ಡಿ.ಡಿ. ಗ್ರೂಪ್ಸ್‌ನ ಮಹಿಳಾ ವಸ್ತ್ರ ಪರಿಕರಗಳ ವಿಶೇಷ ಮಳಿಗೆ ‘ರಾಝ್ಬೆರಿ’ ಶುಭಾರಂಭ – ತೃಪ್ತ ಸಿಬ್ಬಂದಿಗಳೇ ಸಂಸ್ಥೆಯ ಬೆಳವಣಿಗೆಯ ರುವಾರಿಗಳು: ಅರ್ಚನಾ ರಾಜೇಶ್ ಪೈ

0

ಬೆಳ್ತಂಗಡಿ: ನಂಬಿಕೆ ಎಂಬ ಮೂರಕ್ಷರ ಹೇಗೆ ಒಂದು ಸಂಸ್ಥೆಯ ಬೆಳವಣಿಗೆಗೆ ಕಾರಣವಾಗುತ್ತದೆಯೋ ಅದೇ ರೀತಿ ತೃಪ್ತಿ ಹೊಂದಿರುವ ಸಿಬ್ಬಂದಿಗಳೇ ಆ ಒಂದು ಸಂಸ್ಥೆಯ ಏಳಿಗೆಯ ಹಿಂದಿನ ರುವಾರಿಗಳು ಎಂದು ಉಜಿರೆಯ ಖ್ಯಾತ ಉದ್ಯಮಿಯಾಗಿರುವ ಸಂಧ್ಯಾ ಫ್ರೆಶ್‌ನ ಸಿಇಒ ಅರ್ಚನಾ ರಾಜೇಶ್ ಪೈ ಹೇಳಿದರು.

ಧೂಮ್ ಧಮಾಕಾ ಡಿ.ಡಿ ಗ್ರೂಪ್ ಆಫ್ ಕಂಪನಿಯ ವತಿಯಿಂದ ಬೆಳ್ತಂಗಡಿ ನಗರದ ಮೂರು ಮಾರ್ಗದ ಬಳಿಯ ವಿವಾ ಕಾಂಪ್ಲೆಕ್ಸ್‌ನಲ್ಲಿ ಆರಂಭಗೊಂಡ ಮಹಿಳೆಯರ ಬ್ರಾಂಡೆಡ್ ವಸ್ತ್ರಗಳು ಹಾಗೂ ಇತರ ಪರಿಕರಗಳ ವಿಶೇಷ ಮಳಿಗೆಯ ೧೩ನೇ ಶಾಖೆ ‘ರಾಝ್ಬೆರಿ’ಯ ಉದ್ಘಾಟನಾ ಸಮಾರಂಭದಲ್ಲಿ ಅವರು ಪ್ರಧಾನ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಮಂಗಳೂರಿನಲ್ಲಿ ದೊರೆಯವ ವಸ್ತುಗಳು ಬೆಳ್ತಂಗಡಿಯಲ್ಲಿ ಸಿಗುವಂತಾಗಬೇಕು. ಆನ್‌ಲೈನ್ ವ್ಯಾಪಾರ ಮಾಡುವಾಗ ಊರಿನ ಮಳಿಗೆಗಳಲ್ಲೇ ಮಾಡುವಂತಾಗಬೇಕು. ಡಿ.ಡಿ. ಗ್ರೂಪ್ ಇಂದು ಅಬ್ದುಲ್ ರಝಾಕ್ ಅವರ ನಾಲ್ವರ ಮಕ್ಕಳನ್ನೂ ಸೇರಿಸಿಕೊಂಡು 13 ಮಳಿಗೆಗಳನ್ನು ತೆರೆದಿದೆ ಎಂದರೆ ಇದರ ಹಿಂದೆ ಸಂಸ್ಥೆ ಸಹಿಸಿರುವ ತ್ಯಾಗ, ಪರಿಶ್ರಮ ಗುರುತಿಸುವಂತಹದ್ದು ಎಂದು ಅರ್ಚನಾ ರಾಜೇಶ್ ಪೈ ಹೇಳಿದರು.

