

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ “ದರ್ಪಣ” ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿನಿಸಿದ ಕಾಲೇಜಿನ ಹಿರಿಯ ವಿದ್ಯಾರ್ಥಿ ಪ್ರಸ್ತುತ ದ.ಕ.ಜಿ.ಪ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಲೆತ್ತೂರು ಇಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಮೊಹಮ್ಮದ್ ರಫೀಕ್‌ರವರು ನೀವು ಶಿಕ್ಷಕರಾಗಿ ಶಾಲೆಗೆ ತೆರಳಿದ ನಂತರ ಶಾಲೆಯಲ್ಲಿ ವಿವಿಧ ರೀತಿಯ ವಿದ್ಯಾರ್ಥಿಗಳಿರುತ್ತಾರೆ. ಅನೇಕ ಸವಾಲುಗಳಿರುತ್ತದೆ. ಅದನ್ನು ಸರಿಯಾಗಿ ನಿಭಾಯಿಸಿದಾಗ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ” ಎಂದು ಹೇಳಿದರು.
ಪ್ರಸ್ತುತ ದ.ಕ.ಜಿ.ಪ.ಸ.ಹಿ.ಪ್ರಾ. ಶಾಲೆ ಪೇರಲ್‌ತಡ್ಕ ಇಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮೀದೇವಿ ಬಿ. ಎನ್. ಇವರು ವೃತ್ತಿ ಶಿಕ್ಷಣ ಭವಿಷ್ಯಕ್ಕೆ ಬುನಾದಿ. ಕಠಿಣ ಪರಿಶ್ರಮ ಹಾಗೂ ಶ್ರಮದಿಂದ ಗುರಿ ಸಾಧ್ಯ. ಕನಸೆಂದರೆ ನಿದ್ರೆ ಮಾಡುವಾಗ ಬರುವುದಲ್ಲ, ಕನಸೆಂದರೆ ನಿದ್ರೆ ಮಾಡಲು ಬಿಡದೇ ಇರುವುದು. ಒಳ್ಳೆಯ ಶಿಕ್ಷಕ ಸದಾ ವಿದ್ಯಾರ್ಥಿಯಾಗಿರಬೇಕು ಎಂದು ಹೇಳಿದರು.

ಶಿಕ್ಷಕ ವೃತ್ತಿ ಖಾಲಿ ಸಂಬಳದ ವೃತ್ತಿಯಲ್ಲ. ಶಿಸ್ತು ಮತ್ತು ಸೇವಾ ಮನೋಭಾವ ಬೇಕು. ಒಂದು ಅಕ್ಷರ ಕಲಿಸಿದರೂ ಸಹ ಅವರೇ ಗುರುಗಳು. ಹತ್ತಿ ಬಂದ ಏಣಿಯನ್ನು ಎಂದೂ ಮರೆಯಬೇಡಿ. ಪ್ರಸ್ತುತ ಶಿಕ್ಷಣದಲ್ಲಿ ಶಿಕ್ಷೆ ಕೊಡುವಂತಿಲ್ಲ. ವಿದ್ಯಾರ್ಥಿಗಳಿಗೆ ಶಿಕ್ಷೆ ಕೊಡದ ಕಾರಣ ಮುಂದೆ ಸಮಾಜದವರು ಅವರಿಗೆ ಶಿಕ್ಷೆ ಕೊಡುವಂತಾಗಿದೆ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧನುಷ್ ಕೆ. ಪಿ. ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತೀ ವರ್ಷ ಎ. 15ರಂದು ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವನ್ನು ನಡೆಸುತ್ತೇವೆ. ಎಲ್ಲಾ ಹಿರಿಯ ವಿದ್ಯಾರ್ಥಿಗಳು ಬಂದು ಸಹಕರಿಸಬೇಕು. ಪ್ರಸ್ತುತ ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ಸಹಕಾರ ಕೊಡಬೇಕೆಂದು ಕಾಲೇಜಿನ ಪ್ರಾಂಶುಪಾಲ ಸಂತೋಷ್ ಆಲ್ಬರ್ಟ್ ಸಲ್ಡಾನ ಇವರು ಪ್ರಸ್ತಾವಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮೊಹಮ್ಮದ್ ರಫೀಕ್ ಹಾಗೂ ಲಕ್ಷ್ಮೀದೇವಿ ಬಿ.ಎನ್. ಇವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್ಲಾ ಉಪನ್ಯಾಸಕ ವರ್ಗದವರು, ಹಿರಿಯ ವಿದ್ಯಾರ್ಥಿಗಳು, ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಶಿಕ್ಷಣಾರ್ಥಿಗಳಾದ ಸಾಯಿನಾಬಾನು ಸ್ವಾಗತಿಸಿದರು. ಗಾಯನ ಮತ್ತು ಸುದೀಪ್ ಅತಿಥಿಗಳನ್ನು ಪರಿಚಯಿಸಿ, ಚೈತನ್ಯ ಬಿ. ಕಾರ್ಯಕ್ರಮವನ್ನು ನಿರೂಪಿಸಿದರು. ಮಹಾಲಕ್ಷ್ಮಿ ವಂದಿಸಿದರು.