

ಶ್ರೇಯಾ ಪಿ. ಶೆಟ್ಟಿ
ಗಂಟೆ ಹಗರಣ, ಹುಂಡಿ ವಿವಾದ, ವ್ಯವಸ್ಥಾಪನಾ ಸಮಿತಿ ವಿರುದ್ಧ ಆರೋಪಗಳ ಸುರಿಮಳೆ, ಇನ್ನೂ ವಿಲೇವಾರಿಯಾಗದ ರೂ. 2.5 ಕೋಟಿ ಮೌಲ್ಯಕ್ಕಿಂತಲೂ ಅಧಿಕ ಗಂಟೆಗಳು… ಹೀಗೆ ಹತ್ತು ಹಲವು ವಿವಾದಗಳಿಂದ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ಚರ್ಚೆಯ ಕೇಂದ್ರ ಬಿಂದು ಆಗಿದೆ.
ಇದಕ್ಕೀಗ ಮತ್ತೊಂದು ಸೇರ್ಪಡೆ ಇಲ್ಲಿನ ಸರ್ಕಾರಿ ಅತಿಥಿ ಗೃಹ. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಸೌತಡ್ಕ ದೇವಸ್ಥಾನ ಆದಾಯದ ವಿಷಯದಲ್ಲಿ ಸರ್ಕಾರಕ್ಕೆ ಬಹು ದೊಡ್ಡ ಮೂಲ. ಸುಪ್ರಸಿದ್ಧಿಯಾಗಿರುವ ಈ ದೇವಸ್ಥಾನಕ್ಕೆ ಪ್ರತಿ ದಿನ ಸಾವಿರಾರು ಭಕ್ತರು ದೇಶದ ಮೂಲೆ ಮೂಲೆಯಿಂದ ಬರುತ್ತಾರೆ. ಇಂತಹ ದೇವಸ್ಥಾನದಲ್ಲಿ ಸರ್ಕಾರದ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದ ಹಾಗೆ ನಿಂತಿದೆ 10 ಕೊಠಡಿಯ ಸರ್ಕಾರಿ ಯಾತ್ರಿ ನಿವಾಸ.
ವಸ್ತು ಪ್ರದರ್ಶನದಲ್ಲಿ ಇಟ್ಟ ಕಲಾಕೃತಿಯ ಹಾಗೆ ಬಂದ ಭಕ್ತರು ಈ ಸುಂದರ ಕಟ್ಟಡವನ್ನು ನೋಡಿಕೊಂಡು ಹೋಗಬಹುದಷ್ಟೇ. ಸ್ವಲ್ಪ ವಷದ ನಂತರ ಇದು ಭೂತ ಬಂಗಲೆಯಾಗಿ ಬದಲಾದರೂ ಅಚ್ಚರಿ ಇಲ್ಲ. ಕಳೆದ 10 ವಷಗಳ ಹಿಂದೆ ಮಾಜಿ ಶಾಸಕ ದಿ. ವಸಂತ ಬಂಗೇರ ಅವಧಿಯಲ್ಲಿ ಅತಿಥಿ ಗೃಹಕ್ಕೆ ಶಿಲಾನ್ಯಾಸ ನೆರವೇರಿತ್ತು. ನಂತರ ಗುತ್ತಿಗೆದಾರರು ಮೂಲಭೂತ ಸೌಕರ್ಯಗಳ ಕೆಲಸ ಪೂರ್ಣಗೊಳಿಸದೆ ಯಾತ್ರಿ ನಿವಾಸವನ್ನು ದೇವಸ್ಥಾನದ ಸುಪರ್ದಿಗೆ ಹಸ್ತಾಂತರ ಮಾಡಿದ್ದಾರೆ.
