ಜೆಟ್ ಏರ್‌ವೇಸ್ ಉದ್ಯೋಗಿ ಬೊಳಿಯಾರಿನ ಆಕಾಂಕ್ಷ ಪಂಜಾಬ್‌ನಲ್ಲಿ ನಿಗೂಢ ಸಾವು: ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ: ಪ್ರಾಧ್ಯಾಪಕ ಮ್ಯಾಥ್ಯೂ ಬಂಧನ

0

ಬೆಳ್ತಂಗಡಿ: ಧರ್ಮಸ್ಥಳದ ಗ್ರಾಮದ ಬೊಳಿಯಾರ್ ನಿವಾಸಿಯಾಗಿದ್ದು ಜೆಟ್ ಏರ್‌ವೇಸ್‌ನಲ್ಲಿ ಏರೊನಾಟಿಕಲ್ ಇಂಜಿನಿಯರ್ ಆಗಿದ್ದ ಆಕಾಂಕ್ಷ ಎಸ್. ನಾಯರ್(೨೨ವ) ಅವರು ತಾನು ಕಲಿತಿದ್ದ ಪಂಜಾಬ್ ರಾಜ್ಯದಲ್ಲಿನ ಲವ್ಲಿ ಪ್ರೊಪೆಸನಲ್ ಯುನಿವರ್ಸಿಟಿ ಕಾಲೇಜು ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮೇ.೧೭ರಂದು ನಡೆದಿದೆ. ಧರ್ಮಸ್ಥಳ ಗ್ರಾಮದ ಬೊಳಿಯಾರು ನಿವಾಸಿಯಾಗಿದ್ದು ಸಿವಿಲ್ ಕಂಟ್ರಾಕ್ಟರ್ ಆಗಿರುವ ಸುರೇಂದ್ರನ್ ಮತ್ತು ಜಾತ್ಯಾತೀತ ಜನತಾದಳದಲ್ಲಿ ಗುರುತಿಸಿಕೊಂಡಿದ್ದ ಸಿಂಧೂದೇವಿ ದಂಪತಿ ಪುತ್ರಿಯಾಗಿರುವ ಆಕಾಂಕ್ಷ ಅವರು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಬಳಿಕ ಪಂಜಾಬ್‌ನ ಎಲ್‌ಪಿಯು ಪಗ್ವಾರ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದು ಕಳೆದ ಆರು ತಿಂಗಳ ಹಿಂದೆ ಏರೋಸ್ಪೇಸ್ ಇಂಜಿನಿಯರ್ ಆಗಿ ದೆಹಲಿಯಲ್ಲಿ ಉದ್ಯೋಗದಲ್ಲಿದ್ದರು. ಅವರು ಜರ್ಮನಿಗೆ ಉದ್ಯೋಗಕ್ಕೆ ಹೋಗುವವರಿದ್ದ ಹಿನ್ನೆಲೆಯಲ್ಲಿ ಪಂಜಾಬ್ ಎಲ್‌ಪಿಯು ಪಗ್ವಾರ ಕಾಲೇಜಿನಿಂದ ಸರ್ಟಿಫಿಕೇಟ್‌ಗಳನ್ನು ಪಡೆಯಲು ತೆರಳಿದ್ದರು. ಈ ವೇಳೆ ಕಾಲೇಜ್‌ನ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ. ಇವರು ಆತ್ಮಹತ್ಯೆ ಮಾಡಿಕೊಂಡರೋ, ಕೊಲೆಯಾದರೋ ಎಂಬ ಚರ್ಚೆ ನಡೆಯುತ್ತಿದ್ದಂತೆಯೇ ಪಂಜಾಬ್ ಪೊಲೀಸರು ಕಾಲೇಜ್‌ನ ಪ್ರಾಧ್ಯಾಪಕ ಬಿಜಿಲ್ ಮ್ಯಾಥ್ಯೂ ಎಂಬವರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಬಂಧಿಸಿದ್ದು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಈರ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಮೇ.೨೧ರಂದು ಆಕಾಂಕ್ಷ ಅವರ ಮೃತದೇಹವನ್ನು ತವರೂರಿಗೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಸರ್ಟಿಫಿಕೆಟ್ ಪಡೆಯಲು ಹೋದಾಕೆ ಅನುಮಾನಾಸ್ಪದ ಸಾವು: ಮೇ.೧೫ರಂದು ಆಕಾಂಕ್ಷ ದೆಹಲಿಯಿಂದ ಪಗ್ವಾಡಗೆ ಬಸ್‌ನಲ್ಲಿ ಪ್ರಯಾಣಿಸಿ ಮೇ. ೧೬ರಂದು ಕಾಲೇಜಿಗೆ ಹೋಗಿದ್ದರು. ಕಾಲೇಜಿನಲ್ಲಿ ಅಂದು ಸರ್ಟಿಫಿಕೇಟ್‌ಗಳನ್ನು ನೀಡಬೇಕಿದ್ದ ಪ್ರಾಧ್ಯಾಪಕ ಬಿಜಿಲ್ ಮ್ಯಾಥ್ಯೂ ಸರ್ಟಿಫಿಕೆಟ್ ನೀಡದೆ ಶನಿವಾರ ಬರುವಂತೆ ತಿಳಿಸಿದ್ದಾರೆ ಎಂದು ಮನೆಯವರಿಗೆ ಆಕಾಂಕ್ಷ ಮಾಹಿತಿ ನೀಡಿದ್ದರು. ಇದಾದ ಬಳಿಕ ಮೇ. ೧೭ರ ಶನಿವಾರ ಬೆಳಗ್ಗೆ ಆಕೆ ಮತ್ತೆ ಕಾಲೇಜಿಗೆ ಹೋಗಿದ್ದರು. ೧೧.೪೫ಕ್ಕೆ ತಾಯಿಗೆ ಮೆಸೇಜ್ ಮಾಡಿ ತಾನು ಕಾಲೇಜಿನಲ್ಲಿ ಇರುವುದಾಗಿ ತಿಳಿಸಿದ್ದರು. ಆದರೆ ಸಂಜೆ ೪.೩೦ಕ್ಕೆ ಪಂಜಾಬಿನ ಪೊಲೀಸರು ಮನೆಯವರಿಗೆ ಕರೆ ಮಾಡಿದ್ದು ಆಕೆ ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ್ದರು.
ಆಕಾಂಕ್ಷ ಆತ್ಮಹತ್ಯೆ ಮಾಡಿ ಕೊಂಡಿರುವ ಬಗ್ಗೆ ಹೆತ್ತವರಿಗೆ ಪೊಲೀಸರಿಂದ ಮಾಹಿತಿ:ಆಕಾಂಕ್ಷ ಪಂಜಾಬಿನ ಕಾಲೇಜಿನ ನಾಲ್ಕನೇ ಪ್ಲೋರ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ತಾಯಿ ಸಿಂಧೂದೇವಿಗೆ ಕರೆ ಮಾಡಿ ತಿಳಿಸಿದ್ದಾರೆ. ಇದಾದ ನಂತರ ಆಕಾಂಕ್ಷಾ ಅವರ ತಂದೆ ಸುರೇಂದ್ರ, ತಾಯಿ ಸಿಂಧೂದೇವಿ, ಸಹೋದರ ಆಕರ್ಷ್, ಚಿಕ್ಕಮ್ಮ ಬಿಂದು, ಅತ್ತಿಗೆ ಸಹ್ಯಾದ್ರಿ, ಚಿಕ್ಕಪ್ಪ ಪ್ರಕಾಶ್, ಸಂಬಂಧಿ ಅಜೇಶ್ ಮುಂತಾದವರು ಪಂಜಾಬ್‌ಗೆ ತೆರಳಿದ್ದರು.

