ಉಜಿರೆ: ಅನುಭವ, ಛಲ, ಸತತ ಪ್ರಯತ್ನಗಳ ಮೂಲಕ ಗುರಿಯನ್ನು ಸಾಧಿಸಬಹುದು. ಅವಮಾನ, ಅನುಮಾನ, ಸಮ್ಮಾನಗಳಿಲ್ಲದೆ ಸಾಧನೆ ಸಾಧ್ಯವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ರಾಜಶ್ರೀ ಎಸ್. ಹೆಗ್ಡೆ ಹೇಳಿದರು.
ಎಸ್.ಡಿ.ಎಂ. ಬಿ.ಎಡ್. ಕಾಲೇಜು, ಡಿ.ಎಡ್. (ಡಿ.ಇಎಲ್.ಇಡಿ.) ಕಾಲೇಜು ಹಾಗೂ ಮಹಿಳಾ ಐ.ಟಿ.ಐ. ಜಂಟಿಯಾಗಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮನಸ್ಸಿನ ಧೀಶಕ್ತಿಯನ್ನು ಎಂದಿಗೂ ತ್ಯಜಿಸಬಾರದು. ಒದಗಿ ಬರುವ ಅವಕಾಶಗಳನ್ನು ಕೈಬಿಡಬಾರದು. ಜೀವನದಲ್ಲಿ ಗುರಿ ಸ್ಪಷ್ಟವಿದ್ದು ಸರಿದಾರಿಯಲ್ಲಿ ಸಾಗಿದಾಗ ಬದುಕಿಗೆ ಅರ್ಥ ಬರುತ್ತದೆ. ಯಾವ ಕೆಲಸವನ್ನು ಮಾಡಿದರೂ ಅದಕ್ಕೆ ಪ್ರಯತ್ನ ಮತ್ತು ಆತ್ಮವಿಶ್ವಾಸ ಮುಖ್ಯ. ಆಗ ಮಾತ್ರ ಯಶಸ್ಸು ಲಭಿಸುತ್ತದೆ ಎಂದು ಅವರು ಸಲಹೆ ನೀಡಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅವರು, ಶಿಕ್ಷಣದಲ್ಲಿ ಭಾರತೀಯತೆಯನ್ನು ಮೈಗೂಡಿಸಿಕೊಳ್ಳಬೇಕು. ಆತ್ಮಪ್ರಜ್ಞೆ, ಅಂತಃಸತ್ವಗಳನ್ನು ರೂಢಿಸಿಕೊಳ್ಳಬೇಕು. ಜೊತೆಗೆ ಮಾನವೀಯತೆಯನ್ನು ರೂಢಿಸಿಕೊಂಡು ಬಾಳಿದರೆ ಗೌರವ ಸಿಗುತ್ತದೆ. ಗೌರವ ಹುಡುಕಿಕೊಂಡು ಬರುವ ರೀತಿಯಲ್ಲಿ ಬೆಳೆಯಬೇಕು ಎಂದು ಹೇಳಿದರು.

“ ಶಿಸ್ತಿನ ವ್ಯಾಸಂಗದೊಂದಿಗೆ ದೃಢತೆಯನ್ನು ಮೈಗೂಡಿಸಿಕೊಂಡು ಪ್ರಗತಿಪಥದತ್ತ ಸಾಗಬೇಕು. ದೃಢತೆಯ ಕಡೆಗೆ ಗುರಿಯನ್ನು ಇಟ್ಟುಕೊಂಡು ನಡೆದಾಗ ನಮ್ಮ ವಿದ್ಯಾಸಂಸ್ಥೆ ನೀಡಿದ ಶಿಕ್ಷಣ ಸಾರ್ಥಕವಾಗುತ್ತದೆ ” ಎಂದರು.
ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದ ಮೂರೂ ಕಾಲೇಜುಗಳ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ನಡೆಸಿದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಬಿ.ಎಡ್. ಕಾಲೇಜಿನ ಪ್ರಾಂಶುಪಾಲ ಸಂತೋಷ ಸಾಲ್ದಾನ, ಮಹಿಳಾ ಐ.ಟಿ.ಐ. ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಹಾಗೂ ಡಿ.ಎಡ್. ಕಾಲೇಜಿನ ಸಂಯೋಜಕಿ ಅನುಷಾ ಅವರು ತಮ್ಮ ತಮ್ಮ ಸಂಸ್ಥೆಯ ವಾರ್ಷಿಕ ವರದಿ ವಾಚಿಸಿದರು.
ವೇದಿಕೆಯಲ್ಲಿ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಧನ್ಯಕುಮಾರ್, ವಿದ್ಯಾರ್ಥಿ ನಾಯಕರಾದ ಕೀರ್ತನ್ ಕುಮಾರ್, ಫಾತಿಮಾ, ರಾಜಶ್ರೀ ಉಪಸ್ಥಿತರಿದ್ದರು.
ಐ.ಟಿ.ಐ. ವಿದ್ಯಾರ್ಥಿನಿ ಅಶೂರಾ ಸ್ವಾಗತಿಸಿದರು. ಬಿ.ಎಡ್. ಕಾಲೇಜಿನ ವಿದ್ಯಾರ್ಥಿ ನಾಯಕ ಕೀರ್ತನ್ ಕುಮಾರ್ ವಂದಿಸಿ, ಪ್ರಶಿಕ್ಷಣಾರ್ಥಿ ಮಮತಾ ಕೆ. ನಿರೂಪಿಸಿದರು.
ನಮಸ್ಕಾರಗಳು..ರಾಜಶ್ರೀ ಎಸ್ ಹೆಗ್ಡೆಯವರಿಗೆ.