

ಬೆಳ್ತಂಗಡಿ: ವರದಕ್ಷಿಣೆ ತರುವಂತೆ ಪೀಡಿಸಿ ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ ಆರೋಪದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಕಿಶೋರ್ ಪಿ. ವಿರುದ್ಧ ಬೆಂಗಳೂರು ನಗರದ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಬೆಂಗಳೂರು ನಗರದ ನಾಗರಬಾವಿ ಸರ್ಕಲ್ನ ಟೀಚರ್ಸ್ ಕಾಲೋನಿಯ ಮಾನಸ ನಗರದ ೨ನೇ ಅಡ್ಡ ರಸ್ತೆಯ ನಿವಾಸಿಯಾಗಿರುವ 27 ವರ್ಷದ ಯುವತಿ ಬೆಂಗಳೂರಿನ ಚಂದ್ರ ಲೇಔಟ್ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಕಿಶೋರ್ ವಿರುದ್ಧ ವರದಕ್ಷಿಣೆ ಕಿರುಕುಳ ತಡೆ ಕಾಯ್ದೆ 1961 ಮತ್ತು ಭಾರತೀಯ ನ್ಯಾಯ ಸಂಹಿತೆ 2003ರ ಸೆಕ್ಷನ್ 109, 115(2), 118(1), 3(5), 351(3), 352 ಮತ್ತು 85ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೇಸು ದಾಖಲಾದ ಬಳಿಕ ಧರ್ಮಸ್ಥಳದಿಂದ ಬೆಂಗಳೂರಿಗೆ ತೆರಳಿರುವ ಎಸ್.ಐ. ಕಿಶೋರ್ ಅವರು ಸಂಪರ್ಕಕ್ಕೆ ಲಭ್ಯರಾಗಿಲ್ಲ.
ಪ್ರಕರಣ ದಾಖಲು: ತಂದೆ ತಾಯಿಗೆ ಏಕೈಕ ಪುತ್ರಿಯಾಗಿರುವ 27 ವರ್ಷ ಪ್ರಾಯದ ಸಂತ್ರಸ್ತ ಯುವತಿಗೆ ಸಹೋದರ, ಸಹೋದರಿ ಯಾರೂ ಇಲ್ಲ. ಮಹಿಳೆಯ ತಂದೆ ವ್ಯಾಪಾರಸ್ಥರಾಗಿದ್ದಾರೆ. ತಾಯಿ ಗೃಹಿಣಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ವಾಸವಾಗಿರುವ ಸರಸ್ವತಮ್ಮ ಮತ್ತು ಪುಟ್ಟ ಚನ್ನಪ್ಪ ಅವರ ಮಗನಾದ ಮೂಡಿಗೆರೆಯಲ್ಲಿ ಸಬ್ಇನ್ಸ್ಪೆಕ್ಟರ್ ಆಗಿದ್ದ ಕಿಶೋರ್ ಪಿ. ಅವರೊಂದಿಗೆ ಯುವತಿ ವಿವಾಹವಾಗಿದ್ದಾರೆ. ವಿವಾಹವಾದ ಬಳಿಕ ಪ್ರಸ್ತುತ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎಸ್ಐ ಆಗಿರುವ ಕಿಶೋರ್ ಅವರು ತನ್ನ ಪತ್ನಿಗೆ ವರದಕ್ಷಿಣೆ ಕಿರುಕುಳ ಕೊಟ್ಟು ಅವಾಚ್ಯ ಶಬ್ಧಗಳಿಂದ ನಿಂದಿಸಿ ದೈಹಿಕವಾಗಿ ಹಲ್ಲೆ ಮಾಡಿ ಮಾನಸಿಕವಾಗಿ ಹಿಂಸಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಬ್ರೋಕರ್ ಮೂಲಕ ಎಸ್.ಐ. ಕಿಶೋರ್ ಪರಿಚಯ-ಯುವತಿ ನೀಡಿದ ದೂರಿನಲ್ಲಿ ವಿವರ: ತನ್ನ ಮನೆಯವರಿಗೆ ಮದುವೆಯ ಬ್ರೋಕರ್ ನಾಗರಾಜು ಅವರ ಮೂಲಕ ಕಿಶೋರ್ ಅವರ ಪರಿಚಯ ಆಗಿತ್ತು. 24-11-2023ರಂದು ಸಂಜೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿರುವ ಸಿ.