ಪಂಜಾಬ್‌ಗೆ ಆಕಾಂಕ್ಷ ಕುಟುಂಬಸ್ಥರು ತೆರಳಿದಾಗ ಹೈಡ್ರಾಮ: ಮೇ. ೧೮ರಂದು ಆಕಾಂಕ್ಷ ಹೆತ್ತವರು, ಕುಟುಂಬಿಕರು ಪಂಜಾಬ್ ರಾಜ್ಯದ ಜಲಂಧರ್ ಜಿಲ್ಲೆಯ ಪಗ್ವಾಡಾ ಸಿವಿಲ್ ಸರಕಾರಿ ಆಸ್ಪತ್ರೆಗೆ ತಲುಪಿದ್ದಾರೆ. ಜಲಂಧರ್ ಪೊಲೀಸ್ ಠಾಣೆಗೆ ಘಟನೆಯ ಬಗ್ಗೆ ಸಹೋದರ ಆಕಾಶ್ ನಾಯರ್ ತನ್ನ ತಂಗಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಇದೊಂದು ವ್ಯವಸ್ಥಿತ ಕೊಲೆಯೆಂಬ ಅನುಮಾನ ವ್ಯಕ್ತಪಡಿಸಿ ದೂರು ನೀಡಿದರು. ಆದರೆ ಪಗ್ವಾಡ ಠಾಣೆಯ ಪೊಲೀಸರು ಆಕರ್ಷ್ ನೀಡಿರುವ ದೂರನ್ನು ತಿದ್ದಿ ನನ್ನ ತಂಗಿ ಆತ್ಮಹತ್ಯೆ ಮಾಡಿಕೊಂಡಿದ್ದು ಆಕೆ ಡಿಪ್ರೆಷನ್‌ನಿಂದ ಬಳಲುತ್ತಿದ್ದಾಳೆ. ಈ ಸಾವಿನ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಬರೆದು ಸಹಿ ಹಾಕಿಸಿ ಕೊಂಡಿದ್ದರು. ಪಂಜಾಬ್ ಭಾಷೆಯಲ್ಲಿ ಬರೆದದ್ದರಿಂದ ಅರಿವಾಗದ ಆಕರ್ಷ್ ಹೆತ್ತವರು ಇದಕ್ಕೆ ಸಹಿ ಹಾಕಿದ್ದರು. ಆದರೆ ನಂತರ ಸ್ಥಳೀಯ ಖಾಸಗಿ ಮಾಧ್ಯಮದ ವರದಿಗಾರ ಆ ಪತ್ರದಲ್ಲಿರುವ ವಿಚಾರವನ್ನು ಆಕಾಂಕ್ಷಳ ಕುಟುಂಬದವರಿಗೆ ತಿಳಿಸಿದಾಗ ಎಲ್ಲರೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಆಕಾಂಕ್ಷ ಮತ್ತು ಪ್ರಾಧ್ಯಾಪಕನ ನಡುವಿನ ಸಂಬಂಧವೇ ಪ್ರಕರಣದ ಟ್ವಿಸ್ಟ್: ಸರ್ಟಿಫಿಕೆಟ್ ನೀಡದೆ ಆಕಾಂಕ್ಷಳನ್ನು ಕಾಲೇಜಿಗೆ ಕರೆಸಿಕೊಂಡಿದ್ದ ಕೇರಳದ ಕೊಟ್ಟಾಯಂ ಮೂಲದ ಪ್ರಾಧ್ಯಾಪಕ ಬಿಜಿಲ್ ಮ್ಯಾಥ್ಯೂ ಮತ್ತು ಆಕಾಂಕ್ಷ ನಡುವೆ ಪ್ರೇಮಾಂಕುರವಾಗಿತ್ತು ಎಂದು ಸ್ಥಳೀಯ ಪೊಲೀಸರು ಸಂಬಂಧಿಕರಿಗೆ ತಿಳಿಸಿದ್ದಾರೆ. ಇದು ಆತ್ಮಹತ್ಯೆಗೆ ಕಾರಣ ಅನ್ನುವ ಸುದ್ದಿ ಏಕಾಏಕಿ ವೈರಲ್ ಆಗಿದೆ. ಆದರೆ ಸಂಬಂಧಿಕರು ಹೇಳುವ ಪ್ರಕಾರ ಆಕಾಂಕ್ಷ ಬಿಜಿಲ್ ಮ್ಯಾಥ್ಯೂ ಜೊತೆ ಯಾವುದೇ ರೀತಿಯ ಲವ್ ಅಫೇರ್ ಇಟ್ಟುಕೊಂಡಿರಲಿಲ್ಲ. ಆತ ಈಕೆಯ ಏಳಿಗೆಯನ್ನು ನೋಡಿ ಬಲೆಗೆ ಬೀಳಿಸಿಕೊಳ್ಳುವ ಯತ್ನ ಮಾಡಿರಬಹುದು. ಅದಕ್ಕಾಗಿ ಆಕೆಯನ್ನು ಸರ್ಟಿಫಿಕೇಟ್ ನೀಡದೇ ಸತಾಯಿಸುತ್ತಿದ್ದ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಪ್ರಾಧ್ಯಾಪಕನ ಹೆಂಡತಿ, ಮಕ್ಕಳಿಂದ ಠಾಣೆಯೆದುರು ಹೈಡ್ರಾಮ:ಬಿಜಿಲ್ ಮ್ಯಾಥ್ಯೂ ಹೆಂಡತಿ ಮತ್ತು ಮಕ್ಕಳು ಪಗ್ವಾಡ ಠಾಣೆಗೆ ಆಕಾಂಕ್ಷ ಹೆತ್ತವರು ಬರುವ ಮೊದಲೇ ಹಾಜರಾಗಿದ್ದು ಆಕಾಂಕ್ಷ ಹೆತ್ತವರು ಪಗ್ವಾಡ ಠಾಣೆಗೆ ತೆರಳಿದ ಕೂಡಲೇ ದಯವಿಟ್ಟು ಕೇಸ್ ಮಾಡಬೇಡಿ. ನನ್ನ ಗಂಡನನ್ನು ಉಳಿಸಿಕೊಡಿ, ಎರಡು ಪುಟ್ಟ ಮಕ್ಕಳಿದ್ದಾರೆ ಎಂದು ಅಂಗಲಾಚಿದ್ದಾರೆ. ಇದು ಆಕಾಂಕ್ಷ ಹೆತ್ತವರ ಅನುಮಾನವನ್ನು ಹೆಚ್ಚಿಸಿದ್ದು ಯಾವುದೇ ಕೇಸ್ ನೀಡುವ ಮೊದಲು ಪ್ರಾಧ್ಯಾಪಕನ ಹೆಂಡತಿ ಹೀಗೆ ಯಾಕೆ ವರ್ತಿಸುತ್ತಿದ್ದಾಳೆ ಎಂದು ಅನುಮಾನ ಪಟ್ಟಿದ್ದಾರೆ. ಅಲ್ಲದೆ ಠಾಣೆಯಲ್ಲಿ ಪೊಲೀಸರು ಅಸಹಕಾರ ನೀಡುತ್ತಿರುವುದನ್ನು ನೋಡಿದಾಗ ಅನುಮಾನ ಮತ್ತಷ್ಟು ಹೆಚ್ಚಾಗಿದೆ.

