ದ್ವೇಷ ಭಾಷಣ ಪ್ರಕರಣ: ವಿ.ಹಿಂ.ಪ. ಜಿಲ್ಲಾ ಕಾರ್ಯದರ್ಶಿನವೀನ್ ನೆರಿಯ ವಿರುದ್ಧದ ಎಫ್.ಐ.ಆರ್.ಗೆ ಹೈಕೋರ್ಟ್ ತಡೆಯಾಜ್ಞೆ

0

ಬೆಳ್ತಂಗಡಿ: ಕಡಬ ಗ್ರಾಮದ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಅನ್ಯ ಧರ್ಮದ ವಿರುದ್ಧ ದ್ವೇಷ ಭಾವನೆ ಹುಟ್ಟಿಸುವಂತೆ ಮಾತನಾಡಿದ್ದಾರೆ ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್.ಐ.ಆರ್.ಗೆ ಜು.೯ರಂದು ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ನವೀನ್ ಅವರಿಗೆ ಈಗಾಗಲೇ ಪುತ್ತೂರಿನ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳ ಪ್ರಮುಖರನ್ನು ರಾತ್ರಿ ಸಮಯ ಚೆಕ್ ಮಾಡುತ್ತಿರುವುದನ್ನು ವಿರೋಧಿಸಿ ಜೂ.೪ರಂದು ಸಂಜೆ ಕಡಬ ಪೊಲೀಸ್ ಠಾಣೆ ಮುಂದೆ ಹಿಂದು ಸಂಘಟನೆಯ ಪ್ರಮುಖರು ಸೇರಿ ಮನವಿ ಸಲ್ಲಿಸಿದ ಸಮಯದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿಯಾಗಿರುವ ಬೆಳ್ತಂಗಡಿ ತಾಲೂಕಿನ ನವೀನ್ ನೆರಿಯ ಅವರು ಪೊಲೀಸರು ರಾತ್ರಿ ಸಮಯ ಹಿಂದೂ ಮುಖಂಡರ ಮನೆಗೆ ಮಾತ್ರ ಹೋಗಿ ಪ್ರಮುಖರನ್ನು ಚೆಕ್ ಮಾಡಿ ಹಿಂದೂ ಮುಖಂಡರಿಗೆ ಮಾತ್ರ ತೊಂದರೆ ನೀಡುತ್ತಿದ್ದಾರೆ ಎಂದು ದ್ವೇಷದ ಭಾಷಣವನ್ನು ಮಾಡಿದ್ದಾರೆ, ಅಲ್ಲಿ ಸೇರಿದ ಸಾರ್ವಜನಿಕರಿಗೆ ಅನ್ಯಧರ್ಮದ ವಿರುದ್ಧ ದ್ವೇಷ ಭಾವನೆ ಹುಟ್ಟುವಂತೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದರು.

ಬಳಿಕ ನಿರೀಕ್ಷಣಾ ಜಾಮೀನು ಕೋರಿ ನವೀನ್ ನೆರಿಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಪುತ್ತೂರು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಬಳಿಕ ತನ್ನ ವಿರುದ್ಧದ ಎಫ್.ಐ.ಆರ್.ಗೆ ತಡೆ ನೀಡುವಂತೆ ಕೋರಿ ನವೀನ್ ನೆರಿಯ ಅವರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿರುವ ಹೈಕೋರ್ಟ್ ಎಫ್.ಐ.ಆರ್.ಗೆ ತಡೆ ನೀಡಿದೆ. ಹೈಕೋರ್ಟಿನಲ್ಲಿ ನವೀನ್ ಪರ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಪುತ್ತೂರು ವಾದಿಸಿದ್ದರು. ನ್ಯಾಯವಾದಿ ಸುಯೋಗ್ ಹೇರಳೆ ಪುತ್ತೂರು ವಕಾಲತ್ತು ವಹಿಸಿದ್ದರು.

LEAVE A REPLY

Please enter your comment!
Please enter your name here