ಸಂತಸದ ವಿಚಾರ-ಶಾಂತಾ ಬಂಗೇರ: ಪ್ರಶಾಂತಿ ಬ್ಯೂಟಿ ಪಾರ್ಲರ್ ಮಾಲಕಿ ಶಾಂತಾ ಬಂಗೇರ ಮಾತನಾಡಿ ನನ್ನ ಇಬ್ಬರು ಮಕ್ಕಳು ಇಂದು ವಿದೇಶದಲ್ಲಿ ಉದ್ಯೋಗ ನಿರತರಾಗಿದ್ದಾರೆ. ಡಿ.ಡಿ. ಗ್ರೂಪ್‌ನ ಅಬ್ದುಲ್ ರಝಾಕ್ ಅವರ ನಾಲ್ವರೂ ಮಕ್ಕಳು ಊರಿನಲ್ಲೇ ಇದ್ದುಕೊಂಡು ತಂದೆಯ ಜೊತೆಗೇ ವ್ಯಾಪಾರ ಕ್ಷೇತ್ರದಲ್ಲಿ ಹೆಜ್ಜೆ ಹಾಕುತ್ತಿರುವುದು ಸಂತಸದ ವಿಚಾರ. ಸಂಸ್ಥೆ ಇನ್ನಷ್ಟು ಬೆಳೆಯಲಿ. ವ್ಯಾಪಾರದ ಜೊತೆಗೆ ಸಮಾಜ ಸೇವೆಯಲ್ಲಿ ನಾವು ಕೊಡುವ ದಾನ ನೂರು ಪಟ್ಟು ಅಧಿಕಗೊಂಡು ನಮಗೇ ಲಭಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ ಎಂದರು.

ಉದ್ಯೋಗ ಸೃಷ್ಠಿಯಾಗಿದೆ-ಶ್ರೇಯಾ ಪಿ. ಶೆಟ್ಟಿ: ಸುದ್ದಿ ನ್ಯೂಸ್‌ನ ಪ್ರಧಾನ ನಿರೂಪಕಿ ಶ್ರೇಯಾ ಪುಷ್ಪರಾಜ್ ಶೆಟ್ಟಿ ಮಾತನಾಡಿ ಬಿಸ್ನೆಸ್, ಡಿಜಿಟಲ್ ಕ್ಷೇತ್ರಗಳೆಲ್ಲವೂ ಅಗಾಧವಾಗಿ ಬೆಳೆಯುತ್ತಿದ್ದು ಅದಕ್ಕೆ ಸ್ಪಂದಿಸುವ ರೀತಿಯ ಮಳಿಗೆ ರಾಝ್ಬೆರಿ ಇದಾಗಿದೆ. ಇಲ್ಲಿ ಮಹಿಳೆಯರಿಗೆ ಬೇಕಾದ ಎಲ್ಲಾ ವಸ್ತುಗಳೂ ಲಭ್ಯವಿದೆ. ವಿದೇಶಕ್ಕೆ ಹೋದರೆ ಮಾತ್ರ ದುಡಿಮೆ ಎಂಬ ಭಾವನೆಯ ಬದಲು ತಂದೆಯ ಜೊತೆಗೆ ನಾಲ್ವರು ಮಕ್ಕಳೂ ಸೇರಿ ಇಲ್ಲೇ ಉದ್ಯಮ ಕಟ್ಟಿಕೊಂಡಿದ್ದರಿಂದ ಹಲವರಿಗೆ ಉದ್ಯೋಗವೂ ಸೃಷ್ಠಿಯಾಗಿದೆ ಎಂದರು.

ಅಪಾರವಾಗಿ ಶ್ರಮಿಸಿದ್ದಾರೆ-ಅಸ್ಮಾ ರಿಝ್ವಾನ್: ನ್ಯಾಯವಾದಿ ಅಸ್ಮಾ ರಿಝ್ವಾನ್ ಮಾತನಾಡಿ ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಅಬ್ದುಲ್ ರಝಾಕ್ ಮತ್ತು ಅವರ ಮಕ್ಕಳು ಅಪಾರವಾಗಿ ಶ್ರಮಿಸಿದ್ದಾರೆ. ಮುಂದೆಯೂ ಈ ಸಂಸ್ಥೆ ಇನ್ನಷ್ಟು ಉನ್ನತಿಗೆ ಹೋಗುವುದರಲ್ಲಿ ಸಂದೇಹವಿಲ್ಲ ಎಂದರು. ವೇದಿಕೆಯಲ್ಲಿ ವಿವಾ ಕಾಂಪ್ಲೆಕ್ಸ್ ಮಾಲಕಿ ವೈಶಾಲಿ, ಇಕೋಫ್ರೆಶ್ ಸಂಸ್ಥೆಯ ಮಾಲಕಿ ಧನುಷಾ ರಾಕೇಶ್ ಹೆಗ್ಡೆ ಮತ್ತು ಉಜಿರೆ ಎಸ್‌ಡಿಎಂ ಪ.ಪೂ. ಕಾಲೇಜು ಉಪನ್ಯಾಸಕಿ ಸ್ವಪ್ನಾ ಸಂತೋಷ್ ಉಪಸ್ಥಿತರಿದ್ದರು. ಅಬ್ದುಲ್ ರಝಾಕ್ ಅವರ ಸೊಸೆ ರಝ್ಮಾ ರಫೀಕ್ ಸ್ವಾಗತಿಸಿದರು.

