
ಬೆಳ್ತಂಗಡಿ: ಕರ್ನಾಟಕದಲ್ಲಿ ಮಹಾತ್ಮ ಪ್ರೊ. ಬಿ. ಕೃಷ್ಣಪ್ಪರವರ ನಾಯಕತ್ವದಲ್ಲಿ ಸ್ಥಾಪನೆಗೊಂಡಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಂಬ ಸಾಮಾಜಿಕ ಸಂಘಟನೆಯು ನಾಡಿನ ದಲಿತ, ದಲಿತೇತರ ಎಲ್ಲಾ ಶೋಷಿತ ಸಮುದಾಯಗಳ ಆಶಾಕಿರಣವಾಗಿ ಪ್ರಬಲ ಧ್ವನಿಯಾಗಿ ಸಿಡಿದೆದ್ದು, ಸ್ವಾಭಿಮಾನಿ ದಲಿತರನ್ನು ಒಗ್ಗೂಡಿಸಿಕೊಂಡು ರಾಜ್ಯಾದ್ಯಂತ ಹೆಮ್ಮರವಾಗಿ ಬೆಳದು ಬಂದಿರುವುದು. 70ರ ದಶಕದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಾಗಿ ಉದಯಿಸಿದ ಕರ್ನಾಟಕ ದಲಿತ ಚಳುವಳಿ 2025ನೇ ವರ್ಷದಲ್ಲಿ 50ರ ಸಂಭ್ರಮದಲ್ಲಿದೆ. ಇದರ ಅಂಗವಾಗಿ ಎ. 28ರಂದು ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮ ಸಮಾವೇಶ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಬಿ.ಕೆ. ವಸಂತ್ ಹೇಳಿದರು. ಅವರು ಎ. 21ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
50 ವರ್ಷಗಳ ಹಿಂದೆ ನಾಡಿನ ಸಮಕಾಲೀನ ಪ್ರಗತಿಪರ ಸಮಾನ ಮನಸ್ಕ ಚಿಂತಕರು, ಸಾಹಿತಿಗಳು, ಲೇಖಕರು, ಪತ್ರಕರ್ತರು ಹೋರಾಟಗಾರರು ನಡೆಸಿದ ಚಿಂತನೆ, ಹೋರಾಟಗಳ ಫಲವೆಂಬಂತೆ ಕರ್ನಾಟಕ ರಾಜಕೀಯದಲ್ಲಿ ತೀವು ಸಂಚಲನ ಮೂಡಿಸಿದ್ದ ‘ಬೂಸಾ’ ಚಳುವಳಿ ಹೊತ್ತಿಸಿದ ಕಿಡಿ ಪ್ರೊ.ಬಿ.ಕೃಷ್ಣಪ್ಪನವರ ನಾಯಕತ್ವದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹುಟ್ಟಿಗೆ ಕಾರಣವಾಯಿತೆಂಬುದು ಇತಿಹಾಸ. ಚಂದ್ರಗುತ್ತಿಯ ಅನಿಷ್ಟ ಬೆತ್ತಲೆ ಸೇವೆ, ಬೆಂಡಿಗೇರಿ ದೌರ್ಜನ್ಯ, ಚುಂಚಿ ಕಾಲೋನಿ ಭೂಹೋರಾಟ, ಅನುಸೂಯಾ ಅತ್ಯಾಚಾರ ಪ್ರಕರಣ ಕಂಬಾಲಪಳ್ಳಿ ದಲಿತರ ಸಾಮೂಹಿಕ ಸಜೀವ ದಹನ ಪ್ರಕರಣ ಮುಂತಾದ ನೂರಾರು ಘೋರ ದೌರ್ಜನ್ಯ ಪ್ರಕರಣಗಳ ವಿರುದ್ಧದ ಐತಿಹಾಸಿಕ ಹೋರಾಟಗಳ ಮೂಲಕ ಸಂಘಟನೆಯು ಶೋಷಿತ ಸಮುದಾಯಗಳನ್ನು ಸಂಘಟಿಸುತ್ತಾ ಹೋರಾಟಗಳ ಮೂಲಕ ರಾಜ್ಯಾದ್ಯಂತ ವ್ಯಾಪಿಸಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ವಾಭಿಮಾನಿ ಹೋರಾಟದ ಬೀಜವನ್ನು ದಕ್ಷಿಣ ಕನ್ನಡದ ನೆಲದಲ್ಲಿ ಬಿತ್ತಿದವರು ಜಿ.