ಉಜಿರೆ: ಫೆ. 26ರಂದು ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಮನೆ ಮನೆ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು. ತಿರುಮಲೇಶ ಭಟ್ ಇವರ ನೇತೃತ್ವದಲ್ಲಿ ಶಿವರಾತ್ರಿಯ ಅಂಗವಾಗಿ ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ತು ಮನೆ ಮನೆ ಗಮಕದ 17ನೇಯ ಹೆಜ್ಜೆಯ ಕಾರ್ಯಕ್ರಮವನ್ನು ಇಲ್ಲಿ ಪ್ರಸ್ತುತಪಡಿಸಿತು.

ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯದಿಂದ ಆರಿಸಿಕೊಂಡ ವಿಶ್ವೇಶ್ವರ ಸಾಕ್ಷಾತ್ಕಾರ ಕಾವ್ಯ ಭಾಗವನ್ನು, ಗಮಕಿ ಕಾರ್ತಿಕ್ ತಾಮ್ಹಾನ್ಕರ್ ತಮ್ಮ ಕಂಠಸಿರಿಯಲ್ಲಿ ಸುಮಧುರವಾಗಿ ವಾಚಿಸಿದರು. ಎಸ್. ಡಿ. ಎಂ ಬೆಳಾಲು ಪ್ರೌಢ ಶಾಲೆಯ ನಿವೃತ್ತ ಮುಖ್ಯಶಿಕ್ಷಕರು, ವಾಗ್ಮಿಗಳು ಸಾಹಿತಿಗಳು ಆಗಿರುವ ರಾಮಕೃಷ್ಣ ಭಟ್ ಚೊಕ್ಕಾಡಿ ಶಿವರಾತ್ರಿಯ ಮಹಿಮೆಯೊಂದಿಗೆ ವರ್ತಮಾನದ ಸಮಸ್ಯೆಗಳನ್ನು ಸೇರಿಸಿಕೊಂಡು ಮನಮುಟ್ಟುವಂತೆ ವ್ಯಾಖ್ಯಾನವನ್ನು ನೀಡಿದರು.
ಕಾರ್ಯಕ್ರಮವನ್ನು ಸಂಯೋಜಿಸಿದ ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ರಾಮಕೃಷ್ಣ ಭಟ್ ಉಜಿರೆ ನಿರೂಪಿಸಿದರು. ಹಿರಿಯ ಯಕ್ಷಗಾನ ಅರ್ಥದಾರಿಗಳಾದ ಸುರೇಶ್ ಕುದ್ರೆಂತಾಯ, ವಾಸುದೇವ ಸಂಪಿಗೆತ್ತಾಯ, ಗಮಕ ಪರಿಷತ್ತಿನ ಕಾರ್ಯದರ್ಶಿ ಮೇಧಾ ಅಶೋಕ ಭಟ್, ಮತ್ತಿತರರು ಉಪಸ್ಥಿತರಿದ್ದರು. ತಿರುಮಲೇಶ ಭಟ್ ಎಲ್ಲರನ್ನು ಸ್ವಾಗತಿಸಿದರು. ರಮೇಶ್ ಮಯ್ಯ ಕಾರ್ಯಕ್ರಮದ ಕೊನೆಗೆ ವಂದನಾರ್ಪಣೆ ಸಲ್ಲಿಸಿದರು.