

ಬೆಳ್ತಂಗಡಿ: ಮಾರ್ಚ್ ತಿಂಗಳಲ್ಲಿ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ಹಲವು ಕಾಲೇಜುಗಳಲ್ಲಿ ಉತ್ತಮ ಫಲಿತಾಂಶ ಬಂದಿದ್ದು, ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ ತಾಲೂಕಿನ ಮೂರೂ ಪ್ರಥಮ ಸ್ಥಾನಗಳು ಉಜಿರೆಯ ಎಸ್‌ಡಿಎಂ ಪದವಿಪೂರ್ವ ಕಾಲೇಜಿನ ಪಾಲಾಗಿದೆ. ವಾಣಿಜ್ಯ ವಿಭಾಗದಲ್ಲಿ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜು ಮತ್ತು ಬೆಳ್ತಂಗಡಿಯ ವಾಣಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಾನ ಅಂಕ (593) ಗಳಿಸಿರುವುದರಿಂದ ಈ ಎರಡೂ ಕಾಲೇಜುಗಳು ಎಸ್‌ಡಿಎಂ ಜತೆ ಪ್ರಥಮ ಸ್ಥಾನ ಹಂಚಿಕೊಂಡಿವೆ.
ಉಜಿರೆ ಎಸ್‌ಡಿಎಂ ಪ.ಪೂ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ತುಷಾರ ಬಿ.ಎಸ್. 595 ಅಂಕ ಗಳಿಸಿ ರಾಜ್ಯಕ್ಕೆ 5ನೇ ರ್‍ಯಾಂಕ್ ಪಡೆದು, ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಗುರುವಾಯನಕೆರೆಯ ಎಕ್ಸೆಲ್ ವಿದ್ಯಾಸಂಸ್ಥೆಯ ವಿಜ್ಞಾನ ವಿಭಾಗದಲ್ಲಿ 594 ಅಂಕಗಳನ್ನು ಪಡೆದುಕೊಂಡ ಪ್ರತೀಕ್ಷಾ ಎಸ್ ರಾಜ್ಯಕ್ಕೆ ೬ನೇ ಸ್ಥಾನ ಗಳಿಸಿದ್ದು, ವಿಜ್ಞಾನದಲ್ಲಿ 592 ಅಂಕ ಪಡೆದ ಕೃಪಾ ಸಾಂಚಿ ಮೌರ್ಯ ರಾಜ್ಯಕ್ಕೆ ೮ನೇ ಸ್ಥಾನ ಪಡೆದಿದ್ದಾರೆ. ಇದೇ ವಿಭಾಗದಲ್ಲಿ 591 ಅಂಕ ಪಡೆದ ಹೇಮಂತ್ ಎಸ್ ಜೆ ರಾಜ್ಯಕ್ಕೆ 9ನೇ ಸ್ಥಾನ ಪಡೆದಿದ್ದಾರೆ. ವಾಣಿ ಪದವಿಪೂರ್ವ ಕಾಲೇಜಿನ ವಿಭಾ ಕೆ.ಆರ್ ೫೮೫ ಅಂಕ ಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿ ಆರ್ಯ ದಿನೇಶ್ 593, ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನ ಜೋಶನ್ ರಫೇಲ್ ಡಿಸೋಜಾ 593 ಮತ್ತು ವಾಣಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಿಂಚನ 593 ಅಂಕ ಗಳಿಸಿ ತಾಲೂಕಿನಲ್ಲಿ ಪ್ರಥಮ ಸ್ಥಾನಿಗಳಾಗಿದ್ದಾರೆ. ರಾಜ್ಯ ಮಟ್ಟದಲ್ಲಿ ಈ ಮೂವರೂ 7ನೇ ಸ್ಥಾನ ಗಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಕಲಾ ವಿಭಾಗದಲ್ಲಿ ಶ್ರೇಯಾ ಎಚ್.ಎ. ೫೮೯ ಅಂಕದೊಂದಿಗೆ ರಾಜ್ಯಕ್ಕೆ 9ನೇ ರ್‍ಯಾಂಕ್ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಕೊಕ್ರಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ರಶ್ಮಿ 587 ಅಂಕ ಪಡೆದು ತಾಲೂಕಿನ ದ್ವಿತೀಯ ಸ್ಥಾನಿಯಾಗಿದ್ದಾರೆ. ಸರ್ಕಾರಿ ಪ.ಪೂ ಕಾಲೇಜು ಪುಂಜಾಲಕಟ್ಟೆಯ ಲತಾಶ್ರೀ ೫೭೨, ಮುಂಡಾಜೆ ಪದವಿಪೂರ್ವ ಕಾಲೇಜಿನ ಕೆಎನ್ ಧನುಷ್ ೫೭೦, ವಾಣಿ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಶುಭ ೫೬೯ ಅಂಕ ಪಡೆದು ಗಮನಸೆಳೆದಿದ್ದಾರೆ.