ಸೋಮಶೇಖರ್ ಎಂಬ ಒಬ್ಬ ಬಿಲ್ಲವ ಸಮುದಾಯದ ವಿದ್ಯಾರ್ಥಿ, ಕರ್ನಾಟಕದ ಮಹಾತ್ಮಾರೆಂದೇ ದಲಿತರಿಂದ ಕೊಂಡಾಡಲ್ಪಡುವ ಪ್ರೊ.ಬಿ.ಕೃಷ್ಣಪ್ಪರವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಂಬ ಕೆಚ್ಚೆದೆಯ ಸ್ವಾಭಿಮಾನಿ ಸಂಘಟನೆಯ ಮೂಲಕ ನಾಡಿನ ದಲಿತರ ಗುಡಿಸಲುಗಳಲ್ಲಿ ಹೋರಾಟದ ಹಣತೆಯನ್ನು ಹೆಚ್ಚಿ ಎಂದೂ ಆರದಂತೆ ನೋಡಿಕೊಳ್ಳಿ ಎಂಬ ಸಂದೇಶ ನೀಡಿದರು. 1980ರಲ್ಲಿ ಜಿಲ್ಲಾ ಮಟ್ಟದಿಂದ ಬೆಳ್ತಂಗಡಿ ತಾಲೂಕಿಗೆ ಪ್ರವೇಶಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಯು ಬೆರಳೆಣಿಕೆಯ ಸ್ಥಳೀಯ ಮುಖಂಡರ ಮೂಲಕ ಗ್ರಾಮೀಣ ಪ್ರದೇಶಗಳಿಗೂ ಪಸರಿಸುವಂತಾಯಿತು.
ಅಂದು ಬಡತನ, ನಿರುದ್ಯೋಗ, ಮೂಢನಂಬಿಕೆಗಳ ಸಾಮಾಜಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ಶೋಷಣೆಗೊಳಗಾಗುತ್ತಾ ಅಸ್ಪೃಶ್ಯತೆ, ಜಾತಿ ದೌರ್ಜನ್ಯ, ಭೂ ದೌರ್ಜನ್ಯಗಳಿಂದ ನೊಂದಿದ್ದ ಅಸಂಘಟಿತ ಶೋಷಿತ, ದಲಿತರ ಪಾಲಿಗೆ ಆಪತ್ಪಾಂಧವನಂತೆ ಮೂಡಿ ಬಂದ ದ.ಸಂ.ಸ. ದಲಿತ ಸಮುದಾಯದಲ್ಲಿ ಧೈರ್ಯ ತುಂಬಿ ಸಂಘಟನಾತ್ಮಕ ಜಾಗೃತಿ ಮೂಡಿಸಿ ಒಗ್ಗೂಟಿಸುವಲ್ಲಿ ಯಶಸ್ವಿಯಾಗಿತ್ತು. ಭಾರತದ ಶೋಷಿತರ ವಿಮೋಚಕ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ವಿಚಾರಧಾರೆಯೊಂದಿಗೆ ಪ್ರೊ. ಕೃಷ್ಣಪ್ಪರವರ ಹೋರಾಟದ ಪಾಠದಿಂದ ಅವರು ಕೈಗೆ ಕೊಟ್ಟ ಸ್ವಾಭಿಮಾನದ ನೀಲಿ ಬಾವುಟದ ಸ್ಪೂರ್ತಿಯಿಂದ ನಾಡಿನ ಮೂಲೆ ಮೂಲೆಯಲ್ಲಿ ಶೋಷಕ ವರ್ಗ ಮತ್ತು ಒಡೆದು ಆಳುವವರ ದರ್ಪ, ದಮನ ದಬ್ಬಾಳಿಕೆಗಳಿಗೆ ಸಡ್ಡು ಹೊಡೆದು ಸಿಡಿದೆದ್ದ ದಲಿತ ಸಂಘರ್ಷ ಸಮಿತಿಯು ಹಂತ ಹಂತವಾಗಿ ಚಳುವಳಿಯಾಗಿ ಬೆಳೆದು ದಲಿತ ಸಮುದಾಯದ ಏಳಿಗೆಯನ್ನು ನಿರಾಕರಿಸುತ್ತಿದ್ದ ಸಾಮಾಜಿಕ ಸಂಕೋಲೆಗಳನ್ನು ಕಡಿದುಕೊಂಡು ಮುಂದೆ ಸಾಗಿತು ಎಂದು ಹೇಳಿದರು.
