್ನು ಒಪ್ಪುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದಾಗ ವಕೀಲರು ಅಲ್ಲಿಂದ ಹೊರ ಬಂದರು. ನಂತರ ಅನಾಮಧೇಯ ವ್ಯಕ್ತಿಯ ಹೇಳಿಕೆ ದಾಖಲು ಮಾಡಲಾಯಿತು. ಬಳಿಕ ಬಿಗಿ ಭದ್ರತೆಯೊಂದಿಗೆ ಕರೆ ತಂದು ಪೊಲೀಸ್ ಠಾಣೆಯಲ್ಲಿ ಹೇಳಿಕೆ ಪಡೆಯಲಾಯಿತು.
ಸಾಕ್ಷಿ ದೂರುದಾರನ ಗುರುತು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ-ಡಿವೈಎಸ್‌ಪಿ ವಿಚಾರಣೆ: ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ. ೩೯/೨೦೨೫ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಸಾಕ್ಷಿ ದೂರುದಾರರ ಗುರುತನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ ಬಗ್ಗೆ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಿಂದ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದಿನಿಂದ ಹಲವಾರು ಅಪರಾಧ ಕೃತ್ಯಗಳು ನಡೆದಿದ್ದು ಅವುಗಳ ಮಾಹಿತಿ ನೀಡುತ್ತೇನೆಂದು ಪತ್ರ ಬರೆದು ವಕೀಲರ ಮೂಲಕ ಪೊಲೀಸರನ್ನು ಸಂಪರ್ಕಿಸಿದ್ದ ವ್ಯಕ್ತಿ ಎಸ್‌ಪಿ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಬೆಳ್ತಂಗಡಿ ನ್ಯಾಯಾಲಯಕ್ಕೆ ಮುಸುಕುಧಾರಿಯಾಗಿ ಹಾಜರಾದ ಬೆನ್ನಲ್ಲೇ ಆತನ ಗುರುತನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಲಾಗಿರುವುದರ ಬಗ್ಗೆ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
ಪ್ರಕರಣದ ಸಾಕ್ಷಿ ದೂರುದಾರರ ಗುರುತನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಈ ಬಗ್ಗೆ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಿಂದ ಇನ್ನೊಂದು ವಿಚಾರಣೆಯನ್ನು ಪ್ರಾರಂಭಿಸಲಾಗಿರುತ್ತದೆ ಎಂದು ಜುಲೈ ೧೩ರಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜುಲೈ ೧೧ರಂದು ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯಲ್ಲಿ ಜಿಲ್ಲೆಯ ಸಕ್ಷಮ ಪ್ರಾಧಿಕಾರ ಸದ್ರಿ ಪ್ರಕರಣದಲ್ಲಿ ಸಾಕ್ಷಿಯ ರಕ್ಷಣೆಗೆ ದಿನಾಂಕ ೧೦.೦೭.೨೦೨೫ರಂದು ಸಂಜೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಅನುಮೋದನೆ ನೀಡಿರುತ್ತದೆ. ಆದರೆ ಸಾಕ್ಷಿ ದೂರುದಾರರ ಗುರುತಿನ ರಕ್ಷಣೆಯ ವಿಚಾರದಲ್ಲಿ ಸಾಕ್ಷಿ ದೂರುದಾರರನ್ನು ಪ್ರತಿನಿಧಿಸಿರುವ ವ್ಯಕ್ತಿಗಳು ಪತ್ರಿಕಾ ಪ್ರಕಟಣೆ ಹಾಗೂ ಎಫ್.ಐ.ಆರ್ ಪ್ರತಿಯನ್ನು ಮಾಧ್ಯಮಗಳಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೀಡುವ ಮೂಲಕ ಸಾಕ್ಷಿ ದೂರುದಾರರ ವಯಸ್ಸು, ವೃತ್ತಿಯ ಸ್ಥಳ, ಚಹರೆ, ವೃತ್ತಿಯಲ್ಲಿದ್ದ ಅವಧಿ, ಸಮುದಾಯ ಮತ್ತು ಇತರೆ ಮಾಹಿತಿಗಳನ್ನು ಬಹಿರಂಗಗೊಳಿಸಿರುವುದರಿಂದ ಸ್ಥಳೀಯ ಅನೇಕರು ಸಾಕ್ಷಿ ದೂರುದಾರರನ್ನು ಅಂದಾಜಿಸಿರುತ್ತಾರೆ. ಆದಾಗ್ಯೂ ಎಲ್ಲಾ ಅಧಿಕೃತ ಮೂಲಗಳಿಂದ ಸಾಕ್ಷಿ ದೂರುದಾರರ ಗುರುತನ್ನು ಬಹಿರಂಗಪಡಿಸದಿರಲು ನಿರ್ಧರಿಸಲಾಗಿರುತ್ತದೆ ಹಾಗೂ ಈ ಬಗ್ಗೆ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರ ನೇತೃತ್ವದಲ್ಲಿ ಪ್ರತ್ಯೇಕ ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದರು.