ವಿದ್ಯಾರ್ಥಿಗಳ ಪರಿಚಯ : ತುಷಾರ : ೫೯೫ ಅಂಕ ಗಳಿಸಿದ ಉಜಿರೆ ಎಸ್ಡಿಎಂ ವಿದ್ಯಾರ್ಥಿನಿ ತುಷಾರ ರಸಾಯನ ಶಾಸ್ತ್ರ, ಭೌತಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರದಲ್ಲಿ ತಲಾ ೧೦೦ ಅಂಕ ಪಡೆದಿದ್ದಾರೆ. ಕನ್ನಡದಲ್ಲಿ 99 ಮತ್ತು ಇಂಗ್ಲಿಷ್‌ನಲ್ಲಿ 96 ಅಂಕ ಗಳಿಸಿದ್ದಾರೆ. ತಾಲೂಕಿನ ಶಿಕ್ಷಣ ಇಲಾಖೆಯಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿರುವ ವಾರಿಜಾ ಪಿ ಮತ್ತು ಉಜಿರೆ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯ ಸೋಮಶೇಖರ ಬಿಎಸ್ ಅವರ ಪುತ್ರಿಯಾಗಿರುವ ತುಷಾರ, ಉಜಿರೆ ಗ್ರಾಮದ ಮಾಚಾರಿನ ಬಾಜಿಮಾರು ಎಂಬಲ್ಲಿನ ನಿವಾಸಿ. ಮುಂದೆ ಎಂಜಿನಿಯರಿಂಗ್ ಅಥವಾ ಎಗ್ರಿಕಲ್ಚರ್ ಬಿಎಸ್ಸಿ ಮಾಡಬೇಕೆಂಬ ಉzಶ ಹೊಂದಿದ್ದಾರೆ.
ಆರ್ಯ ದಿನೇಶ್: ವಾಣಿಜ್ಯ ವಿಭಾಗದ ಆರ್ಯ ದಿನೇಶ್ ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿ ದಿನೇಶ್ ಕೆಆರ್ ಮತ್ತು ಶಿಕ್ಷಕಿ ಆರತಿ ದಂಪತಿಯ ಪುತ್ರ. ಎಕನಾಮಿಕ್ಸ್‌ನಲ್ಲಿ 100, ಬಿಸ್ನೆಸ್ ಸ್ಟಡೀಸ್‌ನಲ್ಲಿ 98, ಅಕೌಂಟೆನ್ಸಿ 99, ಸ್ಟಾಟಿಸ್ಟಿಕ್ಸ್ 100, ಕನ್ನಡ 99, ಇಂಗ್ಲಿಷ್‌ನಲ್ಲಿ 97 ಅಂಕ ಪಡೆದಿದ್ದಾರೆ. ಮುಂದೆ ಚಾರ್ಟೆಡ್ ಅಕೌಂಟೆಂಟ್ ಆಗುವ ಆಕಾಂಕ್ಷೆ ಹೊಂದಿದ್ದಾರೆ.