ಸಮಾವೇಶದಲ್ಲಿ ಮೈಸೂರು ವಿಶ್ವ ಮೈತ್ರಿ ಬೌದ್ಧ ವಿಹಾರದ ಡಾ. ಕಲ್ಯಾಣಸಿರಿ ಭಂತೇಶ್ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕರ್ನಾಟಕ ಸರಕಾರದ ವಿಧಾನ ಸಭಾ ಅಧ್ಯಕ್ಷ ಯು. ಟಿ. ಖಾದರ್ ಉದ್ಘಾಟನೆ ಮಾಡುವರು. ಕರ್ನಾಟಕ ದ. ಸಂ. ಸ. ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ರಾಜ್ಯ ಸಂಚಾಲಕ ಗುರುಮೂರ್ತಿ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿ ಹೋಳಿ, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಅರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಎಂ.ಎಲ್.ಸಿ. ಪ್ರತಾಪ ಸಿಂಹ ನಾಯಕ್ ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗಿಸುವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ ಎಂದರು.
ಗೌರವಾದ್ಯಕ್ಷ ಚೆನ್ನಕೇಶವ ಮಾತನಾಡಿ 50ವರ್ಷಗಳ ಹಿಂದೆ ಪ್ರಾರಂಭವಾದ ದಲಿತ ಸಮಿತಿಯ ಈ ಕಾರ್ಯಕ್ರಮಕ್ಕೆ ರಾಜಕೀಯ ನಾಯಕರು, ವಿವಿಧ ಸಂಘಟನೆಗಳು ಸಹಕಾರ ನೀಡಲಿದ್ದು ಈ ಸಮಾವೇಶ ಮುಂದಿನ ಜನಾಂಗಕ್ಕೆ ಹೊಸ ರೂಪರೇಶೆ ಕೊಡುವ ಕಾರ್ಯಕ್ರಮ ಆಗಲಿದೆ ಎಂದರು. ಕಾರ್ಯಾಧ್ಯಕ್ಷ ಶೇಖರ ಕುಕ್ಕೇಡಿ ಮಾತನಾಡಿ 50ನೇ ಸಂಭ್ರಮಕ್ಕೆ ದ. ಕ. ಜಿಲ್ಲೆಯ ತಾಲೂಕಿನ ಎಲ್ಲಾ ಸಂಘಟನೆಗಳು, ರಾಜ್ಯ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಚು ಬಾಂಗೇರು, ಕೋಶಾಧಿಕಾರಿ ಶ್ರೀಧರ್ ಎಸ್. ಕಳೆಂಜ, ಕಾರ್ಯಾಧ್ಯಕ್ಷರುಗಳಾದ ಕೆ. ನೇಮಿರಾಜ್ ಕಿಲ್ಲೂರು, ಸಂಜೀವ ಆರ್. ಬೆಳ್ತಂಗಡಿ, ರಮೇಶ್ ಆರ್. ಬೆಳ್ತಂಗಡಿ, ಉಪಾಧ್ಯಕ್ಷ ಪಿ.ಕೆ. ರಾಜು ಪಡಂಗಡಿ, ಸವಿತಾ ಎನ್. ಅಟ್ರಿಂಜೆ, ಸುಂದರ ನಾಲ್ಕೂರು, ಸುರೇಶ್ ಗೇರುಕಟ್ಟೆ ಉಪಸ್ಥಿತರಿದ್ದರು.