ಕೆ. ಪ್ಯಾಲೇಸ್ನಲ್ಲಿ ಕಿಶೋರ್ ಪಿ. ಅವರೊಂದಿಗೆ ನನಗೆ ವಿವಾಹ ನಿಶ್ಚಿತಾರ್ಥವಾಗಿತ್ತು. ನನ್ನ ಮನೆಯವರು ಸ್ವಂತ ಖರ್ಚಿನಿಂದ ನಿಶ್ಚಿತಾರ್ಥ ಮಾಡಿದ್ದರು. ಈ ವೇಳೆ ಕಿಶೋರ್ಗೆ 18 ಗ್ರಾಂ ತೂಕವಿರುವ ಚಿನ್ನದ ಉಂಗುರ ನೀಡಲಾಗಿತ್ತು. ನಿಶ್ಚಿತಾರ್ಥದ ನಂತರ ಕಿಶೋರ್ ಮತ್ತು ಅವರ ತಮ್ಮ ಚಂದನ್ ಪಿ. ಅವರು ನಮ್ಮ ಮನೆಗೆ ಬರುತ್ತಿದ್ದರು. ಒಂದು ದಿನ ಕಿಶೋರ್ರವರು ಪೊಲೀಸ್ ಡ್ರೆಸ್ನಲ್ಲಿ ಮನೆಗೆ ಬಂದಿದ್ದರು. ಕಿಶೋರ್ ಅವರು ಈ ವೇಳೆ ತನಗೆ ಕಾರು ಕೊಡಿಸುವಂತೆ ಕೇಳಿದ್ದರು. ನಂತರ ರಾಜಾಜಿನಗರದ ಡಾ. ರಾಜ್ ಕುಮಾರ್ ರಸ್ತೆಯಲ್ಲಿರುವ ಬ್ಲೂ ಹೂಂಡೈ ಶೋರೂಮ್ನಿಂದ ಇಪ್ಪತ್ತಮೂರು ಲಕ್ಷದ ಅರವತ್ತು ಸಾವಿರ ರೂ ಮೌಲ್ಯದ ಕಾರು ಕೊಡಿಸಲಾಗಿತ್ತು. ಕಿಶೋರ್ ಅವರು ಸರ್ಕಾರಿ ನೌಕರಿಯಲ್ಲಿರುವುದರಿಂದ ಬೃಹತ್ ಮೊತ್ತದ ಹಣದ ಕಾರನ್ನು ತೆಗೆದುಕೊಂಡರೆ ತೊಂದರೆಯಾಗುತ್ತದೆ ಎಂದು ಹೇಳಿದ್ದರಿಂದ ನನ್ನ ತಂದೆಯವರ ಹೆಸರಿಗೆ ಕಾರನ್ನು ಒಂದೇ ಕಂತಿನಲ್ಲಿ ಹಣವನ್ನು ಕಟ್ಟಿ ಖರೀದಿಸಲಾಗಿತ್ತು. ನಂತರ ಕಿಶೋರ್ ಈ ಕಾರನ್ನು ಉಪಯೋಗಿಸುತ್ತಿದ್ದಾರೆ.
ಈ ಮಧ್ಯೆ 20-02-2024ರಂದು ಸಂಜೆ ಆರತಕ್ಷತೆ ಹಾಗೂ 21-02-2024ರಂದು ಬೆಂಗಳೂರಿನ ಎಂ.ವಿ.ಎಂ ಕನ್ವೆಷನಲ್ ಹಾಲ್ನಲ್ಲಿ ನಮ್ಮ ವಿವಾಹವಾಗಿತ್ತು. ನನ್ನ ತಂದೆ ಈ ಹಿಂದೆ ಮಾತನಾಡಿದಂತೆ ಕಿಶೋರ್ ಅವರಿಗೆ ಹತ್ತು ಲಕ್ಷ ರೂ ನೀಡಿದ್ದಾರೆ. ನಂತರ ಕಿಶೋರ್ಗೆ ಒಂದು ಬ್ರಾಸ್ಲೈಟ್ ಮತ್ತು ಒಂದು ಕೊರಳಿನ ಚೈನ್, ಅಂದಾಜು 130ರಿಂದ 135 ಗ್ರಾಂ ತೂಕದ ಒಡವೆಗಳನ್ನು ಮದುವೆಯ ಸಮಯದಲ್ಲಿ ಕೊಟ್ಟಿದ್ದಾರೆ. ಮದುವೆ ಸಮಯದಲ್ಲಿ ನನಗೆ ಸುಮಾರು 850 ಗ್ರಾಂ ತೂಕದ ವಿವಿಧ ಬಗೆಯ ಚಿನ್ನದ ಆಭರಣಗಳನ್ನು ನೀಡಲಾಗಿತ್ತು. ಸುಮಾರು ೩ ಕೆಜಿಗೂ ಹೆಚ್ಚಿನ ತೂಕದ ಬೆಳ್ಳಿಯ ವಸ್ತುಗಳನ್ನು ಕೊಟ್ಟಿದ್ದಾರೆ. 50ರಿಂದ 60 ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಲಾಗಿತ್ತು. ಮದುವೆಯಾಗುವ ಸಂದರ್ಭದಲ್ಲಿ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಕಿಶೋರ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಕಿಶೋರ್ ಮತ್ತು ನಾನು ಅನೋನ್ಯವಾಗಿದ್ದೆವು ಎಂದು ಕಿಶೋರ್ ಅವರ ಪತ್ನಿ ದೂರಿನಲ್ಲಿ ವಿವರಿಸಿದ್ದಾರೆ.
