
ಬೆಳ್ತಂಗಡಿ: ಕರ್ನಾಟಕ ಸರಕಾರದ ವ್ಯಾಪ್ತಿಯಲ್ಲಿ ಮೆಸ್ಕಾಂ ಇಲಾಖೆಯು ರೈತರ ಕೃಷಿ ಪಂಪು ಸೆಟ್ ಸ್ಥಾವರಗಳಿಗೆ ಹೆಚ್ಚುವರಿ 15000/- ಠೇವಣಿ ವಿಧಿಸುವ ಯೋಜನೆ ಹಾಕಿಕೊಂಡಿದ್ದು, ಈಗಾಗಲೇ ಅಂದಾಜು ಪಟ್ಟಿ ತಯಾರಿಸಿ ಕಾರ್ಯದೇಶವಾದ ಯಾವುದೇ ಪಂಪು ಸೆಟ್ಟುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿಲ್ಲ. ಆದ್ದರಿಂದ ಬೆಳ್ತಂಗಡಿ ತಾಲೂಕಿನ ಕೃಷಿಕ ಬಂಧುಗಳು ಶಾಸಕ ಹರೀಶ್ ಪೂಂಜಾ ಅವರನ್ನು ಭೇಟಿಯಾಗಿ ತಮ್ಮ ಮನವಿಯನ್ನು ಅರ್ಪಿಸಿದರು.
ಕೃಷಿಕರು ಈಗಾಗಲೇ ಬ್ಯಾಂಕುಗಳಿಂದ ಸಾಲ ಮಾಡಿ ಅಡಿಕೆ ಹಾಗೂ ತೆಂಗು ಇನ್ನಿತರ ಕೃಷಿ ಅಭಿವೃದ್ಧಿ ಮಾಡಿದ್ದು, ಕೃಷಿ ಪಂಪ ಸೆಟ್ಟುಗಳಿಗೆ ವಿದ್ಯುತ್ ಸಂಪರ್ಕ ಸಿಗದೇ ಬಸವಳಿದಿದ್ದಾರೆ. ಈ ಮೊದಲು ಇಲಾಖೆ ನೀಡಿದ ಇಂಟಿಮೇಶನ್ ಪ್ರಕಾರ ಠೇವಣಿ ಪಾವತಿಸಿದ್ದು, ಇದೀಗ ಹೆಚ್ಚುವರಿ 15 ಸಾವಿರ ಮೊತ್ತವನ್ನು ಪಾವತಿಸಲು ಮೆಸ್ಕಾಂ ಇಲಾಖೆ ತಿಳಿಸಿರುತ್ತದೆ. ಈ ಬಗ್ಗೆ ಇಲಾಖೆ ಹಾಗೂ ಸರಕಾರದ ಮಟ್ಟದಲ್ಲಿ ಆಗ್ರಹಿಸಿ ರೈತರ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಬೇಕಾಗಿ ಮಾನ್ಯ ಶಾಸಕರಿಗೆ ತಾಲೂಕಿನ ಕೃಷಿಕರ ಪರವಾಗಿ ಮನವಿ ಸಲ್ಲಿಸಲಾಯಿತು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಶಾಸಕರು ತಾಲೂಕಿನ ಕೃಷಿಕರಿಗೆ ಭರವಸೆ ನೀಡಿದರು.