ಸಿಸಿಟಿವಿ ಫೂಟೇಜ್ ಬಗ್ಗೆಯೂ ಆಕಾಂಕ್ಷ ಕುಟುಂಬದವರಿಗೆ ಅನುಮಾನ: ಪೊಲೀಸರು ದೂರನ್ನು ತಿರುಚಿದ ನಂತರ ಕಾಲೇಜಿನವರು ಒಳಭಾಗದ ಕೆಲ ಸಿಸಿಟಿವಿ ದೃಶ್ಯಗಳನ್ನು ತೋರಿಸಿದ್ದಾರೆ. ೧೦ರಿಂದ ೧೫ ಸೆಕೆಂಡ್‌ಗಳು ಇರುವ ದೃಶ್ಯದಲ್ಲಿ ಆಕಾಂಕ್ಷ ನಡೆದುಕೊಂಡು ಹೋಗುವುದು, ಮೊಬೈಲ್ ಒತ್ತುತ್ತಿರುವುದು ಇತ್ಯಾದಿ ದೃಶ್ಯಗಳನ್ನು ಮಾತ್ರ ತೋರಿಸಿದ್ದು, ಆಕೆ ಬಿದ್ದ ನಂತರದ ದೃಶ್ಯವನ್ನು ತೋರಿಸಿದ್ದಾರೆ. ಆದರೆ ಆಕೆ ಬೀಳುವ ಕ್ಷಣದ ವೀಡಿಯೋವಾಗಲಿ ಅಥವಾ ತೋರಿಸಿದ ವೀಡಿಯೋದಲ್ಲಿ ಅವಳು ಬಿಟ್ಟು ಬೇರೆ ಯಾರಾದರೂ ಇರುವುದಾಗಲಿ ಇಲ್ಲ. ಆಕೆ ಹೇಗೆ ಕೆಳಗೆ ಬಿದ್ದಳು, ಯಾರಾದರೂ ದೂಡಿರುವುದಾ ಅಥವಾ ಆಕೆ ಹಾರಿರುವುದಾ ಎಂದು ಎಲ್ಲಿಯೂ ಕಾಣಿಸುತ್ತಿಲ್ಲ. ಸಿ.ಸಿ.ಕ್ಯಾಮರಾದ ಪೂರ್ಣ ದಾಖಲೆಗಳನ್ನು ತೋರಿಸುವಂತೆ ಕೇಳಿದರೂ ಕಾಲೇಜು ಆಡಳಿತ ಮಂಡಳಿ ನೀಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಪ್ರಾಧ್ಯಾಪಕನ ಜೊತೆ ಪ್ರೇಮ-ಸುದ್ದಿ ವೈರಲ್-ಹೆತ್ತವರ ಅಸಮಾಧಾನ: ಉಪನ್ಯಾಸಕ ಬಿಜಿಲ್ ಮ್ಯಾಥ್ಯೂನೊಂದಿಗೆ ಆಕಾಂಕ್ಷಾಗೆ ಪ್ರೇಮ ಸಂಬಂಧವಿತ್ತು ಎಂಬ ವಿಚಾರ ಪೊಲೀಸರ ತನಿಖೆಯಲ್ಲಿ ಬಹಿರಂಗಗೊಂಡಿದೆ ಎಂಬ ಸುದ್ದಿಗಳು ಹರಡಿತ್ತು.ಅಲ್ಲದೇ ಬಿಜಿಲ್ ವಿವಾಹಿತನಾಗಿದ್ದು ಇಬ್ಬರು ಮಕ್ಕಳು ಇದ್ದಾರೆ. ಶುಕ್ರವಾರ ಉಪನ್ಯಾಸಕನ ಮನೆಗೆ ಆಕಾಂಕ್ಷ ಹೋಗಿದ್ದಾಳೆ. ಶನಿವಾರ ಕಾಲೇಜಿನಲ್ಲಿ ಉಪನ್ಯಾಸಕನ ಜೊತೆ ವಾಗ್ವಾದ, ಜಗಳ ನಡೆದಿದೆ. ಅಲ್ಲದೇ ಆಕೆ ಮತ್ತು ಆತನ ವಾಟ್ಸಾಪ್ ಮೆಸೆಜ್‌ಗಳು ಪೊಲೀಸರಿಗೆ ಲಭ್ಯವಾಗಿವೆ ಎಂಬ ವರದಿ ಪ್ರಸಾರವಾದವು. ಆದರೆ ಕುಟುಂಬದವರಿಗೆ ಇಂತಹ ಯಾವುದೇ ಮೆಸೆಜ್ ಗಳನ್ನು ಪೊಲೀಸರು ತೋರಿಸಿಲ್ಲ. ಅಲ್ಲದೆ ಆಕೆ ಹೊಟೇಲ್‌ನಲ್ಲಿ ತಂಗಿದ್ದಳು. ಆಕೆಯ ಕೆಲ ಬ್ಯಾಗ್‌ಗಳು ಹೊಟೇಲ್‌ನಲ್ಲೇ ಇತ್ತು. ಆಕೆ ಬಸ್‌ನಲ್ಲಿ ಓಡಾಡಿರುವುದಕ್ಕೆ ಟಿಕೆಟ್‌ಗಳು ಲಭ್ಯವಾಗಿವೆ. ಅವಳು ಯಾವುದೇ ಕಾರಣಕ್ಕೂ ಇಂತಹ ಕೆಲಸ ಮಾಡುವವಳಲ್ಲ ಎಂದು ಆಕೆಯ ಸಂಬಂಧಿಕರು, ಹೆತ್ತವರು ತಿಳಿಸಿದ್ದಾರೆ.