ಪೀಠೋಪಕರಣ, ವಿದ್ಯುತ್ ಸೌಲಭ್ಯ, ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದೆ ಬಾಗಿಲಿಗೆ ಜಡಿದ ಬೀಗ ತುಕ್ಕು ಹಿಡಿಯುತ್ತಿದೆ. ಕಟ್ಟಡ ಪಾಳು ಬೀಳುವ ಸ್ಥಿತಿಗೆ ತಲುಪಿದೆ. ಬರುವ ಭಕ್ತಾದಿಗಳಿಗೆ ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್‌ನ ಯಾತ್ರಿ ನಿವಾಸವಿದೆ. ಆದರೆ ನೂರಾರು ಭಕ್ತಾದಿಗಳು ವಾಸ್ತವ್ಯಕ್ಕೆ ಸ್ಥಳವಕಾಶವಿಲ್ಲದೆ ಖಾಸಗಿ ಹೊಟೇಲ್‌ಗಳಲ್ಲಿ ತಂಗುವಂತಹ, ದೇವಸ್ಥಾನದ ವಠಾರದಲ್ಲಿ ಮಲಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರ್ರವಾಸೋದ್ಯಮ ಇಲಾಖೆ ನಿರ್ಮಾಣ ಮಾಡಿರುವ ಈ ಯಾತ್ರಿ ನಿವಾಸಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಿದಲ್ಲಿ ಯಾತ್ರಿಕರಿಗೂ ಅನುಕೂಲ ಎಂಬ ಉzಶದಿಂದಲೇ ಸುದ್ದಿ ಬಿಡುಗಡೆ ಪತ್ರಿಕೆ ಈ ವರದಿ ಮಾಡುತ್ತಿದ್ದು, ಸರ್ಕಾರದ ಗಮನಕ್ಕೆ ತರುವ ಯತ್ನ ಮಾಡಿದೆ. ಮೇಲಾಗಿ, ಸರ್ಕಾರದ ಬೊಕ್ಕಸ ತುಂಬಲೂ ಇದು ಪೂರಕ. ಪ್ರವಾಸೋದ್ಯಮ ಇಲಾಖೆ ಈ ಕುರಿತಾಗಿ ತಕ್ಷಣ ಕಾರ್ಯ ಪ್ರವೃತ್ತಗೊಂಡು ಆದಷ ಬೇಗ ಮೂಲಭೂತ ಸೌಕರ್ಯ ಒದಗಿಸಿ ಯಾತ್ರಿ ನಿವಾಸ ಜನ ಬಳಕೆಗೆ ತೆರೆದುಕೊಳ್ಳಲಿ ಎಂದು ಸ್ಥಳೀಯರು ಕೂಡ ಒತ್ತಾಯಿಸಿದ್ದಾರೆ.
ಇನ್ನೊಂದು ಮಗ್ಗುಲು: ಸುಮಾರು 15 ಕೋಟಿ ಗಳಿಕೆ ಇರುವಂತಹ ಸೌತಡ್ಕ ಮಹಾಗಣಪತಿ ದೇವಸ್ಥಾನದಲ್ಲಿ ಸಿಬ್ಬಂದಿಗಳ ಕೊರತೆ ಇದೆ ಎನ್ನುವುದು ಹಲವರ ದೂರು. ದೇವಸ್ಥಾನದ ಉಸ್ತುವಾರಿಗೆ ಸಿಬ್ಬಂದಿ ಸಮಸ್ಯೆ ಇರುವಾಗ ಯಾತ್ರಿ ನಿವಾಸ ನೋಡಿಕೊಳ್ಳಲು ಕಷ್ಟ ಸಾಧ್ಯ. ಯಾತ್ರಿಕರ ನಿವಾಸದ ಮೇಲೆ ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ. ಹಾಗಾಗಿಯೇ ಇಷ್ಟು ವರ್ಷಗಳಾದರೂ ನಿವಾಸ ಅಧಿಕೃತವಾಗಿ ಉದ್ಘಾಟನೆಗೊಳ್ಳದೆ ಪಾಳು ಬಿದ್ದ ಸ್ಥಿತಿಯಲ್ಲಿದೆ. ಅದಕ್ಕಾಗಿ ಪ್ರವಾಸೋದ್ಯಮ ಇಲಾಖೆ ಮುತುವರ್ಜಿ ವಹಿಸಿ ಸರಿಯಾದ ವ್ಯವಸ್ಥೆ ಕಲ್ಪಿಸಿದರೆ ಅತಿಥಿ ಗೃಹದ ನಿರ್ವಹಣೆ ಸುಲಭವಾಗಬಹುದು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಾರೆ.
