ಅಂಡಿಂಜೆ ಗ್ರಾಮದ ಕಲ್ಲತ್ತಿ ಪ್ರದೇಶದಲ್ಲಿ ಬೆಂಕಿ

0

ಬೆಳ್ತಂಗಡಿ: ಅಂಡಿಂಜೆ ಗ್ರಾಮದ ಕಲ್ಲತ್ತಿ ಪ್ರದೇಶದಲ್ಲಿ ಕಾಡ್ತಿಚ್ಚು ಹರಡಿಕೊಂಡಿದ್ದು, ಕಳೆದ 3 ದಿನಗಳಿಂದ ಹರಸಾಹಸ ಪಡುತ್ತಿದ್ದರೂ ಗುಡ್ಡದ ಪೊದೆಗಳ ಮೂಲಕ ವೇಗವಾಗಿ ವ್ಯಾಪಿಸಿಕೊಳ್ಳುತ್ತಿರುವ ಬೆಂಕಿ ನಂದಿಸಲು ಅಗ್ನಿಶಾಮಕ ದಳ ಮತ್ತು ಊರವರು ವಿಫಲರಾಗಿರುವ ಕಾರಣ ಬೆಂಕಿ ಇನ್ನಷ್ಟು ಪ್ರದೇಶಗಳಿಗೆ ವ್ಯಾಪಿಸಿಕೊಳ್ಳುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ.

ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಗ್ರಾಮದ ಕಲ್ಲೆತ್ತಿ ಪ್ರದೇಶದ ಕಾಡು ಮತ್ತು ಸರಕಾರಿ ಗೇರು ತೋಟದ ನೂರಾರು ಹೂ, ಕಾಯಿ ಬಿಟ್ಟ ಗೇರು ಮರಗಳು ಬೆಂಕಿಗಾಹುತಿಯಾಗಿದ್ದು ಗೇರು ಕರ್ನಾಟಕ ಅಭಿವೃದ್ಧಿ ನಿಗಮಕ್ಕೆ ಅಪಾರ ನಷ್ಟ ಉಂಟಾಗಿದೆ. ಗೇರು ತೋಟದ ಸಮೀಪದಲ್ಲಿರುವ ಖಾಸಗಿ ರಬ್ಬರ್ ತೋಟಕ್ಕೂ ಬೆಂಕಿ ಹೊತ್ತಿಕೊಂಡಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಅಗ್ನಿಶಾಮಕ ವಾಹನವು ಗೇರುತೋಟದ ಒಳಗೆ ಸಂಚರಿಸಲು ಅನಾನುಕೂಲವಿದ್ದು ಇದೇ ಕಾರಣಕ್ಕಾಗಿ ಬೆಂಕಿ ನಂದಿಸುವ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕಾಡ್ಗಿಚ್ಚಿಗೆ ಆವೃತವಾದ ಗೇರು ತೋಟವು ಸುಮಾರು 70 ಎಕ್ರೆ ವ್ಯಾಪ್ತಿಯಲ್ಲಿದ್ದು ಇಲಾಖೆಯ ಗೇರು ನೆಡುತೋಪು ಬೆಂಕಿಗಾಹುತಿಯಾಗಿದೆ. ಅವಘಡದ ಪ್ರದೇಶಕ್ಕೆ ಗ್ರಾ. ಪಂ. ಅಧ್ಯಕ್ಷರು, ಸಿ.ಎ. ಬ್ಯಾಂಕ್ ಅಧ್ಯಕ್ಷರು, ಊರಿನ ಪ್ರಮುಖರು, ಜನ ಮಹಿಳೆಯರು ಧಾವಿಸಿ ಬೆಂಕಿ ನಂದಿಸುವ ಕಾರ್ಯಕ್ಕೆ ಕೆ.ಸಿ.ಡಿ.ಸಿ, ಅಗ್ನಿಶಾಮಕ ಅಧಿಕಾರಿಗಳ ಜೊತೆ ಕೈಜೋಡಿಸಿದ್ದಾರೆ.3 ದಿನಗಳಿಂದ ಶ್ರಮಪಡುತ್ತಿದ್ದರೂ ಗೇರು ನೆಡುತೋಪಿನ ವ್ಯಾಪ್ತಿಯ ಬಹುಭಾಗ ಕಾಡಾಗಿರುವುದರಿಂದ ಬೆಂಕಿ ವ್ಯಾಪಿಸಿಕೊಂಡ ಪ್ರದೇಶಕ್ಕೆ ತಲುಪಲು ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿಗೆ ಕಷ್ಟವಾಗಿದ್ದು ಇದೀಗ ಇನ್ನಷ್ಟು ಪೈಪ್ ಜೋಡಿಸಿ ನೀರು ಸರಬರಾಜು ಮಾಡಿ ಬೆಂಕಿ ನಂದಿಸುವ ಕಾರ್ಯಾಚರಣೆಗೆ ಪ್ರಯತ್ನ ಮುಂದುವರಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here