ಪೋಷಕರಿಂದ ಉನ್ನತ ಅಧಿಕಾರಿಗಳಿಗೆ ದೂರು: ಆಕಾಂಕ್ಷ ಸಾವಿನ ಕುರಿತು ಪೊಲೀಸರ ಅಸಹಕಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪೋಷಕರು ನ್ಯಾಯಯುತ ತನಿಖೆಗೆ ಒತ್ತಾಯಿಸಿ ಉನ್ನತ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಇದಾದ ನಂತರ ಎಸ್‌ಪಿ ರೂಪಿಂದರ್ ಕೌರ್ ಅವರ ನೇತೃತ್ವದ ಐವರ ತಂಡ ಇದರ ತನಿಖೆ ನಡೆಸಿದೆ. ಹೆತ್ತವರು ಕೊಟ್ಟ ರೀತಿಯಲ್ಲಿ ದೂರು ದಾಖಲಿಸಿದ ನಂತರವೇ ಆಕಾಂಕ್ಷ ಪೋಷಕರು ಮೃತದೇಹ ಪಡೆಯಲು ಮುಂದಾದರು.

ಮುಖ್ಯಮಂತ್ರಿಗಳಿಂದ ಕರೆ, ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಪತ್ರ: ಪಂಜಾಬ್‌ನಲ್ಲಿ ಆಕಾಂಕ್ಷ ಸಾವನ್ನಪ್ಪಿದ ಹಿನ್ನಲೆಯಲ್ಲಿ ಪಂಜಾಬ್ ಪೊಲೀಸ್ ಇಲಾಖೆ ನ್ಯಾಯಯುತ ತನಿಖೆ ನಡೆಸಬೇಕೆಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯರೇ ಕರೆ ಮಾಡಿದ್ದರೆಂಬ ಮಾಹಿತಿ ಆಕಾಂಕ್ಷ ಕುಟುಂಬದ ಮೂಲಗಳು ತಿಳಿಸಿದ್ದಾರೆ. ಅಲ್ಲದೆ ಕರ್ನಾಟಕದ ಮುಖ್ಯ ಕಾರ್ಯದರ್ಶಿಯ ಕಚೇರಿಯಿಂದ ಪಂಜಾಬ್‌ನ ಮುಖ್ಯ ಕಾರ್ಯದರ್ಶಿಯ ಕಚೇರಿಗೆ ಆಕಾಂಕ್ಷ ಹೆತ್ತವರ ದೂರಿನಂತೆ ತನಿಖೆ ನಡೆಸುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕರ್ನಾಟಕದ ಮುಖ್ಯ ಕಾರ್ಯದರ್ಶಿ ಕಚೇರಿಯ ವಿಶೇಷ ಅಧಿಕಾರಿ ಪೂವಿತಾ ಎಸ್ ಅವರು ಪತ್ರ ಬರೆದಿದ್ದಾರೆ.
ಮೇ ೧೯ರಂದು ನಡೆಯಿತು ಮರಣೋತ್ತರ ಪರೀಕ್ಷೆ: ಎಫ್‌ಐಆರ್ ಬಗೆಗಿನ ಗೊಂದಲದ ಹಿನ್ನಲೆಯಲ್ಲಿ ಮೃತದೇಹದ ಮರಣೊತ್ತರ ಪರೀಕ್ಷೆ ಮೇ ೧೮ರಂದು ರಾತ್ರಿ ನಡೆದಿಲ್ಲ. ಅಲ್ಲದೇ ಮೇ. ೧೯ರ ಬೆಳಗ್ಗೆಯೂ ಕೂಡ ನಡೆದಿರಲಿಲ್ಲ. ಕೊನೆಗೂ ಪಂಜಾಬ್ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ಬಳಿಕ ಸೋಮವಾರ ಅಪರಾಹ್ನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಮನೆಯವರಿಗೆ ಹಸ್ತಾಂತರಿಸಿದರು.

ಆರೋಪಿ ಪ್ರಾಧ್ಯಾಪಕ ಬಿಜಿಲ್ ಮ್ಯಾಥ್ಯೂ ಬಂಧನ : ಆಕಾಂಕ್ಷಾ ಎಸ್. ನಾಯರ್(೨೨) ಅಸಹಜ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಅಲ್ಲಿನ ಪೊಲೀಸರು ಮೇ ೨೦ರಂದು ಎಲ್‌ಪಿ ಕಾಲೇಜಿನ ಪ್ರಾಧ್ಯಾಪಕ, ಕೇರಳ ಮೂಲದ ಬಿಜಿಲ್ ಮ್ಯಾಥ್ಯೂ(೪೫) ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಆಕಾಂಕ್ಷ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿ ಅವರ ಬೇಡಿಕೆಯಂತೆ ಪ್ರಕರಣ ದಾಖಲಿಸಿ ಸಮಗ್ರ ತನಿಖೆ ನಡೆಸುವ ಭರವಸೆ ನೀಡಿದ್ದರು. ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದ್ದು ಸುರೇಂದ್ರ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಲ್ಲದೆ ಸ್ಥಳೀಯ ಠಾಣೆಯಲ್ಲಿ ನಕಲಿ ಎಫ್‌ಐಆರ್ ದಾಖಲಿಸಲು ಮುಂದಾದ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ ಎನ್ನಲಾಗಿದೆ.
ನೆರವು ನೀಡಿದ ಸಂಸದ ಬ್ರಿಜೇಶ್ ಚೌಟ-ವಾಹನದ ವ್ಯವಸ್ಥೆ: ಆಕಾಂಕ್ಷ ಕುಟುಂಬಸ್ಥರಿಗೆ ದಕ್ಷಿಣ ಕನ್ನಡದ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಪೂರ್ಣ ನೆರವು ನೀಡಿದ್ದಾರೆ. ಪಂಜಾಬ್‌ನ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಆಕಾಂಕ್ಷ ಪೋಷಕರು ಪಂಜಾಬ್‌ನ ಅಮೃತಸರ ತಲುಪಿದಾಗ ಅವರಿಗೆ ಅಲ್ಲಿಂದ ಪಗ್ವಾರಕ್ಕೆ ಮತ್ತು ಪೊಲೀಸ್ ಅಧಿಕಾರಿಗಳ ಭೇಟಿಗೆ ಅನುಕೂಲವಾಗಲು ಕ್ಯಾಬ್ ವ್ಯವಸ್ಥೆಯನ್ನು ಕ್ಯಾಪ್ಟನ್ ಬ್ರಿಜೇಶ್ ಚೌಟ ಕಲ್ಪಿಸಿದ್ದರು. ಎರಡು ದಿನಗಳ ಕಾಲವೂ ಈ ವ್ಯವಸ್ಥೆಯನ್ನು ಕಲ್ಪಿಸಿದ್ದರು.