ಜುಲೈ ೧೩ರಂದು ಸಾಮಾಜಿಕ ಜಾಲತಾಣದಲ್ಲಿ ಹೆಸರು ಬಹಿರಂಗ ಪಡಿಸಿರುವ ಕುರಿತು ವಿಚಾರಣೆಯನ್ನು ಡಿವೈಎಸ್‌ಪಿ ಕೈಗೆತ್ತಿಕೊಳ್ಳಲಿರುವುದಾಗಿ ಪೊಲೀಸ್ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ೧೧.೦೭.೨೦೨೫ರಂದು ಸಾಕ್ಷಿ ದೂರುದಾರರ ಪರವಾದ ವಕೀಲರು ಪತ್ರಿಕಾಗೋಷ್ಠಿಯಲ್ಲಿ ನೀಡಿರುವ ಕೆಲವು ಹೇಳಿಕೆಗಳು ವಾಸ್ತವಿಕವಾಗಿ ತಪ್ಪಾಗಿರುತ್ತದೆ. ಸದ್ರಿ ಪ್ರಕರಣದ ತನಿಖಾಧಿಕಾರಿಯನ್ನು ಬದಲಾಯಿಸಲು ಅಥವಾ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲು ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ಕೆಲವು ಗುಂಪನ್ನು ಪ್ರತಿನಿಧಿಸುತ್ತಿರುವ ವ್ಯಕ್ತಿಗಳು ಹೇಳುತ್ತಿದ್ದು ಈ ಬಗ್ಗೆ ಸಾಕ್ಷಿ ದೂರುದಾರರ ಪರವಾದ ವಕೀಲರಿಗೆ ಅರಿವಿದೆಯೇ ಎಂಬುದನ್ನು ಹಾಗೂ ಈ ಬಗ್ಗೆ ಸಾಕ್ಷಿ ದೂರುದಾರರ ನಿಲುವೇನು ಎಂಬುದನ್ನು ದೃಢಪಡಿಸಿಕೊಳ್ಳಬೇಕಾಗಿದೆ ಎಂದೂ ಪ್ರಕಟಣೆ ತಿಳಿಸಿದೆ.
ಮಾಧ್ಯಮಗಳು ಸಂಯಮ ವಹಿಸಿ-ಊಹಾಪೋಹಗಳಿಗೆ ಅವಕಾಶ ನೀಡಬೇಡಿ-ಪೊಲೀಸ್ ಇಲಾಖೆ ಮನವಿ: ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ ೨೧೧ರ ಅಡಿಯಲ್ಲಿ ದಾಖಲಾಗಿರುವ ಧರ್ಮಸ್ಥಳ ಪ್ರಕರಣದ ತನಿಖೆಯ ಸುತ್ತ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ಚರ್ಚೆಗಳ ಮಧ್ಯೆ ಸಂಯಮ ಮತ್ತು ಜವಾಬ್ದಾರಿಯುತ ವರದಿ ಮಾಡುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ. ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲು ಅಗತ್ಯವೆಂದು ಪರಿಗಣಿಸಲಾದ ಯಾವುದೇ ನಿರ್ದಿಷ್ಟ ಬೆಳವಣಿಗೆಗಳು ಅಥವಾ ಮಾಹಿತಿಯನ್ನು ಅಧಿಕೃತ ಮಾರ್ಗಸೂಚಿಗಳ ಮೂಲಕ ತಿಳಿಸಲಾಗುವುದು. ನಡೆಯುತ್ತಿರುವ ತನಿಖೆಗಳ ಸಮಯದಲ್ಲಿ ಮಾಧ್ಯಮ ವಿಚಾರಣೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮತ್ತು ಭಾರತೀಯ ಪತ್ರಿಕಾ ಮಂಡಳಿ ಹೊರಡಿಸಿದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಮುಖ್ಯವಾಹಿನಿಯ ಮಾಧ್ಯಮಗಳಿಗೆ ಸೂಚಿಸಲಾಗಿದೆ.
