ಉಜಿರೆ ರತ್ನಮಾನಸ ಜೀವನ ಶಿಕ್ಷಣ ನಿಲಯದಲ್ಲಿ ಬೇಸಿಗೆ ಶಿಬಿರ “ಕಲಾಬ್ಧಿ -2025” ಉದ್ಘಾಟನೆ

0

ಉಜಿರೆ: ಸಾಂಪ್ರದಾಯಿಕ ಶಿಕ್ಷಣದ ಜತೆಗೆ ಜೀವನ ಶಿಕ್ಷಣ ನೀಡುತ್ತಿರುವ ರತ್ನಮಾನಸ  ಪರಿಣಾಮಕಾರಿ, ಪ್ರಯೋಜನಕಾರಿ ಚಟುವಟಿಕೆಗಳ ಮೂಲಕ ರಾಷ್ಟ್ರಕ್ಕೆ ಮಾದರಿ ವಿದ್ಯಾರ್ಥಿ ನಿಲಯವಾಗಿ ಹೆಸರು ಪಡೆದಿದೆ.

ಸಂಪೂರ್ಣ ವ್ಯಕ್ತಿತ್ವ ವಿಕಸನ, ಬೌದ್ಧಿಕ, ಭೌತಿಕ ಹಾಗು ಭಾವನಾತ್ಮಕ ಬೆಳವಣಿಗೆಯ ಜತೆಗೆ ಸುಪ್ತ ಪ್ರತಿಭೆಯ ಬೆಳವಣಿಗೆಯೊಂದಿಗೆ ಪರಿಪೂರ್ಣ ಶಿಕ್ಷಣ ನೀಡಿ ಸಮಾಜಕ್ಕೆ ಶ್ರೇಷ್ಠ ವ್ಯಕ್ತಿಗಳನ್ನು ರತ್ನಮಾನಸ ನೀಡುತ್ತಿದೆ. 

ಶಿಸ್ತು, ಸೌಹಾರ್ದಯುತ ಶಿಕ್ಷಣ, ಸುಪ್ತ ಪ್ರತಿಭೆಯ ಪ್ರಕಾಶಕ್ಕೆ ಎಲ್ಲ ಅವಕಾಶ ದೊರೆಯುತ್ತಿದೆ. ಮಕ್ಕಳು ಆಸಕ್ತಿಯಿಂದ ಭಾಗವಹಿಸಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದು ಉಜಿರೆ ಎಸ್. ಡಿ. ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸತೀಶ್ಚಂದ್ರ ಎಸ್. ನುಡಿದರು.

ಅವರು ಏ. 4ರಂದು ಉಜಿರೆ  ಎಸ್. ಡಿ. ಎಂ ಶಿಕ್ಷಣ ಸಂಸ್ಥೆಯ ರತ್ನಮಾನಸ ಜೀವನ ಶಿಕ್ಷಣ ವಿದ್ಯಾರ್ಥಿ ನಿಲಯದಲ್ಲಿ 7 ದಿನಗಳ ಬೇಸಿಗೆ ಶಿಬಿರ “ಕಲಾಬ್ಧಿ -2025″ನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದ ಬೇರೆ ಬೇರೆ ಕಡೆಯ ಆರ್ಥಿಕವಾಗಿ ಹಿಂದುಳಿದ, ಬಡ ವಿದ್ಯಾರ್ಥಿಗಳಿಗೆ ಸೆಕೆಂಡರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿಕೆಯ ಜತೆಗೆ ಜೀವನ ಶಿಕ್ಷಣ ನೀಡುತ್ತಿರುವ ರತ್ನಮಾನಸದ ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಗೌರವಯುತ ಸ್ಥಾನವಿದೆ. ಅವರು ಮುಂದೆ ಯಶಸ್ವೀ ಜೀವನ ನಡೆಸಿದ ಅನೇಕ ನಿದರ್ಶನಗಳಿವೆ. ಶಿಕ್ಷಣದ ಜತೆಗೆ ಯೋಗ, ಕ್ರೀಡೆ, ಡೇರಿ, ಕೃಷಿ, ಲೆಕ್ಕ ನಿರ್ವಹಣೆ ಹೀಗೆ ಎಲ್ಲ ಬಗೆಯ ಜೀವನ ಶಿಕ್ಷಣವನ್ನು ಕಲಿಯುವುದರ ಜತೆಗೆ ಪರಸ್ಪರ ಸಹಕಾರ, ಬ್ರಾತೃತ್ವ, ಬಾಂಧವ್ಯ ಕಲಿಕೆಗೂ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಹೆತ್ತವರು ಮಕ್ಕಳಿಗೆ ಅಸ್ತಿ, ಪಾಸ್ತಿ ಮಾಡಿಡುವ ಬದಲು ಮಕ್ಕಳನ್ನೇ ಕುಟುಂಬ, ಸಮಾಜ, ದೇಶಕ್ಕೆ  ಆಸ್ತಿಯನ್ನಾಗಿ ಬೆಳೆಸಬೇಕು ಎಂದು  ನುಡಿದರು.