ಶಾಸಕ ಪೂಂಜರಿಂದ ಸಾಂತ್ವನ, ತಬ್ಬಿ ಹಿಡಿದು ನ್ಯಾಯ ಕೊಡಿಸಿ ಎಂದು ಹೇಳಿದ ಸುರೇಂದ: ಆಕಾಂಕ್ಷನ ಹೆತ್ತವರು ಸುದ್ದಿ ತಿಳಿದು ದೆಹಲಿಗೆ ಪ್ರಯಾಣ ಬೆಳೆಸಿದಾಗ ವಿಮಾನದಲ್ಲಿ ಅಯೋಧ್ಯೆಗೆ ತೆರಳುತ್ತಿದ್ದ ಶಾಸಕ ಹರೀಶ್ ಪೂಂಜ ಜೊತೆಯಾಗಿದ್ದಾರೆ. ಈ ವೇಳೆ ತಮ್ಮ ಕುಟುಂಬದ ಜೊತೆಗೆ ನಾನಿzನೆ, ನ್ಯಾಯ ಸಿಗಲಿದೆ ಎಂದು ಭರವಸೆ ನೀಡಿದ್ದರು. ಇದಾದ ಬಳಿಕ ಆಕಾಂಕ್ಷ ಅಂತ್ಯಕ್ರಿಯೆ ವೇಳೆ ಶಾಸಕ ಹರೀಶ್ ಪೂಂಜ ಮನೆಗೆ ಆಗಮಿಸಿದಾಗ ಆಕಾಂಕ್ಷ ತಂದೆ ಸುರೇಂದ್ರರವರು ಶಾಸಕರನ್ನು ತಬ್ಬಿ ಹಿಡಿದು ನ್ಯಾಯ ಕೊಡಿಸಿ ಎಂದು ಕೇಳಿದ್ದಾರೆ. ಆಕಾಂಕ್ಷ ತಾಯಿ ಮತ್ತು ಅಜ್ಜಿಗೂ ಶಾಸಕ ಪೂಂಜ ಸಾಂತ್ವನ ಹೇಳಿದ್ದು ಅವರಿಗೂ ಕೂಡ ತಮ್ಮ ಕುಟುಂಬದ ಜೊತೆ ತಾನು ಇರುವುದಾಗಿ ಭರವಸೆ ನೀಡಿದ್ದಾರೆ.

ರಕ್ಷಿತ್ ಶಿವರಾಂ ಮೂಲಕ ಕಾಂಗ್ರೆಸ್ ನಾಯಕನಿಂದ ನೆರವು: ಕಾಂಗ್ರೆಸ್ ನಾಯಕ ರಕ್ಷಿತ್ ಶಿವರಾಂ ಕೂಡ ಆಕಾಂಕ್ಷ ಕುಟುಂಬಕ್ಕೆ ಸಾಥ್ ನೀಡಿದ್ದು ಪಂಜಾಬ್‌ನಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸಿ ಆಕಾಂಕ್ಷ ಕುಟುಂಬಕ್ಕೆ ನೆರವಾಗಲು ಕೇಳಿಕೊಂಡಿದ್ದಾರೆ. ರಕ್ಷಿತ್ ಶಿವರಾಂರ ಕರೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರು ನೆರವು ನೀಡಿದ್ದಾರೆಂದು ಕುಟುಂಬದವರು ತಿಳಿಸಿದ್ದಾರೆ.
ಮೇ.೨೦ರಂದು ದೆಹಲಿಯಿಂದ ಪಾರ್ಥೀವ ಶರೀರ ಬೆಂಗಳೂರಿಗೆ-ನಂತರ ತವರಿಗೆ: ಮೇ. ೨೦ರಂದು ರಾತ್ರಿ ೮.೩೦ರ ವಿಮಾನದಲ್ಲಿ ಆಕಾಂಕ್ಷಳ ಮೃತದೇಹವನ್ನು ದೆಹಲಿಯಿಂದ ಬೆಂಗಳೂರಿಗೆ ರವಾನಿಸಲಾಯಿತು. ರಾತ್ರಿ ೧೨.೩೦ಕ್ಕೆ ಬೆಂಗಳೂರಿಗೆ ಮೃತದೇಹ ಆಗಮಿಸಿದ್ದು ನಂತರ ತವರಿಗೆ ಆಂಬ್ಯುಲೆನ್ಸ್ ಮೂಲಕ ಕರೆತರಲಾಯಿತು. ಮೇ. ೨೧ರ ಬೆಳಗ್ಗೆ ೮.೩೦ಕ್ಕೆ ಮೃತದೇಹ ಧರ್ಮಸ್ಥಳ ಗ್ರಾಮದ ಬೊಳಿಯಾರ್‌ನಲ್ಲಿರುವ ಮನೆಗೆ ತಲುಪಿತು.

ಬೊಳಿಯಾರ್‌ನ ಮನೆಯಲ್ಲಿ ಮುಗಿಲು ಮಟ್ಟಿದ ಆಕ್ರಂದನ-ಹಲವರಿಂದ ಅಂತಿಮ ದರ್ಶನ: ಆಕಾಂಕ್ಷ ಪಾರ್ಥೀವ ಶರೀರ ಬೊಳಿಯಾರಿನ ಮನೆಗೆ ತಲುಪಿದ ಕೂಡಲೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ತಾಯಿ ಸಿಂಧೂದೇವಿ, ತಂದೆ ಸುರೇಂದ್ರ, ಅಜ್ಜಿ ಸರಸ್ವತಿ ಎಲ್ಲರನ್ನೂ ಬಂದವರು ಸಂತೈಸುತ್ತಿದ್ದರು. ಈ ವೇಳೆ ಶಾಸಕ ಹರೀಶ್ ಪೂಂಜ, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ನಾಗೇಶ್ ಕುಮಾರ್, ಧರ್ಮಸ್ಥಳ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರೀತಮ್ ಡಿ, ಸಿಪಿಐಎಂನ ಬಿ.ಎಂ ಭಟ್, ಹನೀಫ್ ಉಜಿರೆ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ಮುಂತಾದವರು ಆಗಮಿಸಿ ಅಂತಿಮ ದರ್ಶನ ಪಡೆದರು. ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಆಕಾಂಕ್ಷ ಕುಟುಂಬದವರು, ಸ್ನೇಹಿತರು, ಹಿತೈಷಿಗಳು ಕಣ್ಣೀರಾದರು.