ತನಿಖೆಯ ವಿಧಾನ ಅಥವಾ ನಿರ್ದೇಶನದ ಬಗ್ಗೆ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ, ಅಥವಾ ಊಹೆಗಳು, ಹಲವಾರು ಊಹಾತ್ಮಕ ಕೋನಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಪೊಲೀಸರು ಯಾವ ರೀತಿ ತನಿಖೆ ನಡೆಸುತ್ತಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕೆಂದು ಹಾಗೂ ಪ್ರಕರಣದ ಬಗ್ಗೆ ಹರಿದಾಡುವ ಊಹಾಪೋಹಗಳಿಗೆ ಪೊಲೀಸರು ಸ್ಪಷ್ಟನೆ ನೀಡಬೇಕೆಂದು ನಿರೀಕ್ಷಿಸಬಾರದಾಗಿ ವಿನಂತಿ. ಹಾಗೆಯೇ ದೂರುದಾರರು ಅಥವಾ ಅವರ ಪರವಾಗಿ ಯಾರಾದರೂ ಪೊಲೀಸರ ಬಳಿ ಲಭ್ಯವಿರದ ಮಾಹಿತಿಗಳನ್ನು ನೇರವಾಗಿ ಮಾಧ್ಯಮಕ್ಕೆ ಹಂಚಿಕೊಂಡಿದ್ದಲ್ಲಿ ಈ ಬಗ್ಗೆಯೂ ಪೊಲೀಸ್ ಇಲಾಖೆಯಿಂದ ಪ್ರತಿಕ್ರಿಯೆ ನಿರೀಕ್ಷಿಸತಕ್ಕದಲ್ಲ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ವಕೀಲರ ವಿಚಾರಣೆ-ವಕೀಲರ ಪ್ರತ್ಯುತ್ತರ-ಸಾಕ್ಷಿದಾರನ ಇರುವಿಕೆ ಬಗ್ಗೆ ಯಾವುದೇ ಮಾಹಿತಿ ಪೊಲೀಸರೊಂದಿಗೆ ಹಂಚಿಕೊಳ್ಳದ ವಕೀಲರು-ಇ-ಮೇಲ್ ಸಂವಹನ-ಸಾಕ್ಷಿ ರಕ್ಷಣೆ ನೀಡಲು ಅಸಾಧ್ಯ-ಪೊಲೀಸ್ ಇಲಾಖೆ ಪ್ರಕಟಣೆ: ಸಾಕ್ಷಿಯ ಗುರುತು ರಕ್ಷಣೆಗಾಗಿ ಮನವಿ ಸಲ್ಲಿಸಲಾಗಿದ್ದ ಸಂದರ್ಭದಲ್ಲಿ ಸಾಕ್ಷಿದಾರನ ಪರವಾದ ವಕೀಲರು ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ಹಾಗೂ ಇತರ ಸಂವಹನ ನಡೆಸುವಾಗ ಹಲವು ಮಾಹಿತಿಗಳನ್ನು ಹಂಚಿಕೊಂಡಿರುವ ಬಗ್ಗೆ ವಕೀಲರನ್ನು ವಿಚಾರಣೆ ನಡೆಸಲಾಗಿದೆ. ಸಾಕ್ಷಿ ದೂರುದಾರರ ಕೋರಿಕೆಯ ಮೇರೆಗೆ ಸದ್ರಿ ಮಾಹಿತಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ ಎಂಬುದಾಗಿ ವಕೀಲರು ಪ್ರತ್ಯುತ್ತರ ಕಳುಹಿಸಿರುತ್ತಾರೆ. ಆದರೆ ಸದ್ರಿ ಪತ್ರಿಕಾ ಪ್ರಕಟಣೆ ಹಾಗೂ ಇತರ ಸಂವಹನಗಳ ಮೂಲಕ ನೀಡಿರುವ ಮಾಹಿತಿಗಳು ಸಾಕ್ಷಿ ಗುರುತಿನ ರಕ್ಷಣೆ ಸಾಧ್ಯವಾಗಿರುವುದಿಲ್ಲ.