ಕೆಲ ಮೂಲಗಳ ಪ್ರಕಾರ, 2023ರ ಫೆಬ್ರವರಿಯಲ್ಲಿ ದೇವಸ್ಥಾನ ಬೇರೆ ಬೇರೆ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಸಮಯದಲ್ಲಿ ಈ ಯಾತ್ರಿ ನಿವಾಸದ ಉದ್ಘಾಟನೆಯನ್ನು ಕೂಡ ಆಡಳಿತಾಧಿಕಾರಿ ನೇತೃತ್ವದಲ್ಲಿ ನಾಮಕಾವಸ್ಥೆಗೆ ಮಾಡಲಾಗಿದೆ.
ಗುತ್ತಿಗೆದಾರರು ಪೀಠೋಪಕರಣ ವ್ಯವಸ್ಥೆಯನ್ನು ಪೂರ್ಣಗೊಳಿಸದೆ ಸೌತಡ್ಕ ದೇವಸ್ಥಾನದ ಸುಪರ್ದಿಗೆ ಕೊಟ್ಟಿದ್ದಾರೆ. ದೇವಸ್ಥಾನಕ್ಕೆ ಯಾತ್ರಿ ನಿವಾಸ ನಿರ್ವಹಣೆ ಮಾಡಲು ಸಾಧ್ಯವಾಗದೇ ಅದು ಈಗ ಪಾಳು ಬೀಳುವ ಸ್ಥಿತಿಗೆ ಬಂದಿದೆ ಎಂದು ಸ್ಥಳೀಯ ಭಕ್ತರು ಸುದ್ದಿ ಬಿಡುಗಡೆಯೊಂದಿಗೆ ಅನಿಸಿಕೆ ಹಂಚಿಕೊಂಡಿದ್ದಾರೆ.
ಕಟ್ಟಡ ಪಾಳು ಬೀಳದಿರಲಿ: ಸುಮಾರು ರೂ. ೫೦ ಲಕ್ಷ ವೆಚ್ಚದಲ್ಲಿ ೧೦ ಕೊಠಡಿ ಇರುವ ಯಾತ್ರಿ ನಿವಾಸದ ಕಾಮಗಾರಿ ಮುಗಿಸಿ ಕಳೆದ ವರ್ಷ ಉದ್ಘಾಟನೆ ಮಾಡಲಾಗಿತ್ತು. ಆದರೆ ಮೂಲಭೂತ ಸೌಕರ್ಯ ಒದಗಿಸದೆ ದೇವಸ್ಥಾನಕ್ಕೆ ಹಸ್ತಾಂತರ ಮಾಡಿದ್ದಾರೆ. ಹೊರಗಡೆಯಿಂದ ಬರುವ ಭಕ್ತರು ರೂಮ್ ಇಲ್ಲದೆ ಹಾಲ್‌ನಲ್ಲಿ ಮಲಗುತ್ತಾರೆ. ಈ ನಿವಾಸಕ್ಕೆ ಸರ್ಕಾರ ಮುತುವರ್ಜಿ ವಹಿಸಿ ಅಗತ್ಯ ವ್ಯವಸ್ಥೆ ಮಾಡಿದರೆ ಭಕ್ತರಿಗೆ, ಯಾತ್ರಿಕರಿಗೆ ಅನುಕೂಲ. ಕಟ್ಟಡವನ್ನು ಜನರ ತೆರಿಗೆ ಹಣದಿಂದ ಕಟ್ಟಿದ್ದಾರೆ. ಪ್ರವಾಸೋದ್ಯಮ ಇಲಾಖೆ ಇಷ್ಟು ವೆಚ್ಚ ಮಾಡಿ ಇದೀಗ ಪಾಳು ಬಿದ್ದರೆ ಅದನ್ನು ನಮಗೂ ನೋಡಲಾಗುವುದಿಲ್ಲ – ಬಾಲಕೃಷ್ಣ, ಅಂಗಡಿ ಮಾಲೀಕರು