ಲಂಚ ಕೊಡಲು ಹಣ ನೀಡಿದರು: ಮೂಡಿಗೆರೆ ಠಾಣೆಯಿಂದ ಬೇರೆ ಠಾಣೆಗೆ ವರ್ಗಾವಣೆ ಬಯಸಿದ್ದ ಪತಿ ಕಿಶೋರ್ ಅವರು ವರ್ಗಾವಣೆ ಆಗಲು 8ರಿಂದ 10 ಲಕ್ಷ ಲಂಚವನ್ನು ಎಸ್.ಪಿ. ಮತ್ತು ಮೇಲಾಧಿಕಾರಿಗಳಿಗೆ ಕೊಡಬೇಕು ಎಂದು ತಿಳಿಸಿದ್ದರು. ಅಲ್ಲದೆ ಹತ್ತು ಲಕ್ಷ ರೂ ತಂದೆಯಿಂದ ಕೊಡಿಸುವಂತೆ ಹೇಳಿದ್ದರು. ತಂದೆಯವರ ಬಳಿ ಈಗ ಅಷ್ಟು ಹಣ ಇಲ್ಲ. ಈಗಾಗಲೇ ಒಂದು ಕೋಟಿ ರೂ ಖರ್ಚು ಮಾಡಿದ್ದಾರೆ ಎಂದು ಹೇಳಿದ್ದೆ. ಈ ವೇಳೆ ಅವಾಚ್ಯವಾಗಿ ನಿಂದಿಸಿ ಬೆದರಿಸಿದ ಕಿಶೋರ್ ನನ್ನ ತಲೆಗೆ ಗನ್ ತಲೆಗೆ ಇಟ್ಟು ಸಾಯಿಸುತ್ತೇನೆ ಎಂದು ಹೆದರಿಸಿದ್ದರು. ನಂತರ ಕಿಶೋರ್ ಜತೆ ಸೇರಿ ಅತ್ತೆ, ಮಾವ ಮತ್ತು ಮೈದುನ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಕೊಡುತ್ತಿದ್ದರು. ಇದೇ ವೇಳೆ ಕಿಶೋರ್ಗೆ ಮೂಡಿಗೆರೆಯಿಂದ ಧರ್ಮಸ್ಥಳಕ್ಕೆ ಜುಲೈ ತಿಂಗಳಿನಲ್ಲಿ ವರ್ಗಾವಣೆಯಾಗಿದೆ. ನಂತರ ಧರ್ಮಸ್ಥಳದಲ್ಲಿ ಮನೆ ಮಾಡಲು ಅಡ್ವಾನ್ಸ್ ಹಣ ಬೇಕು ಮತ್ತು ಮನೆಗೆ ಪೀಠೋಪಕರಣಗಳನ್ನು ಕೊಳ್ಳಲು ಮತ್ತು ಮನೆಯ ಸಾಮಾಗ್ರಿಗಳನ್ನು ಕೊಳ್ಳಲು ತಂದೆ ತಾಯಿಯ ಹತ್ತಿರ ಹಣ ತೆಗೆದುಕೊಂಡು ಬಾ ಎಂದು ಪೀಡಿಸಿದ್ದರು. ಒಪ್ಪದೇ ಇದ್ದಾಗ ವರದಕ್ಷಿಣೆ ವಿಚಾರವಾಗಿ ಪ್ರತಿ ದಿವಸ ಹಿಂಸೆ ನೀಡಿದ್ದಾರೆ. ತನ್ನ ಮೊಬೈಲ್ ಕಸಿದುಕೊಂಡು ಹಿಂಸೆ ನೀಡಿದ್ದಾರೆ.
