ಬೆಳ್ತಂಗಡಿ: ನೆರಿಯ ಗ್ರಾಮದ ಅಕ್ಕೋಳೆಯ ಫಾತಿಮತ್ ರಂಝೀನ್ (19ವ) ಎಂಬವರ ಮನೆಗೆ ಫೆ.19ರಂದು ಬೆಳಿಗ್ಗೆ ಕಳ್ಳರು ನುಗ್ಗಿ ಚಿನ್ನಾಭರಣ ಕಳವು ಮಾಡಿದ ಘಟನೆ ನಡೆದಿದೆ. 6 ತಿಂಗಳ ಹಿಂದೆ ಹಾಸನ ಜಿಲ್ಲೆಯ ಚನ್ನಪಟ್ಟಣಕ್ಕೆ ಮದುವೆಯಾಗಿ ತೆರಳಿದ್ದ ಇವರು ತನ್ನ ಗಂಡನ ಮನೆಯಲ್ಲಿ 2 ತಿಂಗಳು ಮಾತ್ರ ಜೀವನ ನಡೆಸಿದ್ದು, ನಂತರ ಅಕ್ಕೋಳೆಯಲ್ಲಿರುವ ತವರು ಮನೆಯ ಪಕ್ಕದಲ್ಲಿ ಸಣ್ಣ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.
ರಂಝೀನ್ ರವರ ಮನೆಗೆ ಫೆ.19ರಂದು ನುಗ್ಗಿದ ಕಳ್ಳರು ಮನೆಯಿಂದ ಮತ್ತು ಅವರ ಕೈಯಿಂದ ಒಟ್ಟು 4 ಪವನ್ ಚಿನ್ನ ದೋಚಿದ್ದಾರೆ. ಕಳ್ಳರ ಕೃತ್ಯದಿಂದ ಗಾಬರಿಯಾಗಿ ಮೂರ್ಛೆ ಬಿದ್ದು ಸಣ್ಣ ಪುಟ್ಟ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ತವರು ಮನೆಯವರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದು ಅವರು ಚೇತರಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಠಾಣಾ ಎಸ್.ಐ.ಗಳಾದ ಕಿಶೋರ್ ಕುಮಾರ್ ಮತ್ತು ಗಾಣಿಗೇರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಪ್ರಕರಣ ದಾಖಲಿಸಲಾಗಿದೆ.