ಕೋಮು ದ್ವೇಷ ಭಾಷಣ: ಪೂಂಜ ವಿರುದ್ಧ ಚಾರ್ಚ್‌ಶೀಟ್ ಸಲ್ಲಿಕೆ, ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

0

ಬೆಳ್ತಂಗಡಿ: ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಕೋಮು ದ್ವೇಷ ಉಂಟಾಗುವ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ವಿರುದ್ಧ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ ಎಂದು ರಾಜ್ಯ ಸರಕಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ. ತನ್ನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ತೆಕ್ಕಾರು ಬ್ರಹ್ಮಕಲಶೋತ್ಸವದ ವೇಳೆ ಮಾಡಿದ ಭಾಷಣಕ್ಕೆ ಸಂಬಂಧಿಸಿ ದಾಖಲಾಗಿರುವ ಎಫ್‌ಐಆರ್ ಮತ್ತು ಆ ನಂತರದ ಕಾನೂನು ಪ್ರಕ್ರಿಯೆಗಳನ್ನು ರದ್ದು ಮಾಡುವಂತೆ ಕೋರಿ ಹರೀಶ್ ಪೂಂಜ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಸ್. ರಾಚಯ್ಯ ಅವರ ರಜಾಕಾಲೀನ ಏಕಸದಸ್ಯ ಪೀಠ ನಡೆಸಿದ ವೇಳೆ ಸರಕಾರ ಈ ಮಾಹಿತಿ ನೀಡಿದೆ.
ಹರೀಶ್ ಪೂಂಜ ಪರ ವಕೀಲ ಪ್ರಸನ್ನ ದೇಶಪಾಂಡೆ ವಾದ: ಶಾಸಕ ಹರೀಶ್ ಪೂಂಜ ಪರ ವಕೀಲ ಪ್ರಸನ್ನ ದೇಶಪಾಂಡೆ ಹೈಕೋರ್ಟ್‌ನಲ್ಲಿ ವಾದ ಮಂಡಿಸಿ ಇದು ವಿಶೇಷ ಪ್ರಕರಣವಾಗಿದೆ, ಅರ್ಜಿದಾರರು ಶಾಸಕರಾಗಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ಅದನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಅದು ಟ್ರಾನ್ಸಿಟ್ ಹಂತದಲ್ಲಿದೆ. ನಮಗೆ ಯಾವುದೇ ದಾಖಲೆ ದೊರೆತಿಲ್ಲ. ಈ ನಡುವೆ ಅತ್ಯಂತ ಕಡಿಮೆ ಅವಧಿಯಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಅದಕ್ಕೆ ಅವರಿಗೆ ಸ್ವಾತಂತ್ರ್ಯವಿದೆ. ಆದರೆ ಇದು ಸರಿಯಾದ ವಿಧಾನವಲ್ಲ. ಹೀಗಾಗಿ ಬಲವಂತದ ಕ್ರಮಕೈಗೊಳ್ಳದಂತೆ ಆದೇಶಿಸಬೇಕು ಮತ್ತು ಆರೋಪ ಪಟ್ಟಿಯ ಪ್ರತಿ ನೀಡಲು ಆದೇಶಿಸಬೇಕು ಎಂದು ಕೋರಿದರು.

ನನ್ನ ಬಳಿಯೂ ಆರೋಪ ಪಟ್ಟಿ ಇಲ್ಲ ಎಂದು ಹೇಳಿದ ಸರಕಾರಿ ಅಭಿಯೋಜಕ ಜಗದೀಶ್: ರಾಜ್ಯ ಸರಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರಕಾರಿ ಅಭಿಯೋಜಕ ಬಿ.ಎನ್.ಜಗದೀಶ್ ಅವರು ಪ್ರಕರಣದ ತನಿಖೆ ಪೂರ್ಣಗೊಂಡಿದೆ. ಮಂಗಳವಾರ ಆರೋಪ ಪಟ್ಟಿಯನ್ನು ಸಕ್ಷಮ ನ್ಯಾಯಾಲಯಕ್ಕೆ ತನಿಖಾಧಿಕಾರಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಒದಗಿಸಲಾಗಿದೆ. ಆರೋಪ ಪಟ್ಟಿ ಸಲ್ಲಿಸಿರುವುದರಿಂದ ಹರೀಶ್ ಪೂಂಜ ಅವರು ಹೊಸ ಅರ್ಜಿ ಸಲ್ಲಿಸಬೇಕು. ಇಲ್ಲವೇ ಅದನ್ನು ತಿದ್ದುಪಡಿ ಮಾಡಬೇಕು. ಈಗಲೇ ಆರೋಪ ಪಟ್ಟಿ ಪ್ರತಿ ನೀಡಬೇಕು ಎಂದರೆ ಅದು ನನ್ನ ಬಳಿಯೂ ಇಲ್ಲ ಎಂದು ಹೇಳಿದರು.