ಈ ವಿಚಾರ ಅಕ್ಕ ಪಕ್ಕದವರಿಗೆ ಗೊತ್ತಾಗಿ ಯಾರೋ ನನ್ನ ತಾಯಿಗೆ 22-03-2025ರಂದು ವಿಷಯ ತಿಳಿಸಿದ್ದರು. ಮಾಹಿತಿ ತಿಳಿದು ತಂದೆ ಮತ್ತು ತಾಯಿಯವರು ಮತ್ತು ನನ್ನ ದೊಡ್ಡಮ್ಮನವರ ಮಗ ಅಕ್ಷಯ ಗೌಡ ಹಾಗೂ ನನ್ನ ಚಿಕ್ಕಜ್ಜಿಯ ಮಗ ಚೇತನ್ ಕುಮಾರ್ 23-03-2025ರಂದು ಮಧ್ಯಾಹ್ನ 12.30ಕ್ಕೆ ಧರ್ಮಸ್ಥಳಕ್ಕೆ ಬಂದು ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಆ ಸಮಯದಲ್ಲಿ ಆರೋಗ್ಯ ತೀವ್ರ ಹದಗೆಟ್ಟಿದ್ದು ದೇಹದ ಹಲವಾರು ಭಾಗಗಳಿಗೆ ಗಾಯಗಳಾಗಿದೆ. ಉಸಿರಾಡಲು ತುಂಬಾ ತೊಂದರೆಯಾಗುತ್ತಿತ್ತು. ಆಗ ನಮ್ಮ ತಂದೆ ತಾಯಿಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ರೀತಿ ವರದಕ್ಷಿಣೆ ತರಲು ಒತ್ತಾಯಿಸಿ ಮಾನಸಿಕ ಮತ್ತು ದೈಹಿಕವಾಗಿ ಹಿಂಸಿಸಿ ನನ್ನನ್ನು ಕೊಲ್ಲಲು ಪ್ರಯತ್ನಿಸಿರುವ ಪತಿ ಕಿಶೋರ್ ಪಿ, ಮಾವ ಪುಟ್ಟ ಚನ್ನಪ್ಪ, ಅತ್ತೆ ಸರಸ್ವತಮ್ಮ ಹಾಗೂ ಮೈದುನ ಚಂದನ್ ಪಿ. ವಿರುದ್ಧ ಕ್ರಮ ಕೈಗೊಳ್ಳುವಂತೆ ಯುವತಿ ದೂರಿನಲ್ಲಿ ಒತ್ತಾಯಿಸಿದ್ದಾರೆ. ಅದರಂತೆ ಪ್ರಕರಣ ದಾಖಲಾಗಿದೆ.
ಧರ್ಮಸ್ಥಳ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ ಸಾಧ್ಯತೆ: ತನ್ನ ಪತ್ನಿಗೆ ವರದಕ್ಷಿಣೆ ತರುವಂತೆ ಪೀಡಿಸಿ ಮಾನಸಿಕ, ದೈಹಿಕ ಹಿಂಸೆ ನೀಡಿ ಬೆದರಿಸಿ ಕೊಲೆಗೆ ಯತ್ನಿಸಿದ ಆರೋಪದಡಿ ಎಸ್ಐ ಕಿಶೋರ್ ಪಿ ವಿರುದ್ಧ ಸದ್ಯ ಬೆಂಗಳೂರಿನ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಕಿಶೋರ್ ತನ್ನ ಪತ್ನಿ ಮೇಲೆ ನಡೆದಿರುವ ದೌರ್ಜನ್ಯದ ಬಹುತೇಕ ಕೃತ್ಯಗಳು ಧರ್ಮಸ್ಥಳದಲ್ಲಿರುವ ಅವರ ಬಾಡಿಗೆ ಮನೆಯಲ್ಲಿ ನಡೆದಿರುವುದರಿಂದ ಈ ಪ್ರಕರಣ ಚಂದ್ರ ಲೇಔಟ್ ಪೊಲೀಸ್ ಠಾಣೆಯಿಂದ ಧರ್ಮಸ್ಥಳ ಪೊಲೀಸ್ ಠಾಣೆಗೆ ವರ್ಗಾವಣೆ ಆಗುವ ಸಾಧ್ಯತೆಗಳಿದೆ ಎಂದು ಮಾಹಿತಿ ಲಭ್ಯವಾಗಿದೆ.