ಸಮಾರಂಭದ ಮುಖ್ಯ ಅತಿಥಿ ಪತ್ರಕರ್ತ ಮನೋಹರ ಬಳಂಜ ಮಾತನಾಡಿ ರತ್ನಮಾನಸದಲ್ಲಿ ಉಚಿತ ಶಿಕ್ಷಣಕ್ಕೆ ಅವಕಾಶ ಪಡೆದ ವಿದ್ಯಾರ್ಥಿಗಳ ಪೂರ್ವಜನ್ಮದ ಪುಣ್ಯಫಲ.ಅದು ನಿಮ್ಮೆಲ್ಲರ ಸೌಭಾಗ್ಯ. ಕಲೆಯ ಆಸಕ್ತಿಯಿದ್ದರೆ ಶಿಕ್ಷಣ ಬೆಳೆಯುತ್ತದೆ. ಶಿಬಿರದಲ್ಲಿ ಮುಕ್ತವಾಗಿ ಭಾಗವಹಿಸಿ, ಪೂರ್ಣವಾಗಿ ತೊಡಗಿಸಿಕೊಂಡು ಅದರ ಮೌಲ್ಯವನ್ನು ಅನುಭವಿಸಿ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ನುಡಿದು ಶುಭ ಹಾರೈಸಿದರು. 

ಅಧ್ಯಕ್ಷತೆ ವಹಿಸಿದ್ದ ರತ್ನಮಾನಸದ ಪಾಲಕ ಯತೀಶ್ ಕುಮಾರ ಬಳಂಜ ನಿಲಯದ ವಿದ್ಯಾರ್ಥಿಗಳು ಭಾಗ್ಯವಂತರು. ಶಿಬಿರದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡು ಸಾರ್ಥಕಪಡಿಸಿಕೊಳ್ಳಿ ಎಂದು  ಶುಭ ಕೋರಿದರು.  ಶಿಬಿರದ ಸಂಯೋಜಕ ವಿನ್ಯಾಸ್ ಭಂಡಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿ ನಿತೀಶ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಹಪಾಲಕ ರವಿಚಂದ್ರ ಸ್ವಾಗತಿಸಿ, ಸಮ್ಯಕ್ ವಂದಿಸಿದರು.

ಏ. 11ರವರೆಗೆ ನಡಯಲಿರುವ ಬೇಸಿಗೆ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಯಶವಂತ ಬೆಳ್ತಂಗಡಿ, ಸುನಿಲ್ ಕಲ್ಕೊಪ್ಪ ಮತ್ತು ಮದನ್ ಎಂ. ಅವರಿಂದ  ಭಜನೆಯಲ್ಲಿ  ಅಳವಡಿಸಬೇಕಾದ ಶಿಸ್ತುಕ್ರಮಗಳು ಮತ್ತು ತರಬೇತಿ, ನಾಟಕ ಸಂಯೋಜನೆ/ಪ್ರಾತ್ಯಕ್ಷಿಕೆ, ಅರೆ ಶಾಸ್ತ್ರೀಯ ನೃತ್ಯ ಅಭ್ಯಾಸಗಳು, ವಿದ್ಯಾರ್ಥಿಗಳಲ್ಲಿ ಕೌಶಲ್ಯ ಅಭಿವೃದ್ಧಿ, ಜಾನಪದ ನೃತ್ಯ ಮಾಹಿತಿ  ಹಾಗು ಅಭ್ಯಾಸ, ರಂಗಗೀತೆಯ ಅಭ್ಯಾಸ, ಸಂಸ್ಕಾರ-ಸಂಸ್ಕೃತಿ ಪರಿಚಯ, ಧರ್ಮಸ್ಥಳ ಸಂಸ್ಥೆಗಳ ಸಾಧನೆಗಳು, ಜೀವನ  ಮೌಲ್ಯಗಳು, ನಾಟಕ ಸಂಯೋಜನೆ, ಮಂಕುತಿಮ್ಮನ ಕಗ್ಗದಲ್ಲಿ ವಿದ್ಯಾರ್ಥಿ ಮೌಲ್ಯಗಳು, ಜಾನಪದ ನೃತ್ಯ ಅಭ್ಯಾಸ, ಭಜನೆಯ ಅಭ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ಇತ್ಯಾದಿ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. 

LEAVE A REPLY

Please enter your comment!
Please enter your name here