ಶ್ರೇಯಾ ಎಚ್.ಎ : ಕಲಾ ವಿಭಾಗದ ವಿದ್ಯಾರ್ಥಿನಿ ಶ್ರೇಯಾ ಎಚ್.ಎ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಅಂಬಿಕಾನಾಥ್ ಎಚ್.ಎಸ್. ಮತ್ತು ರಮಾಮಣಿ ದಂಪತಿ ಪುತ್ರಿಯಾಗಿದ್ದು, ಎಕನಾಮಿಕ್ಸ್ ಮತ್ತು ಸಂಸ್ಕೃತದಲ್ಲಿ 100, ಪೊಲಿಟಿಕಲ್ ಸೈನ್ಸ್ 99, ಹಿಸ್ಟರಿ 98, ಇಂಗ್ಲಿಷ್ ಮತ್ತು ಸೈಕಾಲಜಿಯಲ್ಲಿ ತಲಾ 96 ಅಂಕ ಪಡೆದಿದ್ದಾರೆ. ಅರ್ಥಶಾಸ್ತ್ರದಲ್ಲಿ ಬಿಎ ಮಾಡಬೇಕೆಂಬ ಉದ್ದೇಶ ಹೊಂದಿದ್ದಾರೆ.
ಜೋಶನ್ ರಫಾಯಲ್: ಸೇಕ್ರೆಡ್ ಹಾರ್ಟ್ ಕಾಲೇಜಿನ ಜೋಶನ್ ರಫಾಯಲ್ ಡಿಸೋಜಾ ಅವರು ಬೆಳ್ತಂಗಡಿ ಕೆಥೋಲಿಕ್ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿಯ ಅಳದಂಗಡಿ ಶಾಖಾ ವ್ಯವಸ್ಥಾಪಕ ಜೆರೋಮ್ ಡಿಸೋಜಾ ಮತ್ತು ಸೂಳೆಬೆಟ್ಟು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ರೀಟಾ ರೊಡ್ರಿಗಸ್ ದಂಪತಿಯ ಪುತ್ರ.
ಕೂಲಿ ಕಾರ್ಮಿಕನ ಮಗಳು ಸಿಂಚನ ತಾಲೂಕಿಗೇ ಪ್ರಥಮ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ತಾಲೂಕಿಗೇ ಪ್ರಥಮ ಸ್ಥಾನಿಯಾದ ಸಿಂಚನ ಸುಲ್ಕೇರಿಯ ಕೂಲಿ ಕಾರ್ಮಿಕ ರವಿ ಶೆಟ್ಟಿ ಅವರ ಪುತ್ರಿ. ತಾಯಿ ಶುಭವತಿ ಗೃಹಿಣಿಯಾಗಿದ್ದಾರೆ. ಕೃಷಿ ತೋಟಗಳಲ್ಲಿ ದಿನಗೂಲಿ ಮಾಡುತ್ತಾ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿರುವ ರವಿ ಶೆಟ್ಟಿ, ಪುತ್ರ ಸುವಿತ್ ಶೆಟ್ಟಿಯವರಿಗೆ ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿ ಓದಿಸುತ್ತಿದ್ದಾರೆ. ದ.ಕ. ಜಿಲ್ಲೆಗೆ 6ನೇ ಸ್ಥಾನಿಯಾಗಿ, 593 ಅಂಕ ಗಳಿಸಿದ ಸಿಂಚನ, ಕನ್ನಡ, ಬಿಸ್ನೆಸ್ ಸ್ಟಡೀಸ್, ಎಕನಾಮಿಕ್ಸ್ ಮತ್ತು ಸ್ಟಾಟಿಸ್ಟಿಕ್ಸ್‌ನಲ್ಲಿ ತಲಾ ೧೦೦ ಅಂಕ ಪಡೆದಿದ್ದಾರೆ. ಅಕೌಂಟ್ಸ್ 97 ಮತ್ತು ಇಂಗ್ಲಿಷ್‌ನಲ್ಲಿ 96 ಅಂಕ ಗಳಿಸಿದ್ದಾರೆ.