ಕೊಕ್ಕಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಂಗಡಿ ತಾಲೂಕು ಶಾಖೆಯ ಹೇಮಾವತಿ ವೀರೇಂದ್ರ ಹೆಗ್ಗಡೆಯವರ ಕನಸಿನ ‘ವಾತ್ಸಲ್ಯ’ ಕಾರ್ಯಕ್ರಮದಡಿಯಲ್ಲಿ, ಪ್ರತಿದಿನ ಮಾಶಾಸನ ಪಡೆಯುತ್ತಿರುವ ಅರಸಿನಮಕ್ಕಿ ವಲಯದ ವಾತ್ಸಲ್ಯ ಸದಸ್ಯೆ ರೇವತಿ ಅವರಿಗೆ ವಾತ್ಸಲ್ಯ ಮನೆ ನಿರ್ಮಾಣ ಮಾಡಿ ಹಸ್ತಾಂತರಿಸಲಾಯಿತು.
ಈ ವಾತ್ಸಲ್ಯ ಮನೆಯನ್ನು ಹೇಮಾವತಿಯವರು ಹಾಗೂ ಶ್ರದ್ದಾ ಅಮಿತ್ ರವರು ರೇವತಿಯವರಿಗೆ ಹಸ್ತಾಂತರಿಸಿದರು. ರೇವತಿ ಮಾತನಾಡುತ್ತಾ, “ನಾನು ಗಂಡನನ್ನು ಕಳೆದುಕೊಂಡು ಮನೆ ಬಿದ್ದು ಹೋಗಿ, ಬಾಡಿಗೆ ಮನೆಯಲ್ಲಿ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದೆ. ಈ ಸಂದರ್ಭಕ್ಕೆ ಮಾಶಾಸನ, ಮಕ್ಕಳ ವಿದ್ಯಾಭ್ಯಾಸಕ್ಕೆ ವಾತ್ಸಲ್ಯ ನಿಧಿ ಹಾಗೂ ಈಗ ನಿರ್ಮಾಣವಾದ ವಾತ್ಸಲ್ಯ ಮನೆ ಇವುಗಳಿಂದ ನನಗೆ ತಾಯಿಯ ಪ್ರೀತಿ, ದೇವತೆಯ ಸಾಂತ್ವನ ಸಿಕ್ಕಂತಾಗಿದೆ. ವೀರೇಂದ್ರ ಹೇಮಾವತಿಯವರಿಗೆ ದೇವರು ಉತ್ತಮ ಆರೋಗ್ಯ ಕೊಟ್ಟು ಕಾಪಾಡಲಿ” ಎಂದು ಭಾವೋದ್ರೇಕದಿಂದ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಯವರಾದ ಡಾ.ಹರೀಶ್ ಕೃಷ್ಣಸ್ವಾಮಿ, ನಿವೃತ್ತ ಪ್ರಾದೇಶಿಕ ನಿರ್ದೇಶಕರಾದ ಮಹಾವೀರ ಅಜ್ರಿ, ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ ಚೆನ್ನಪ್ಪ ಗೌಡ ಹಾಗೂ ಅವಿನಾಶ್ ಬಿಡೆ, ಜ್ಞಾನ ವಿಕಾಸ ವಿಭಾಗದ ನಿರ್ದೇಶಕರಾದ ವಿಠಲ ಪೂಜಾರಿ, ಜ್ಞಾನ ವಿಕಾಸ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಅಮೃತ್, ತಾಲೂಕು ಯೋಜನಾಧಿಕಾರಿ ಸುರೇಂದ್ರ, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಮೇಲ್ವಿಚಾರಕರು ಮತ್ತು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.