ಧರ್ಮಸ್ಥಳ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಅಂದಿನ ಜೀವನ ಇತಿಹಾಸವನ್ನು ಅರಿಯದೆ ಇಂದಿನ ಸಾಮಾಜಿಕ ವ್ಯವಸ್ಥೆಯನ್ನು ಅಳತೆ ಮಾಡುವುದು ಅಸಾಧ್ಯ. ಅವರು ಕೇವಲ ಒಂದು ಸಮುದಾಯಕ್ಕೆ ಒಂದು ಜನಾಂಗಕ್ಕೆ ಸೀಮಿತರಾದವರಲ್ಲ ಇಡೀ ಭಾರತದ ಪ್ರಜೆಗಳು ಸ್ವಾತಂತ್ರ್ಯ-ಸಮಾನತೆ-ಭ್ರಾತ್ವತ್ವದಿಂದ ಕೂಡಿ ಬಾಳಬೇಕು ಎನ್ನುವ ಗುರಿಯನ್ನು ಇಟ್ಟುಕೊಂಡು ಇಡೀ ಮಾನವ ಸಮುದಾಯಕ್ಕೆ ಎಲ್ಲಾ ಕಾಲಘಟ್ಟದಲ್ಲೂ ಅನ್ವಯವಾಗುವಂತಹ ಕಾನೂನುಗಳನ್ನು ಒಳಗೊಂಡ ಶ್ರೇಷ್ಠ ಸಂವಿಧಾನವನ್ನು ಈ ದೇಶಕ್ಕೆ ನೀಡಿದ್ದಾರೆ. ಅವರು ಪಟ್ಟ ಪರಿಶ್ರಮ, ನಿರಂತರ ಓದುವಿಕೆಯ ಶ್ರದ್ಧೆ, ತನ್ನ ಕಾರ್ಯಕ್ಷಮತೆಯ ಮೇಲಿನ ಬದ್ಧತೆ ಇವುಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸಬೇಕಾಗಿದೆ ಎಂದು ಖ್ಯಾತ ಸಾಹಿತಿ, ಅಂಕಣಕಾರರು, ಅಧ್ಯಾಪಕರೂ ಆಗಿರುವ ಅರವಿಂದ ಚೊಕ್ಕಡಿಯವರು ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಧರ್ಮಸ್ಥಳ ವಲಯ ಘಟಕದ ಆಶ್ರಯದಲ್ಲಿ ಮೇ. 7ರಂದು ನಡೆದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ 135ನೇ ಜನ್ಮ ದಿನಾಚರಣೆಯ ಸಂಭ್ರಮದಲ್ಲಿ ಅವರು ದಿಕ್ಸೂಚಿ ಭಾಷಣವನ್ನು ಮಾಡಿದರು. ಗಾಂಧೀಜಿಯವರು ಧಾರ್ಮಿಕ ಹಿನ್ನೆಲೆಯ ಮೂಲಕ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನಪಟ್ಟರೆ ಅಂಬೇಡ್ಕರ್‌ರವರು ಕಾನೂನಿನ ಚೌಕಟ್ಟಿನಲ್ಲಿ ಈ ಸಮಾಜವನ್ನು ಬೆಸೆಯುವ ಚಿಂತನೆಯೊಂದಿಗೆ ಸತತ ಅಭ್ಯಾಸಗಳ ಮೂಲಕ ಗಳಿಸಿದ ತನ್ನ ಜ್ಚಾನ ಭಂಡಾರನ್ನು ಧಾರೆಯೆರೆದು ಈ ದೇಶದ ಸಂವಿಧಾನವನ್ನು ರಚಿಸಿದರು. ಅವರ ತತ್ವ ಆದರ್ಶಗಳನ್ನು ನಾವು ಪರಿಪಾಲಿಸಬೇಕಾದರೇ ನಮ್ಮೆಲ್ಲರ ಮನೆಯಲ್ಲಿ ಕನಿಷ್ಠ ೫೦ ಪುಸ್ತಕಗಳಿರುವ ಒಂದು ಸಣ್ಣ ಗ್ರಂಥಾಲಯವನ್ನು ತೆರೆಯುವುದು ಇಂದಿನ ಅನಿವಾರ್ಯವಾಗಿದೆ. ಪುಸ್ತಕಗಳನ್ನು ಎಲ್ಲಾ ಮಕ್ಕಳು ಓದಬೇಕೆಂದೇನಿಲ್ಲ ಪ್ರತಿದಿನ ಪುಸ್ತಕಗಳನ್ನು ನೋಡುವುದರಿಂದಲೂ ಮಕ್ಕಳ ಮಾನಸಿಕ ಚಿಂತನೆಯಲ್ಲಿ ಬಹಳಷ್ಟು ಪರಿವರ್ತನೆಯಾಗಬಲ್ಲದು ಆ ಮುಖೇನ ನಮ್ಮ ಮಕ್ಕಳು ಸಮಾಜಕ್ಕೆ ಆಸ್ತಿಯಾಗಿ ನಿರ್ಮಾಣವಾಗಬಲ್ಲರು ಎನ್ನುವ ಆಶಯವನ್ನು ವ್ಯಕ್ತಪಡಿಸಿದರು.
ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ ಅವರು ದೀಪ ಬೆಳಗಿಸಿ, ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಂಬೇಡ್ಕರ್‌ರವರ ಅದಮ್ಯ ಚಿಂತನೆಯ ಫಲವಾಗಿ ಸಮಾಜದಲ್ಲಿ ನಾವು ವ್ಯವಸ್ಥಿತ ಹಾಗೂ ಉತ್ತಮ ಜೀವನ ನಡೆಸುವಂತಾಗಿದೆ. ಅವರು ಮಹಿಳೆಯರಿಗಾಗಿ ಮಾಡಿರುವ ಕೆಲಸಗಳು ಅದರ ಉದ್ದೇಶಗಳಲ್ಲೊಂದಾದದ್ದು. ಮಹಿಳಾ ಸಬಲೀಕರಣಕ್ಕಾಗಿ ಪ್ರಯತ್ನ ನಮ್ಮ ಸಿರಿ ಸಂಸ್ಥೆಯಿಂದ ನಡೆಯುತ್ತಿದೆ. ಅದರ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸುವ ಕೆಲಸ ಮಾಡಿದ್ದು ಈ ಹಿನ್ನಲೆಯಲ್ಲಿ ನೂತನ ಬೃಹತ್ ಕಟ್ಟಡವನ್ನು ನಿರ್ಮಿಸಿ ಅಲ್ಲಿ ಎಲ್ಲಾ ರೀತಿಯಲ್ಲೂ ಅನುಕೂಲಕರವಾದ ವಾತಾವರಣದೊಂದಿಗೆ ಕೆಲಸ ನೀಡಿದ್ದು. ಈ ಸಂಸ್ಥೆಯಲ್ಲಿ ಕೆಲಸ ಮಾಡಲು ಎಲ್ಲಾ ಮಹಿಳೆಯರಿಗೂ ಅವಕಾಶ ಮಾಡಿಕೊಡಲಾಗಿದೆ.
ಅಂಬೇಡ್ಕರ್‌ರವರು ಜನ್ಮದಿಂದ ದೊಡ್ಡವರಾದವರಲ್ಲ ಅವರ ಜ್ಞಾನಭಂಡಾರದಿಂದ ಇಡೀ ವಿಶ್ವಕ್ಕೆ ಪರಿಚಯವಾದವರು ಅವರ ಜೀವನದ ತತ್ವ ಆದರ್ಶಗಳನ್ನು ಇಂದಿನ ಯುವ ಸಮೂಹ ಅರಿತುಕೊಳ್ಳಬೇಕು ಮತ್ತು ಆ ದಿಶೆಯಲ್ಲಿ ನಡೆಯುವಂತೆ ಸಂಘಟನೆಗಳು ಕೆಲಸ ಮಾಡಬೇಕು ಎನ್ನುವ ಕಿವಿಮಾತುಗಳನ್ನು ಹೇಳಿ ಶುಭಹಾರೈಸಿದರು. ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಗಣೇಶ್ ಪ್ರಸಾದ್ ಮೂಡಬಿದ್ರೆ ಮಾತನಾಡಿ ಸಂಘಟನೆ ಈಗ ಎದುರಿಸುತ್ತಿರುವ ಜಾತಿ ಸಮೀಕ್ಷೆಯಲ್ಲಿ ಯಾವುದೇ ಗೊಂದಲಕ್ಕೂ ಒಳಗಾಗದೆ ಜಾತಿ ಆದಿದ್ರಾವಿಡ ಉಪಜಾತಿ ಗೊತ್ತಿಲ್ಲ ಎಂದು ನಮೂದಿಸಿ. ಈ ಸಮೀಕ್ಷೆಯಿಂದ ಯಾವುದೇ ಸಮಸ್ಯೆ ಆಗದಂತೆ ಸರಕಾರದೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರಕ್ಕೆ ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ಕೊಟ್ಟರು. ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲಾ, ಜಿಲ್ಲಾಧ್ಯಕ್ಷ ಶ್ರೀನಿವಾಸ ಅರ್ಬಿಗುಡ್ಡೆ, ತಾಲೂಕು ಘಟಕದ ಅಧ್ಯಕ್ಷ ದಿನೇಶ್ ಕೊಕ್ಕಡರವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಗ್ರಾಮ ಪಂಚಾಯತ್‌ನ ವಾರ್ಡ್ ಸದಸ್ಯರಾದ ಚಂದನ್‌ಪ್ರಸಾದ್ ಕಾಮತ್, ಗಾಯತ್ರಿ, ಅಶೋಕನಗರದ ಗುರಿಕಾರರಾದ ಕರಿಯ ಹಾಗೂ ಸದಾಶಿವ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಧರ್ಮಸ್ಥಳ ವಲಯ ಘಟಕದ ಅಧ್ಯಕ್ಷ ಗಣೇಶ್ ಡಿ. ಯವರು ಅಧ್ಯಕ್ಷತೆಯನ್ನು ವಹಿಸಿ, ಮಾತನಾಡಿ ಅಂಬೇಡ್ಕರ್ ಜಯಂತಿ ಅನ್ನುವುದು ಕೇವಲ ಒಂದು ಸಮುದಾಯದ ಕಾರ್ಯಕ್ರಮ ಅಥವಾ ಸಾಂದರ್ಭಿಕವಾಗಿ ನಡೆದು ಹೋಗುವ ಕಾರ್ಯಕ್ರಮವಾಗಬಾರದು. ಅಂಬೇಡ್ಕರ್‌ರವರ ಜೀವನಾದರ್ಶಗಳು, ಅವರ ವಿಚಾರ ಧಾರೆಗಳು ನಮ್ಮೆಲ್ಲರ ಬದುಕಿಗೆ ಪ್ರೇರಣೆಯಾಗಬೇಕು ಯುವ ಜನತೆ ಆ ಮಾರ್ಗದಲ್ಲಿ ಮುನ್ನಡೆಯುವಂತೆ ಈ ಕಾರ್ಯಕ್ರಮಗಳು ಸ್ಫೂರ್ತಿಯಾಗಬೇಕು ಎನ್ನುವ ನಿಟ್ಟಿನಲ್ಲಿ ಕಳೆದ ಹತ್ತು ವರ್ಷಗಳಿಂದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ನಾವು ಮಾಡುತ್ತಿದ್ದೇವೆ. ಅಶೋಕನಗರದಲ್ಲಿ ಅನೇಕ ಕ್ರೀಡಾಕೂಟಗಳು, ಧಾರ್ಮಿಕ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ಮಾಡಿ ತೋರಿಸಿದ್ದಾರೆ ಇದೆಲ್ಲವೂ ಯಾವುದೇ ಒಬ್ಬನಿಂದ ಸಾಧ್ಯವಾಗಿಲ್ಲ ಎಲ್ಲರ ಕೂಡುವಿಕೆಯಿಂದ ಎಲ್ಲರ ಪರಿಶ್ರಮದ ಫಲವಾಗಿ ಆ ಕಾರ್ಯಕ್ರಮಗಳು ಯಶಸ್ವಿಯಾಗಿದೆ ಎಂದು ಹೇಳುತ್ತಾ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರೆಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಿದರು.
ಧರ್ಮಸ್ಥಳ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರೀತಮ್ ಡಿ., ನಿರ್ದೇಶಕರಾದ ಧನಲಕ್ಷ್ಮೀ ಜನಾರ್ದನ್, ಶೀನ, ಗ್ರಾಮ ಪಂಚಾಯತ್ ಸದಸ್ಯರಾದ ಹರ್ಷಿತ್ ಜೈನ್, ಸುನೀತಾ ಶ್ರೀಧರ್, ಭಾರತಿ, ಸುನೀತಾ ಡಿ.ಕೆ., ಮುರಳೀಧರ ದಾಸ್, ಉದ್ಯಮಿಗಳಾದ ಸದಾಶಿವ, ಚಂದ್ರನ್ ನಾಯರ್, ಶ್ರೀ ಕ್ಷೇತ್ರದ ವಿವಿಧ ವಿಭಾಗಗಳ ಮೆನೇಜರ್‌ಗಳಾದ ಯೋಗೀಶ್, ರವಿ ಹಾಗೂ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಶೋಕನಗರದ ದಿವಾಕರ ಇವರಿಗೆ ‘ಉತ್ತಮ ನಾಗರಿಕ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಅನಿತಾ ಬಿ. ಯವರು ದಿವಾಕರರವರ ಪರಿಚಯವನ್ನು ಓದಿದರು. ಸುಪ್ರಿತಾ ಇವರ ಭೀಮ ಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶೇಖರ್ ಧರ್ಮಸ್ಥಳ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸುಜಾತ ವರದಿ ವಾಚಿಸಿದರು. ಸಂತೋಷ್ ಎಸ್. ಮತ್ತು ಶೇಖರ್‌ರವರು ಕಾರ್ಯಕ್ರಮ ನಿರೂಪಿಸಿದರು. ಸುನೀತಾ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿಠ್ಠಲ ನಾಯಕ್ ಕಲ್ಲಡ್ಕ ಇವರಿಂದ ಗೀತ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಹಾಗೂ ವಿವಿಧ ತಂಡಗಳಿಂದ ಅಂಬೇಡ್ಕರ್‌ರವರ ಜೀವನ ಚಿತ್ರಣದ ನೃತ್ಯ ರೂಪಕ ಹಾಗೂ ಇನ್ನಿತರ ನೃತ್ಯವೈವಿಧ್ಯ ಕಾರ್ಯಕ್ರಮ ನೆರವೇರಿತು. ಸಂತೋಷ್ ಎಸ್. ಧನ್ಯವಾದವಿತ್ತರು.