ಸದ್ರಿ ಅರ್ಜಿಯ ಹೆಚ್ಚಿನ ವಿಚಾರಣೆ ಬಾಕಿಯಿರುತ್ತದೆ. ಸಾಕ್ಷಿಯ ರಕ್ಷಣೆಗೆ ಸಂಬಂಧಿಸಿದಂತೆ ನಿಯಮ ೭ರ ಅಡಿಯಲ್ಲಿ ಸಾಕ್ಷಿದಾರನ ಒಪ್ಪಿಗೆ ಮತ್ತು ಸಹಕಾರವಿದ್ದಲ್ಲಿ ಮಾತ್ರ ತೆಗೆದುಕೊಳ್ಳಬಹುದಾದ ಹಲವು ಕ್ರಮಗಳಿವೆ. ಈ ಬಗ್ಗೆ ದಿನಾಂಕ ೧೦.೦೭.೨೦೨೫ರಂದು ಸಾಕ್ಷಿದಾರನ ಪರವಾದ ವಕೀಲರಿಗೆ ಇಮೇಲ್ ಮೂಲಕ ತಿಳಿಸಲಾಗಿದೆ. ಆದರೆ ಈವರೆಗೆ ಸಾಕ್ಷಿದಾರನ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿಯನ್ನು ಪೊಲೀಸರೊಂದಿಗೆ ಹಂಚಿಕೊಂಡಿರುವುದಿಲ್ಲ. ಪ್ರಕರಣದ ಬಗ್ಗೆ ವಕೀಲರೊಂದಿಗೆ ಎಲ್ಲಾ ಸಂವಹನಗಳು ಇಮೇಲ್ ಮೂಲಕ ಮಾತ್ರ ನಡೆಯುತ್ತಿರುವುದಾಗಿದೆ. ಸಾಕ್ಷಿದಾರನ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಿಲ್ಲದಿದ್ದಾಗ, ಅಂತಹ ಸಾಕ್ಷಿದಾರನಿಗೆ ಸಾಕ್ಷಿ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂಬುದಾಗಿ ಪೊಲೀಸ್ ಉಪಾಧೀಕ್ಷಕರು ಸಕ್ಷಮ ಪ್ರಾಧಿಕಾರಕಕ್ಕೆ ವರದಿ ಸಲ್ಲಿಸುತ್ತಾರೆ.
ತನಿಖೆಯ ಮುಂದಿನ ಹಂತಗಳಲ್ಲಿ ಸಾಕ್ಷಿದಾರನು ಲಭ್ಯವಿಲ್ಲದಿದ್ದರೆ ಆವರ ಇರುವಿಕೆಯ ಬಗ್ಗೆ ಪರಿಶೀಲಿಸಲು ಪೊಲೀಸರಿಗೆ ಯಾವುದೇ ಮಾಹಿತಿಗಳು ಇರುವುದಿಲ್ಲ ಎಂಬುದಾಗಿ ಕೂಡಾ ಸದ್ರಿ ವರದಿ ಉಲ್ಲೇಖಿಸಲಾಗಿರುತ್ತದೆ ಎಂದು ಎಸ್‌ಪಿ ಕಚೇರಿಯಿಂದ ಮಾಹಿತಿ ನೀಡಲಾಗಿದೆ. ಅಲ್ಲದೆ ಜು. ೧೬ರಂದು ಮಧ್ಯಾಹ್ನ ೩ ಗಂಟೆಗೆ ಸಮಾಧಿ ಅಗೆಯುವ ಯಾವುದಾದರು ಪ್ರಕ್ರಿಯೆ ನಡೆಯಲಿದೆಯೇ ಎಂಬುದಾಗಿ ಕೆಲವು ಮಾಧ್ಯಮ ಪ್ರತಿನಿಧಿಗಳು ವಿಚಾರಿಸಿರುತ್ತಾರೆ. ಪೊಲೀಸ್ ಇಲಾಖೆಯಿಂದ ಅಂತಹ ಅಧಿಕೃತ ಪ್ರಕ್ರಿಯೆಗಳು ಇರುವುದಿಲ್ಲ ಎಂಬುದಾಗಿ ಈ ಮೂಲಕ ಸ್ಪಷ್ಟಪಡಿಸಲಾಗುತ್ತಿದೆ ಎಂದು ಎಸ್‌ಪಿ ಕಚೇರಿಯಿಂದ ಮಾಹಿತಿ ನೀಡಲಾಗಿದೆ.
