ಬೆಳ್ತಂಗಡಿ: ಬೆಳಾಲು ಗ್ರಾಮದ ಶ್ರೀನಿಲಯ ನಿವಾಸಿ, ಬೆಳಾಲು ಗ್ರಾಮ ಪಂಚಾಯತ್ ನೀರು ನಿರ್ವಾಹಕರಾಗಿರುವ ಶಶಿಧರ ಮತ್ತು ಅವರ ತಾಯಿಗೆ ಅಣ್ಣಿ ಗೌಡ ಹಾಗೂ ಮನೆಯವರು ಹಲ್ಲೆ ನಡೆಸಿದ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಕರಣದ ಸಾರಾಂಶ: ಬೆಳಾಲು ಗ್ರಾ.ಪಂ. ನೀರು ನಿರ್ವಾಹಕ ಶಶಿಧರ ಅವರ ಮನೆಯ ನಾಯಿ ಪಕ್ಕದ ಮನೆಯ ಸುಮಿತ್ರ ಅಣ್ಣಿ ಗೌಡ ಅವರ ಮನೆಯ ನಾಯಿಯನ್ನು ಕಚ್ಚಿ ಕೊಂದು ಹಾಕಿದೆ ಎಂದು ಅಣ್ಣಿ ಗೌಡ ಹಾಗು ಅವರ ಹೆಂಡತಿ ಮತ್ತು ಮಕ್ಕಳು ಶಶಿಧರ್ ರವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ನಿಮ್ಮ ಮನೆಯಲ್ಲಿ ಬೀದಿ ನಾಯಿಗಳನ್ನು ಸಾಕಿರುತ್ತಿರಾ ಎಂದು ಕೇಳಿದ್ದಾರೆ. ಆಗ “ನಮ್ಮ ಮನೆಯ ನಾಯಿ ನಿಮ್ಮ ಮನೆಯ ನಾಯಿಯನ್ನು ಕಚ್ಚಿ ಕೊಂದಿರುವುದಿಲ್ಲ’ ಎಂದು ಶಶಿಧರ್ ಹೇಳಿದಾಗ ಇದೇ ವಿಚಾರದಲ್ಲಿ ಶಶಿಧರ್ ರವರ ಅಮ್ಮನಿಗೆ 3 ಜನ ಸೇರಿ ಕೈಯಿಂದ ಬೆನ್ನಿಗೆ, ಕೈ ರಟ್ಟೆಗೆ ಹೊಡೆದುದಲ್ಲದೆ ಶಶಿಧರ ರವರಿಗೂ ಕೈಯಿಂದ ಹಲ್ಲೆ ಮಾಡಿರುತ್ತಾರೆ. ಅದೇ ಸಮಯಕ್ಕೆ ಅಣ್ಣಿ ಗೌಡ ರವರು ನಮ್ಮ ಮನೆಯವರಲ್ಲಿ ಏನು ಮಾತನಾಡುತ್ತೀರಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಧರಿಸಿದ್ದ ರವಿಕೆಯನ್ನು ಕೈಯಿಂದ ಹರಿದು ಮಾನಕ್ಕೆ ಕುಂದುಂಟು ಆಗುವ ರೀತಿಯಲ್ಲಿ ವರ್ತಿಸಿ, ಮುಂದಕ್ಕೆ ನಿಮ್ಮ ಮಗ ಶಶಿಧರನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಹೋಗಿರುತ್ತಾರೆ. ಅದೇ ದಿನ ರಾತ್ರಿ ಹಲ್ಲೆ ನಡೆಸಿದ ನೋವು ಜಾಸ್ತಿಯಾಗಿರುವುದರಿಂದ ಮಗ ಶಶಿಧರರವರು ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಯಾ ದಾಖಲು ಮಾಡಿಕೊಂಡಿರುತ್ತಾರೆ ಎಂದು ಶಶಿಧರ ಅವರ ತಾಯಿ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.