ಅಂತ್ಯಕ್ರಿಯೆ ಪ್ರಕ್ರಿಯೆಯಲ್ಲಿ ಕಡೆ ಕ್ಷಣದಲ್ಲಿ ಬದಲಾವಣೆ-ದಹನದ ಬದಲು ಧಪನ: ಆಕಾಂಕ್ಷ ನಾಯರ್‌ರವರ ಮೃತದೇಹದ ಅಂತ್ಯಕ್ರಿಯೆ ಮೇ ೨೧ರಂದು ಬೊಳಿಯಾರ್‌ನಲ್ಲಿ ನಡೆದಿದೆ. ಆಕಾಂಕ್ಷ ಪಾರ್ಥೀವ ಶರೀರದ ದಹನಕ್ಕೆ ಸಕಲ ತಯಾರಿಗಳು ನಡೆದಿದ್ದಾಗ ಕಡೆ ಕ್ಷಣದಲ್ಲಿ ಬದಲಾವಣೆ ಮಾಡಿ ಧಪನ ಮಾಡಲಾಗಿದೆ. ಈ ಬಗ್ಗೆ ಕುಟುಂಬದ ಮೂಲಗಳನ್ನು ಸಂಪರ್ಕಿಸಿದಾಗ ದಹನ ಮಾಡಿದ್ರೆ ತನಿಖೆಗೆ ದೇಹದ ಅಗತ್ಯತೆ ಕಂಡು ಬಂದಲ್ಲಿ ಏನೂ ಮಾಡಲಾಗುವುದಿಲ್ಲ, ಅದಕ್ಕಾಗಿ ದಫನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮಗಳದ್ದು ಕೊಲೆ: ಸುರೇಂದ್ರನ್
ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಲ್ಲ. ಅದು ಕಾಲೇಜಿನವರು ಕೊಂದಿದ್ದಾರೆ. ನಮಗೆ ಸಿಸಿಟಿವಿ ಫೂಟೇಜ್ ಪೂರ್ತಿ ತೋರಿಸಿಲ್ಲ, ಅರ್ಧಂಬರ್ಧ ತೋರಿಸಿದ್ದಾರೆ. ನಮಗೆ ಆರಂಭದಲ್ಲಿ ಪೊಲೀಸ್‌ನವರ ಸಹಕಾರ ಸಿಗಲಿಲ್ಲ. ನಾವು ಬರೆದ ದೂರನ್ನು ತಿರುಚಿ ಬರೆದಿದ್ದರು. ಇದು ಮಾಧ್ಯಮದವರಿಂದಾಗಿ ನಮಗೆ ಗೊತ್ತಾಯಿತು. ನಂತರ ನಾವು ಆಕ್ರೋಶ ವ್ಯಕ್ತಪಡಿಸಿದಾಗ ಮೇಲಾಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ. ನಮ್ಮ ಸಂಸದರು, ಕುಮಾರಸ್ವಾಮಿಯವರು ಕರೆ ಮಾಡಿದ ಹಿನ್ನಲೆಯಲ್ಲಿ ದೂರು ದಾಖಲಿಸಿಕೊಂಡರು. ಆ ಪ್ರಾದ್ಯಾಪಕನ ಹೆಂಡತಿ ಮಕ್ಕಳು ನಮ್ಮ ಗಾಡಿಗೆ ಅಡ್ಡ ಬರುವುದು, ಮಕ್ಕಳನ್ನು ಗಾಡಿಯ ಮುಂದಕ್ಕೆ ಬಿಸಾಕಿದ್ದಳು. ನಂತರ ಪೋಸ್ಟ್ ಮಾಟಂ ನಡೆಯಿತು. ಮಗಳು ಅಂದ್ರೆ ನಮಗೆ ಪ್ರಾಣ. ಅವಳು ಪ್ರತಿನಿತ್ಯ ಕರೆ ಮಾಡಿ ಮಾತಾಡಿಯೇ ಮಲಗುತ್ತಿದ್ದಳು. ನಾನು ನನ್ನ ಮಕ್ಕಳನ್ನು ಚೆನ್ನಾಗಿ ಓದಿಸಬೇಕೆಂದು ನನ್ನ ಜಮೀನು ಮಾರಾಟ ಮಾಡಿzನೆ. ಈಗ ಅವಳು ಉತ್ತಮ ಸ್ಥಾನಕ್ಕೆ ಬಂದಿದ್ದಳು.ಆದರೆ ನಮಗೆ ಅವಳನ್ನು ಉಳಿಸಿಕೊಳ್ಳಲಾಗಲಿಲ್ಲ. ಜಮರ್ನಿಗೆ ಹೆಚ್ಚಿನ ಓದಿಗಾಗಿ ತೆರಳುವವಳಿದ್ದಳು, ಆದರೆ ಅದೆಲ್ಲ ಕನಸಾಗೇ ಉಳಿದಿದೆ.
-ಸುರೇಂದ್ರ, ಆಕಾಂಕ್ಷ ತಂದೆ