ಸಾಕ್ಷಿ ರಕ್ಷಣಾ ಯೋಜನೆಯಡಿ ಕ್ರಮ
ದೂರುದಾರರಿಗೆ ಸಾಕ್ಷಿ ರಕ್ಷಣಾ ಯೋಜನೆ ೨೦೧೮ರ ಅಡಿಯಲ್ಲಿ ಸೂಕ್ತ ರಕ್ಷಣೆ ಒದಗಿಸಲಾಗಿದೆ ಎಂದು ಸಂಬಂಧ ಪಟ್ಟ ಅಧಿಕಾರಿಗಳು ಜುಲೈ ೧೦ರಂದು ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ಆರ್. ದೇಶಪಾಂಡೆ ಅವರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯಲ್ಲಿ ದೂರುದಾರನನ್ನು ನ್ಯಾಯಾಲಯಕ್ಕೆ ಕರೆ ತಂದು ಹೇಳಿಕೆ ದಾಖಲು ಮಾಡಲಾಗಿದೆ. ಬಳಿಕ ಪೊಲೀಸ್ ರಕ್ಷಣೆಯಲ್ಲಿಯೇ ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆ ತಂದು ಹೇಳಿಕೆ ದಾಖಲು ಮಾಡಲಾಗಿದೆ. ತನ್ನ ಅಪೇಕ್ಷೆಯಂತೆ ಸೂಕ್ತ ಭದ್ರತೆ ನೀಡಿದ್ದಕ್ಕೆ ದೂರುದಾರರು ನ್ಯಾಯಾಲಯ, ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ಕರ್ನಾಟಕ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.
ಜಡ್ಜ್ ಎದುರು ೧ ಗಂಟೆ ೨೫ ನಿಮಿಷ ಹೇಳಿಕೆ ದಾಖಲು
ವಕೀಲರಿಗೆ ದೊರಕದ ಪ್ರವೇಶ
ಮಾಧ್ಯಮಗಳು ಸಂಯಮ ವಹಿಸಿ-ಊಹಾಪೋಹಗಳಿಗೆ ಅವಕಾಶ ನೀಡಬೇಡಿ-ಪೊಲೀಸ್ ಇಲಾಖೆ
ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿಯವರಿಂದ ಎಸ್‌ಪಿಗೆ ಪತ್ರ: ವಿವರ ನೀಡಲು ಸೂಚನೆ- ಎಸ್‌ಐಟಿ ರಚಿಸಲು ಮುಖ್ಯಮಂತ್ರಿಗೆ ಮನವಿ
ಪ್ರಣಬ್ ಮೊಹಂತಿ ನೇತೃತ್ವದ ಎಸ್‌ಐಟಿ ರಚಿಸಲು ಸರಕಾರಕ್ಕೆ ವಕೀಲರ ಒತ್ತಾಯ
ವಕೀಲರ ವಿಚಾರಣೆ-ವಕೀಲರ ಪ್ರತ್ಯುತ್ತರ-ಸಾಕ್ಷಿದಾರನ ಇರುವಿಕೆ ಬಗ್ಗೆ ಯಾವುದೇ ಮಾಹಿತಿ ಪೊಲೀಸರೊಂದಿಗೆ ಹಂಚಿಕೊಳ್ಳದ ವಕೀಲರು-ಇ-ಮೇಲ್ ಸಂವಹನ-ಸಾಕ್ಷಿ ರಕ್ಷಣೆ ನೀಡಲು ಅಸಾಧ್ಯ-ಪೊಲೀಸ್ ಇಲಾಖೆ ಪ್ರಕಟಣೆ