ಕೋಮು ಭಾಷಣದಿಂದ ಕೊಲೆಗಳು ನಡೆಯುತ್ತಿದೆ ಎಂದ ವಕೀಲ ಎಸ್. ಬಾಲನ್: ಹರೀಶ್ ಪೂಂಜ ವಿರುದ್ಧ ದೂರು ದಾಖಲಿಸಿರುವ ತೆಕ್ಕಾರು ನಿವಾಸಿ ಎಸ್.ಬಿ.ಇಬ್ರಾಹಿಂ ಪರವಾಗಿ ಹಾಜರಾಗಿದ್ದ ವಕೀಲ ಎಸ್.ಬಾಲನ್ ಅವರು ಇಬ್ರಾಹಿಂ ಪರವಾಗಿ ವಕಾಲತ್ತು ಹಾಕಿದ್ದೇನೆ. ಈ ಹಿಂದೆ ಪೂಂಜ ಅವರು ೭ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಸಾರ್ವಜನಿಕವಾಗಿ ಅವರು ಬಳಕೆ ಮಾಡಿರುವ ಭಾಷೆಯನ್ನು ನ್ಯಾಯಾಲಯ ನೋಡಬೇಕು. ಈ ಪ್ರಕರಣ ದಾಖಲಾದ ಬಳಿಕ ಪೂಂಜ ಅವರು ಬಹಿರಂಗವಾಗಿ ಇನ್ನೂ ನೂರು ಪ್ರಕರಣವನ್ನು ಸರಕಾರ ದಾಖಲಿಸಲಿ. ಅದಕ್ಕೆ ಹೆದರುವ ಮಗ ನಾನಲ್ಲ ಎಂದಿದ್ದಾರೆ. ಇಂಥ ಕೋಮು ಭಾಷಣದಿಂದ ಕೊಲೆಗಳು ನಡೆಯುತ್ತಿವೆ. ಅವರು ವಿಷ ಉಗುಳುತ್ತಿದ್ದಾರೆ. ಹೀಗಾಗಿ ರಜಾಕಾಲ ಮುಗಿದ ಬಳಿಕ ವಿಚಾರಣೆ ನಡೆಸಬಹುದು. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲಾಗುವುದು ಎಂದರು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ೧೪೪ ಸೆಕ್ಷನ್ ಜಾರಿಯಲ್ಲಿರುವ ಸಂದರ್ಭದಲ್ಲಿ ಕೋಮುಗಲಭೆ ಹುಟ್ಟು ಹಾಕಬೇಕು ಎಂಬ ಕಾರಣಕ್ಕಾಗಿಯೇ ಶಾಸಕ ಹರೀಶ್ ಪೂಂಜ ತೆಕ್ಕಾರಿನಲ್ಲಿ ಕೋಮುದ್ವೇಷದ ಭಾಷಣ ಮಾಡಿದ್ದಾರೆ. ಶಾಸಕಾಂಗಕ್ಕೆ ಅನರ್ಹವಾಗಿರುವ ಇವರ ವಿರುದ್ಧ ಇದಲ್ಲದೆ ಏಳು ಎಫ್‌ಐಆರ್ ದಾಖಲಾಗಿದೆ. ಏಳು ಎಫ್‌ಐಆರ್‌ಗಳೂ ಪುನರಾವರ್ತಿತ ಆಪರಾಧವೇ ಆಗಿದೆ. ಎಲ್ಲಾ ಎಫ್‌ಐಆರ್‌ಗಳಲ್ಲೂ ಜಾಮೀನು ತೆಗೆದುಕೊಂಡಿದ್ದಾರೆ. ಅಪರಾಧವನ್ನು ಪುನರಾವರ್ತಿಸಬಾರದು ಎಂಬ ನ್ಯಾಯಾಲಯದ ಷರತ್ತುಗಳನ್ನು ಉಲ್ಲಂಸಿದ್ದಾರೆ ಎಂದು ಬಾಲನ್ ನ್ಯಾಯಪೀಠದ ಗಮನ ಸೆಳೆದರು.

ವಿಚಾರಣೆ ಮುಂದೂಡಿಕೆ: ಹರೀಶ್ ಪೂಂಜ ಪರ ವಕೀಲ ಪ್ರಸನ್ನ ದೇಶಪಾಂಡೆ, ವಿಶೇಷ ಸರಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಮತ್ತು ದೂರುದಾರ ಎಸ್.ಬಿ. ಇಬ್ರಾಹಿಂ ಪರ ವಕೀಲ ಎಸ್.ಬಾಲನ್ ಅವರ ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಸ್.ರಾಚಯ್ಯ ಅವರು ಹರೀಶ್ ಪೂಂಜ ಪರ ವಕೀಲರಿಗೆ ತಿದ್ದುಪಡಿ ಅರ್ಜಿ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಮೇ. ೨೨ಕ್ಕೆ ಮುಂದೂಡಿದ್ದಾರೆ.

LEAVE A REPLY

Please enter your comment!
Please enter your name here