ನ್ಯಾಯಕ್ಕಾಗಿ ಹೋರಾಡುತ್ತೇನೆ: ಸಿಂಧೂದೇವಿ
ನಾವು ಕಾಶಿಬೆಟ್ಟುವಿನ ಮನೆಯಲ್ಲಿದ್ದಾಗ ಮಧ್ಯಾಹ್ನದ ಹೊತ್ತಿಗೆ ಮನಸ್ಸಲ್ಲಿ ಏನೇನೋ ಆಗುತ್ತಿತ್ತು. ಅನ್ನ ಹಾಕಿದರೂ ಊಟ ಸೇರಿಲ್ಲ, ನಂತರ ಹೋಗಿ ನಿದ್ದೆ ಮಾಡಿದಾಗ ಮಮ್ಮೀ ಅಂತ ಕೂಗಿದ ಹಾಗನಿಸಿತು. ಇದಾದ ಕೆಲವೇ ಕ್ಷಣಗಳಲ್ಲಿ ನನಗೆ ಕರೆ ಬಂದಿತ್ತು. ಆವಾಗ ಆಕಾಂಕ್ಷಳ ಸಾವಿನ ಸುದ್ದಿ ಪೊಲೀಸರು ನೀಡಿದರು. ನನಗೆ ಏನು ಮಾಡಬೇಕು ಎಂದು ತೋಚಲಿಲ್ಲ. ಅವಳು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡುವ ಜಾಯಮಾನದವಳಲ್ಲ, ಎರಡೇಟು ಕೊಡುವವಳೇ ಹೊರತು ಆತ್ಮಹತ್ಯೆ ಮಾಡುವವಳಲ್ಲ. ಸುದ್ದಿ ಕೇಳಿ ಪಗ್ವಾರಕ್ಕೆ ಹೊರಟಾಗ ನಮ್ಮ ಶಾಸಕ ಹರೀಶ್ ಪೂಂಜರವರು ನಮಗೆ ವಿಮಾನದಲ್ಲಿ ಧೈರ್ಯ ತುಂಬಿದರು. ಅದಾದ ನಂತರ ಬ್ರಿಜೇಶ್ ಚೌಟರವರು ನಮಗೆ ಅಮೃತ್‌ಸರ ತಲುಪಿದಾಗ ಅಲ್ಲಿ ಕ್ಯಾಬ್ ವ್ಯವಸ್ಥೆ ಕಲ್ಪಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮುಖ್ಯಮಂತ್ರಿಯವರು ಕೂಡ ಕರೆ ಮಾಡಿದ್ದಾರೆ ಅನ್ನುವ ಮಾಹಿತಿಯಿದೆ. ಮಗಳು ಕಾಲೇಜಿಗೆ ಹೋದಾಗ ಬಿಜಿಲ್ ಮ್ಯಾಥ್ಯೂ ಪರಿಚಯವಾಗಿದೆ. ಅವಳು ಮತ್ತು ಅವನು ಮಲಯಾಳಂ ಮಾತಾಡುತ್ತಿದ್ದರು. ನನಗೆ ಒಬ್ಬ ಅಣ್ಣ ಸಿಕ್ಕಿದ್ದಾರೆ ಅಂತ ಪ್ರೊಫೆಸರ್ ಬಗ್ಗೆ ಹೇಳಿದ್ದಾಳೆ. ಅವರು ಕೂಡ ತಂಗಿ ನೀನು ಅಂತ ಹೇಳಿ ನೆರವು ನೀಡುತ್ತಿದ್ದರು ಎಂದು ಹೇಳುತ್ತಿದ್ದಳು. ಆದರೆ ಅವಳು ಸಾವನ್ನಪ್ಪಿದಾಗ ಆತನ ಜೊತೆಗೆ ಲವ್ ಅಂತ ಹೇಳಿದ್ರೂ, ಅದು ಸಾಧ್ಯಾನೆ ಇಲ್ಲ, ಲವ್ ಫೇಲ್ಯೂರ್ ಆದ್ರೆ ಅವಳ ಕಚೇರಿ, ಫ್ಲ್ಯಾಟ್‌ನಲ್ಲೇ ಆತ್ಮಹತ್ಯೆ ಮಾಡಿಕೊಳ್ಳಬಹುದಿತ್ತಲ್ವಾ. ನಾವು ಠಾಣೆಗೆ ಹೋದಾಗ ಪ್ರಾಧ್ಯಾಪಕನ ಹೆಂಡತಿ ಇಬ್ಬರು ಮಕ್ಕಳೊಂದಿಗೆ ಆಗಮಿಸಿ ನಮ್ಮ ಕಾಲಿಗೆ ಬಿದ್ದರು. ದಯವಿಟ್ಟು ನನ್ನ ಗಂಡನ ಮೇಲೆ ಕೇಸ್ ಮಾಡಬೇಡಿ ಅಂತ ಕೇಳಿದಳು. ನಾನು ಕೇಸ್ ಮಾಡಲ್ಲ, ನನ್ನ ಮಗಳನ್ನು ತಂದುಕೊಡಿ ಅಂತ ಕೇಳಿದೆ. ಅವಳು ಮೊದಲು ಹೇಳಿದ್ದು ಆಕಾಂಕ್ಷ ನನ್ನ ಮನೆಗೆ ಬಂದಳು, ಚಾಕು ಹಿಡಿದುಕೊಂಡು ಬೆದರಿಕೆ ಹಾಕಿದ್ದಳು ಅಂತ ಹೇಳಿದಳು, ನಂತರ ಸ್ವಲ್ಪ ಹೊತ್ತಾದ ನಂತರ ನಾವು ಆಕಾಂಕ್ಷಳ ರೂಮ್‌ಗೆ ಹೋಗಿದ್ದೆ ಅಂತ ಹೇಳಿದ್ದಳು. ಆಮೇಲೆ ಕಾಲೇಜಿನಲ್ಲಿ ಭೇಟಿಯಾದ್ವಿ ಅಂತ ಹೇಳಿದ್ದಾಳೆ. ತನ್ನ ಗಂಡನನ್ನು ಆರು ತಿಂಗಳಿಂದ ಲವ್ ಮಾಡ್ತಿದ್ಳು ಅಂತ ಹೇಳಿದ್ಳು, ಅದಕ್ಕೆ ನೀನು ನನಗ್ಯಾಕೆ ತಿಳಿಸಿಲ್ಲ ಅಂತ ಕೇಳಿದ್ದೆ. ನನಗೆ ಯಾವುದೇ ಕನಿಕರ ಇಲ್ಲ ಅಂತನೂ ಹೇಳಿದ್ದೇನೆ. ಇಷ್ಟೆಲ್ಲ ಆದ ನಂತರ ಪೊಲೀಸ್‌ನವರು ಕೂಡ ಕೇಸ್ ದಾಖಲಿಸಿಕೊಳ್ಳಲು ಒಪ್ಪಿಕೊಂಡಿಲ್ಲ. ಆದರೆ ನಮ್ಮ ಆಕ್ರೋಶದ ನಂತರ ಕೇಸ್ ದಾಖಲಿಸಿಕೊಂಡಿದ್ದಾರೆ. ದಯವಿಟ್ಟು ನಮಗೆ ನ್ಯಾಯ ಒದಗಿಸಿಕೊಡಬೇಕು. ನ್ಯಾಯಕ್ಕಾಗಿ ಹೋರಾಡುತ್ತೇವೆ. ಅವಳ ಓದಿಗಾಗಿ ನಾವು ನಮ್ಮ ಜಾಗ ಮಾರಾಟ ಮಾಡಿ ಸಾಲ ಮಾಡಿದ್ದೇವೆ. ಇನ್ನು ಹೋರಾಟ ಮಾಡುತ್ತೇವೆ. ನಮಗೆ ನ್ಯಾಯ ಸಿಗಲೇಬೇಕು. -ಸಿಂಧೂದೇವಿ, ಆಕಾಂಕ್ಷಳ ತಾಯಿ