ಡಿ.ಡಿ. ಗ್ರೂಪ್ ಆಫ್ ಕಂಪನಿಯ ಚೇರ್ಮೆನ್ ಅಬ್ದುಲ್ ರಝಾಕ್, ಅವರ ಪುತ್ರರಾದ ಇರ್ಫಾನ್, ಇಮ್ರಾನ್, ಸಿನಾನ್ ಮತ್ತು ಶಿಮ್ರಾನ್, ಮನೆಯವರಾದ ಅಲಿಮಮ್ಮ, ಮಿಶ್ರಿಯಾ, ಝುಬೈದಾ, ರಮೀಝಾ ಆಹ್ವಾನಿತರನ್ನು ಬರಮಾಡಿಕೊಂಡು ಗೌರವಿಸಿದರು. ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞ ಮುಂಡಾಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಂತೃಪ್ತಿದಾಯಕ ನೆಲೆ: ಎಲ್ಲಿ ಮಹಿಳೆಗೆ ಮಾನ್ಯತೆ ದೊರೆಯುತ್ತದೋ ಅಲ್ಲಿ ಸಂತೃಪ್ತಿದಾಯಕ ನೆಲೆ ಉಂಟಾಗುತ್ತದೆ. ಮಹಿಳೆಯರನ್ನೇ ಆಹ್ವಾನಿಸಿ ಈ ಮಹಿಳಾ ಮಳಿಗೆ ತೆರೆದಿರುವುದು ಔಚಿತ್ಯಪೂರ್ಣ. ಮಹಿಳೆ ಇರುವಲ್ಲಿ ಲಕ್ಷ್ಮಿ ಇರುತ್ತಾಳೆ. ಅಲ್ಲಿ ಶಿಕ್ಷಣ ಎಂಬ ಸರಸ್ವತಿ ಕೂಡ ಮುಖ್ಯ. ಈ ಚಿಂತನೆಗೆ ನಾವು ಅಭಾರಿಗಳು. -ಅರ್ಚನಾ ರಾಜೇಶ್ ಪೈ

ಮಹಿಳೆಯರಿಗಾಗಿಯೇ ತೆರೆದ ಮಳಿಗೆ: ಮಹಿಳೆಯರೆನ್ನೇ ಮುಂದಿರಿಸಿಕೊಂಡು ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಇದೊಂದು ಹೊಸ ಪರಿಕಲ್ಪನೆ. ಈ ಪ್ರಯತ್ನಕ್ಕೆ ಇದುವರೆಗೆ ಯಾರೂ ಕೈ ಹಾಕಿಲ್ಲ ಎಂದು ಭಾವಿಸುತ್ತೇವೆ. ನಾವು ಈ ಮಾದರಿಗೆ ನಾಂದಿ ಹಾಡಿದ್ದೇವೆ. ನಮ್ಮ ಈ ಮಳಿಗೆಯಲ್ಲಿ ಸೇಲ್ಸ್ ಸಹಿತ ಎಲ್ಲ ವಿಭಾಗಗಳಲ್ಲೂ ಮಹಿಳೆಯರೇ ಇರಲಿದ್ದಾರೆ. ಇದು ಮಹಿಳೆಯರಿಗಾಗಿಯೇ ತೆರೆದ ಮಳಿಗೆ. -ಅಬ್ದುಲ್ ರಝಾಕ್
ಮಾಲಕರು, ಡಿ.ಡಿ. ಗ್ರೂಪ್ ಆಫ್ ಕಂಪನಿ.

LEAVE A REPLY

Please enter your comment!
Please enter your name here