ಸುಪ್ರಿಂಕೋರ್ಟ್‌ಗೆ ಅರ್ಜಿ, ತನಿಖಾಧಿಕಾರಿಗೆ ಮಾಹಿತಿ- ಸಾಕ್ಷಿ ದೂರುದಾರ ತಲೆಮರೆಸಿಕೊಳ್ಳುವ ಸಾಧ್ಯತೆ-ಸಮಾಧಿ ಅಗೆಯಲು ಆತುರ- ಬ್ರೈನ್ ಮ್ಯಾಪಿಂಗ್, ಫಿಂಗರ್‌ಪ್ರಿಂಟ್, ನಾರ್ಕೋ ಅನಾಲಿಸಿಸ್ ಪರೀಕ್ಷೆ ನಡೆಸಲು ಅನುಮತಿಗೆ ತನಿಖಾಧಿಕಾರಿ ನ್ಯಾಯಾಲಯಕ್ಕೆ ವರದಿ: ಘಟನೆಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದಲ್ಲಿ ಈಗಾಗಲೇ ಅರ್ಜಿ ಸಲ್ಲಿಕೆಯಾಗಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಇತ್ತೀಚೆಗೆ ಮಾಹಿತಿ ಬಂದಿದೆ. ಈ ವಿಷಯವನ್ನು ಪ್ರಕರಣದ ತನಿಖಾಧಿಕಾರಿಗಳ ಗಮನಕ್ಕೆ ಸಾಕ್ಷಿ ದೂರುದಾರರು ಅಥವಾ ಅವರ ಪರವಾದ ವಕೀಲರು ತಂದಿಲ್ಲ. ಈ ಮಾಹಿತಿಯನ್ನು ಪರಿಶೀಲಿಸಬೇಕಾಗಿರುತ್ತದೆ. ಸಮಾಧಿ ಅಗೆಯುವ ಪ್ರಕ್ರಿಯೆಯು ಮುಗಿಯುತ್ತಿದ್ದಂತೆ ಸಾಕ್ಷಿ ದೂರುದಾರನು ತಲೆಮರೆಸಿಕೊಳ್ಳುವ ಸಾಧ್ಯತೆಯಿದೆಯೆಂದು ಸ್ಥಳಿಯ ವ್ಯಕ್ತಿಗಳಿಂದ ಗುಪ್ತ ಮಾಹಿತಿ ದೊರಕಿದೆ.
ಇದೇ ಕಾರಣಕ್ಕಾಗಿ ಸೂಕ್ತ ತನಿಖಾ ಪ್ರಕ್ರಿಯೆಯನ್ನು ಅನುಸರಿಸದೇ ಸಮಾಧಿ ಅಗೆಯುವ ಪ್ರಕ್ರಿಯೆಯನ್ನು ನಡೆಸಲು ಆತುರ ತೋರುತ್ತಿರುವಂತೆ ಸುದ್ದಿ ಹರಿದಾಡುತ್ತಿದೆ. ಈ ವಿಷಯವನ್ನು ಸಾಕ್ಷಿದಾರರ ಪರವಾದ ವಕೀಲರಿಗೂ ತಿಳಿಸಲಾಗಿದೆ. ಹಾಗೂ ಈ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಸಾಕ್ಷಿ ದೂರುದಾರರು ಸಮ್ಮತಿಸಿದ್ದಲ್ಲಿ, ಆತನ ಬ್ರೈನ್ ಮ್ಯಾಪಿಂಗ್, ಫಿಂಗರ್‌ಪ್ರಿಂಟ್ ಮತ್ತು ನಾರ್ಕೋ ಅನಾಲಿಸಿಸ್ ಪರೀಕ್ಷೆಗಳನ್ನು ನಡೆಸಲು ಅನುಮತಿಸುವಂತೆ ಪ್ರಕರಣದ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿದ್ದಾರೆ. ತನಿಖಾಧಿಕಾರಿಯು ತನಿಖೆಯ ಯಾವ ಹಂತದಲ್ಲಿ ಸಮಾಧಿ ಅಗೆಯುವ ಪ್ರಕ್ರಿಯೆ ಸೂಕ್ತವೆಂದು ನಿರ್ಧರಿಸುತ್ತಾರೋ ಆಗ ಸೂಕ್ತ ಕಾನೂನು ಪ್ರಕ್ರಿಯೆ ಅನುಸರಿಸಿಕೊಂಡು ಸಮಾಧಿ ಅಗೆಯುವ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದು ಎಸ್ಪಿ ಕಚೇರಿ ಪ್ರಕಟಣೆ ತಿಳಿಸಿದೆ.