ಸಮಗ್ರ ತನಿಖೆ ನಡೆಸುವಂತೆ ಸರ್ಕಾರ ಪಂಜಾಬ್ ಸರ್ಕಾರಕ್ಕೆ ಆಗ್ರಹಿಸಬೇಕು: ಪೂಂಜ
ಧರ್ಮಸ್ಥಳ ಗ್ರಾಮದ ಬೊಳಿಯಾರಿನ ನಿವಾಸಿಯಾದ ಆಕಾಂಕ್ಷಳ ಆತ್ಮಹತ್ಯೆಯ ಕುರಿತು ಅನುಮಾನಗಳಿವೆ. ಆಕಾಂಕ್ಷ ಆತ್ಮಹತ್ಯೆ ಮಾಡಿಕೊಳ್ಳುವಂತವಳು ಅಲ್ಲ ಅಂತ ಅವರ ಸಂಬಂಧಿಕರು ತಿಳಿಸಿದಾಗ ನಾನು ಹಾಗೂ ಸಂಸದರು ಪಂಜಾಬ್ ನ ಸ್ಥಳೀಯ ಎಸ್ ಪಿ ,ಡಿಜಿಯವರನ್ನ ಸಂಪರ್ಕಿಸಿ ಸಮಗ್ರ ತನಿಖೆಗೆ ಆಗ್ರಹಿಸಿದ್ದೆವು. ಎಫ್ ಐ ಆರ್ ಆಗಿದೆ, ಈ ಪ್ರಕರಣಕ್ಕೆ ಕಾರಣವಾದವರನ್ನು ಅರೆಸ್ಟ್ ಮಾಡಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆಯಾಗಿ, ಆಕಾಂಕ್ಷಳ ಸಾವಿಗೆ ನ್ಯಾಯ ಸಿಗಬೇಕು ಅಂತ ಒತ್ತಾಯಿಸುತ್ತೇವೆ. ಈ ಬಗ್ಗೆ ಕರ್ನಾಟಕ ಸರ್ಕಾರ ಪಂಜಾಬ್ ಸರ್ಕಾರಕ್ಕೆ ಆಗ್ರಹಿಸಬೇಕೆಂದು ಗೃಹಸಚಿವರನ್ನು ಆಗ್ರಹಿಸುತ್ತೇನೆ.
ಹರೀಶ್ ಪೂಂಜ, ಶಾಸಕರು, ಬೆಳ್ತಂಗಡಿ

ಆಕಾಂಕ್ಷ ಸಾವಿನ ಬಗ್ಗೆ ಹಲವು ಅನುಮಾನವಿದೆ: ಅಜೇಶ್
ಆಕಾಂಕ್ಷಳ ಸಾವಿನ ಬಗ್ಗೆ ವಿವಿಧ ರೀತಿಯ ಅನುಮಾನಗಳಿವೆ. ಸ್ಥಳೀಯ ಪೊಲೀಸರು ಸಹಕಾರ ನೀಡದೇ ಇದ್ದಾಗ ಡಿಐಜಿ ಮತ್ತು ಎಸ್ ಪಿಯವರು ಸಾಥ್ ನೀಡಿದರು. ಕಾಲೇಜಿನ ವಿದ್ಯಾರ್ಥಿಗಳು ಹೇಳುವಂತೆ ಆ ಕ್ಯಾಂಪಸ್ ನಲ್ಲಿ ಸಿಸಿಟಿವಿಯ ಕಣ್ಣು ತಪ್ಪಿಸಿ ಓಡಾಡಲು ಸಾಧ್ಯವೆ ಅಲ್ಲ ಅಂತಾರೆ. ಆದರೆ ಕಾಲೇಜಿನವರು ಕೇವಲ ಆಕಾಂಕ್ಷ ಓಡಾಡುವ ವೀಡಿಯೋ ತೋರಿಸಿದ್ದಾರೆ. ಅವಳು ಬೀಳುವ ವೀಡಿಯೋ ತೋರಿಸಿಲ್ಲ.ನಾವು ಲಿಖಿತ ರೂಪದಲ್ಲಿ ದೂರು ಕೊಟ್ಟಿದ್ದೇವೆ. ಆಕಾಂಕ್ಷ ಜರ್ಮನಿಗೆ ತೆರಳುವ ತಯಾರಿಯಲ್ಲಿದ್ದಳು. ಪ್ರಾದ್ಯಾಪಕರ ಜೊತೆ ಲವ್ ಇರಲು ಸಾಧ್ಯವೇ ಇಲ್ಲ. ಅವಳಿಗೂ ಅವನಿಗೂ ಅಪ್ಪ ಮಗಳ ವಯಸ್ಸಿನ ಅಂತರವಿದೆ. ಅವಳು ಪ್ರೊಷೆಷರ್ ಮನೆಗೆ ಹೋಗಿಲ್ಲ, ಅವಳು ರೂಮ್ ಮಾಡಿದ್ದಳು, ಅಲ್ಲಿಗೆ ಹೋಗಿದ್ದೇನೆ, ಅವಳ ಬಸ್ ಟಿಕೆಟ್ ಕೂಡ ಸಿಕ್ಕಿದೆ. ಮೂರ್ನಾಲ್ಕು ತಿಂಗಳಲ್ಲಿ ಅವಳು ಜರ್ಮನಿಗೆ ಹೋಗುವವಳಿದ್ದಳು. ಅವಳ ಸಹೋದ್ಯೋಗಿ,ಸ್ನೇಹಿತರು ಎಲ್ಲರನ್ನೂ ಭೇಟಿಯಾಗಿದ್ದೇನೆ,ಆದರೆ ಯಾರೂ ಕೂಡ ಆಕಾಂಕ್ಷಳ ಬಗ್ಗೆ ಯಾವುದೇ ನೆಗೆಟಿವ್ ವಿಚಾರಗಳ ಬಗ್ಗೆ ತಿಳಿಸಿಲ್ಲ. -ಅಜೇಶ್ ಚಾರ್ಮಾಡಿ, ಆಕಾಂಕ್ಷ ಸಂಬಂಧಿಕರು.

LEAVE A REPLY

Please enter your comment!
Please enter your name here