ಬೆಳ್ತಂಗಡಿ: ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ನಾನಾಕಡೆ ಜು.13ರಂದು ಕಾಡಾನೆಗಳು ಕೃಷಿ ತೋಟಗಳಿಗೆ ದಾಳಿ ನಡೆಸಿ ಬೆಳೆ ಹಾನಿ ಮಾಡಿವೆ.
ಕುಂಟಾಡಿಯ ಅಬ್ರಹಾಂ ವಿ.ಜೆ. ಎಂಬವರ ತೋಟದಲ್ಲಿ ರಬ್ಬರ್ ಗಿಡಗಳನ್ನು ಆನೆಗಳು ಮುರಿದು ಹಾಕಿವೆ. ಈ ವೇಳೆ ರಬ್ಬರ್ ಗಿಡ ವಿದ್ಯುತ್ ಲೈನ್ ಮೇಲೆ ಬಿದ್ದ ಪರಿಣಾಮ, ತಂತಿ ತುಂಡಾಗಿ ಕಂಬಗಳು ವಾಲಿ ನಿಂತಿವೆ. ಕಜೆ, ಬಾರೆ ಪ್ರದೇಶದಲ್ಲಿ ಸಂಚರಿಸಿದ ಕಾಡಾನೆಗಳು ಅಡಿಕೆ ಗಿಡ, ಬಾಳೆ ಗಿಡಗಳನ್ನು ಮುರಿದು ಹಾಕಿವೆ. ಕಜೆ ಪ್ರದೇಶದಲ್ಲಿ ಆನೆಗಳನ್ನು ಸ್ಥಳೀಯರು ಓಡಿಸಲು ಮುಂದಾದಾಗ ಆನೆಗಳು ಹಿಂತಿರುಗಿ ಬಂದಿದ್ದು, ಸ್ಥಳೀಯರು ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾರೆ. ಹಿಂಡಿನಲ್ಲಿ ಒಟ್ಟು ಮೂರು ಆನೆಗಳಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.