ಮರೋಡಿ: ಆಲಡೆ ಕ್ಷೇತ್ರ ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆ.12ರಂದು ಆರಂಭಗೊಂಡ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ಸೋತ್ಸವಕ್ಕೆ ಫೆ.16ರಂದು ತೆರೆಬಿತ್ತು. ಸಂಪ್ರೋಕ್ಷಣೆ, ಮಂತ್ರಾಕ್ಷತೆಯೊಂದಿಗೆ 5 ದಿನಗಳ ಸಂಭ್ರಮ ಸಂಪನ್ನಗೊಂಡಿತು.
ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಬಾಲಕೃಷ್ಣ ಪಾಂಗಣ್ಣಾಯ ಅವರ ಮಾರ್ಗದರ್ಶನದಲ್ಲಿ, ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ, ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಜಯಂತ ಕೋಟ್ಯಾನ್ ಸೇರಿದಂತೆ ಮೊಕ್ತೇಸರರು ಹಾಜರಿದ್ದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.
ಫೆ. 13ರಂದು ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಧ್ವಜಾರೋಹಣ, ಸಂಜೆ ದೊಡ್ಡ ರಂಗಪೂಜೆ, ಭಜನಾ ಕಾರ್ಯಕ್ರಮ, ಬಲಿ ಉತ್ಸವ, ವ್ಯಾಘ್ರಚಾಮುಂಡಿ ಸಹಿತ ರಕ್ತೇಶ್ವರಿ, ಮೈಸಂದಾಯ ದೈವಗಳಿಗೆ ಗಗ್ಗರ ಸೇವೆ, ಸಾಂಸ್ಕೃತಿಕ ವೇದಿಕೆಯಲ್ಲಿ ನಮ್ಮ ಕಲಾವಿದೆರ್ ಬೆದ್ರ ತಂಡದ ಉಮೇಶ್ ಮಿಚಾರ್ ಬಳಗದಿಂದ ತೆಲಿಕೆದ ಗೊಂಚಿಲ್ ಕಾರ್ಯಕ್ರಮ ಜರುಗಿತು.

ಫೆ. 14ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ ನಡೆಯಿತು. ಸಂಜೆ ಆಶ್ಲೇಷ ಬಲಿ, ಶ್ರೀಭೂತಬಲಿ, ಕವಾಟ ಬಂಧನ, ಪಟ್ಟದ ಪಂಜುರ್ಲಿ ಮತ್ತು ಕಲ್ಕುಡ ದೈವಗಳ ಕೋಲ, ಸಾಂಸ್ಕತಿಕ ವೇದಿಕೆಯಲ್ಲಿ ಸ್ಥಳೀಯ ಪ್ರತಿಭೆಗಳಿಂದ ತುಳುನಾಡ ಪೊರ್ಲು ಕಾರ್ಯಕ್ರಮ ನಡೆಯಿತು.
ಫೆ. 15ರಂದು ತುಲಾಭಾರ ಸೇವೆ, ಚೂರ್ಣೋತ್ಸವ, ದರ್ಶನ ಬಲಿ, ಬಟ್ಟಲುಕಾಣಿಕೆ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಬಲಿ ಉತ್ಸವ, ಸಿರಿಗಳ ಜಾತ್ರೆ, ಕುಮಾರದರ್ಶನ, ಕೊಡಮಣಿತ್ತಾಯ ದೈವದ ನೇಮೋತ್ಸವ, ದೈವದೇವರ ಭೇಟಿ, ಧ್ವಜವರೋಹಣ ಜರುಗಿತು. ಸಾಂಸ್ಕೃತಿಕ ವೇದಿಕೆಯಲ್ಲಿ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ, ಕಲ್ಲಡ್ಕ ವಿಠಲ ನಾಯಕ್ ಅವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು.