

ದಾಮೋದರ್ ದೊಂಡೋಲೆ
ಮಾಲಾಡಿ: ಬಟ್ಟೆಗೆ ಆಗಾಗ ಬೀಳುತ್ತೆ ಬೆಂಕಿ..ಏಕಾಏಕಿ ಪಾತ್ರೆಗಳನ್ನು ಎಸೆಯುತ್ತಾ ಉಪದ್ರ. ಮನೆಯೊಡತಿಗೆ ಕುತ್ತಿಗೆ ಹಿಡಿದ ಅನುಭವ..ರಾತ್ರಿ ಮಲಗಿದ್ರೆ ಕಾಲು ಎಳೆಯುವ ಅನುಭವ.. ಮಕ್ಕಳ ಕಣ್ಣಿಗೆ ಕಾಣುವ ವಿಕಾರ ಆಕೃತಿ. ಅದು ಕುಲೆಯಂತೆ, ಅಲ್ಲಿ ಕುಲೆ ಇದೆಯಂತೆ ಅನ್ನುವ ಸುದ್ದಿಯಿಂದ ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನ ಮಾಲಾಡಿಯ ಉಮೇಶ್‌ರವರ ಮನೆ ಈಗ ಭಯ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಉಮೇಶ್ ಶೆಟ್ಟಿಯವರ ಮನೆಗೆ ಪ್ರತಿನಿತ್ಯ ನೂರಾರು ಜನರು ಆಗಮಿಸಿ ಅವರ ಸಮಸ್ಯೆಗಳೇನು ಅಂತ ಕೇಳುತ್ತಿದ್ದಾರೆ. ಅದರಲ್ಲಿ ಕೆಲವರು ನಮಗೂ ಅದರ ಅನುಭವ ಆಯ್ತು ಅಂತಂದ್ರೆ, ಇನ್ನು ಕೆಲವರು ಇದು ಶುದ್ಧ ಸುಳ್ಳು ಅಂತ ಹೇಳುತ್ತಾರೆ. ಸತ್ಯವೋ,ಸುಳ್ಳೋ ಆದರೆ ಪ್ರೇತಾತ್ಮದ ಕಾಟ ಅನ್ನುವ ಸುದ್ದಿ ಮಡಂತ್ಯಾರಿನ ಮಾಲಾಡಿಯಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿ ಮಾಲಾಡಿಯ ಪಲ್ಕೆಯಲ್ಲಿರುವ ಉಮೇಶ್‌ರವರ ಮನೆಗೆ ಜನಸಾಗರ ಹರಿದು ಬರುವಂತಾಗಿದೆ.
ಸುದ್ದಿಗೆ ಕರೆ: ಮಡಂತ್ಯಾರಿನ ಮಾಲಾಡಿಯ ಪಲ್ಕೆಯ ಮನೆಯಲ್ಲಿ ಕುಲೆತ ಉಪದ್ರ ಉಂಟಂತೆ ಅಂತ ನಮ್ಮ ಪ್ರತಿನಿಧಿ ಹರ್ಷ ಬಳ್ಳಮಂಜ ಸುದ್ದಿ ಬಿಡುಗಡೆ ಕಚೇರಿಗೆ ತಿಳಿಸಿದಾಗ ಸುದ್ದಿ ನ್ಯೂಸ್ ತಂಡ ರಾತ್ರೋ ರಾತ್ರಿ ಆ ಸ್ಥಳಕ್ಕೆ ಭೇಟಿ ನೀಡಿತು. ಸುದ್ದಿ ತಂಡ ಮಾಲಾಡಿಯ ಪಲ್ಕೆಗೆ ಹೋದಾಗ ಅಲ್ಲಿ ೪೦೦ಕ್ಕೂ ಅಧಿಕ ಜನರು ಸೇರಿದ್ದರು. ಮನೆಗೆ ಭೇಟಿ ನೀಡಿ ಹೋಗುವವರ ಸಂಖ್ಯೆ ಹೆಚ್ಚಾಗಿತ್ತು. ನಾನು ಆ ಪ್ರೇತವನ್ನು ನೋಡ್ಲೇಬೇಕು ಅಂತ ಹಠ ಕಟ್ಟಿ ನಿಂತವರಂತೆ ಇದ್ದ ಯುವಕರ ಸಂಖ್ಯೆಯೂ ಹೆಚ್ಚಿತ್ತು. ನಾವು ನೋಡ ನೋಡುತ್ತಿದ್ದಂತೆ ಎಂಚಿನಗೆ, ಓಲು ಕುಲೆ, ದಾದೆಯೇ ಕಥೆ, ಕುಲೆ ಇಜ್ಜಪ್ಪ ಪೊಕ್ಕಡೆ, ಒರ ತೂಕಾಂದ್ ಬತ್ತೆ..ಅಂತ ಹೇಳುತ್ತಾ ಬರುವವರ ಸಂಖ್ಯೆಯೂ ಹೆಚ್ಚಿತ್ತು.
3 ತಿಂಗಳಿನಿಂದ ತೊಂದರೆ: ಉಮೇಶ್ ಶೆಟ್ಟಿ ಸೆಂಟ್ರಿಂಗ್ ಕೆಲಸ ಮಾಡುತ್ತಾ ಬದುಕು ಸಾಗಿಸುತ್ತಾ ಇದ್ದಾರೆ. ಇವರ ಪತ್ನಿ ವಿನೋದಾ ಶೆಟ್ಟಿಯವರು ಗೃಹಿಣಿಯಾಗಿದ್ದು ಇವರಿಗೆ ಆರೋಗ್ಯ ತೊಂದರೆ ಕಾಣಿಸಕೊಂಡಿದೆ. ಮೂರು ತಿಂಗಳ ಹಿಂದಿನಿಂದ ಮನೆಯಲ್ಲಿ ಈ ರೀತಿಯ ಅಗೋಚರ ಶಕ್ತಿಯ ಕಾಟ ಶುರುವಾಗಿತ್ತು. ರಾತ್ರಿಯಾದರೆ ಸಾಕು ಮನೆಯಲ್ಲಿ ವಿಚಿತ್ರ ಘಟನೆಗಳು ನಡೆಯಲು ಶುರುವಾಯಿತು ಅಂತಾರೆ ಮನೆಯವರು.
ಪ್ಯಾಂಟ್ ಕಿಸೆಯಲ್ಲಿ ಭಸ್ಮ: ಮೂರು ತಿಂಗಳ ಹಿಂದೆ ಉಮೇಶ್ ಶೆಟ್ಟಿಯವರು ಮಡಂತ್ಯಾರು ಪೇಟೆಗೆ ಹೋಗಿ ಬಂದಾಗ ಅವರ ಕಿಸೆಯಲ್ಲಿ ಕುಂಕುಮ, ಭಸ್ಮ ಸಿಕ್ಕಿತ್ತು. ಯಾವುದೇ ದೇವಸ್ಥಾನಕ್ಕೆ ಹೋಗದೇ ಇದ್ದಾಗ ಇದೆಲ್ಲಿಂದ ಭಸ್ಮ, ಕುಂಕುಮ ಬಂತು ಅಂತ ಉಮೇಶ್ ಶೆಟ್ಟಿಯವರ ಕುಟುಂಬ ಆತಂಕಕ್ಕೀಡಾಯಿತು. ಅದಾದ ನಂತರ ಪ್ರತಿನಿತ್ಯ ಪ್ಯಾಂಟಿನಲ್ಲಿ ಕುಂಕುಮ ಪತ್ತೆಯಾಗುತ್ತಾ ಸಾಗಿತು. ಇದಾದ ನಂತರ ಉಮೇಶ್ ಪಂಚೆ ಉಟ್ಟುಕೊಂಡು ಹೋದಾಗ ಗಾಡಿಯಲ್ಲಿ ಕುಂಕುಮ ಪತ್ತೆಯಾಗುತ್ತಾ ಸಾಗಿತು. ಹೀಗೆ ಮನೆಯಲ್ಲಿ ನಂತರದ ದಿನಗಳಲ್ಲಿ ಮತ್ತಷ್ಟು ವಿಚಿತ್ರ ಘಟನೆಗಳು ಘಟಿಸುತ್ತಾ ಸಾಗಿದವು ಅಂತಾರೆ ಮನೆಯವರು.
ಮಾಟದ ಉಲ್ಲೇಖ:ಹಲವು ಕಡೆ ಉಮೇಶ್ ಶೆಟ್ಟಿಯವರು ಪ್ರಶ್ನಾ ಚಿಂತನೆ ನಡೆಸಿದ್ರು, ಆಗಲೂ ಕೂಡ ಮನೆಗೆ ಮಾಟ ಮಂತ್ರದ ಪ್ರಯೋಗವಾಗಿದೆ ಅಂತಲೇ ಉತ್ತರ ಸಿಗುತ್ತಿದೆ. ಆದರೆ ಮಾಟ ಮಾಡಿದವರಾರು, ಯಾಕಾಗಿ ಮಾಡಿದ್ದಾರೆ ಅನ್ನುವುದು ನಿಗೂಢವಾಗಿದೆ. ಅಲ್ಲದೇ ಪ್ರತಿನಿತ್ಯವೂ ಕೂಡ ಉಮೇಶ್‌ರವರು ಹಲವು ಕಡೆ ಪ್ರಶ್ನಾ ಚಿಂತನೆಗೆ ತೆರಳುತ್ತಿರುವುದು ಮಾಮೂಲಿಯಾಗಿದೆ. ಇವರ ಮನೆಯ ಸುದ್ದಿ ಹರಡಿದ ಹಿನ್ನಲೆಯಲ್ಲಿ ಮಾಲಾಡಿಯ ಪಲ್ಕೆಯ ಉಮೇಶ್ ಶೆಟ್ಟಿಯವರ ಮನೆಗೆ ಪ್ರತಿನಿತ್ಯವೂ ಈಗ ಜನ ಬರ್ತಿದ್ದಾರೆ. ಆದರೆ ಬಂದ ಹುಡುಗರಲ್ಲಿ ಅಚ್ಚರಿಯ ಜೊತೆಗೆ ಕೆಲವೊಂದು ಘಟನೆಗಳ ಬಗ್ಗೆ ಕೇಳಿದಾಗ ಆತಂಕ ಮನೆ ಮಾಡಿದೆ.
ಕೊಡಮಣಿತ್ತಾಯನ ಕ್ಷೇತ್ರದಲ್ಲಿ ಇದೆಲ್ಲ ಸಾಧ್ಯನೇ ಇಲ್ಲ-ಸುಳ್ಳು ಅನ್ನುವ ಕೆಲವರು: ಮಾಲಾಡಿಯು ಕೊಡಮಣಿತ್ತಾಯನ ಕ್ಷೇತ್ರ. ಇಲ್ಲಿ ಯಾವುದೇ ಇಂತಹ ಪ್ರೇತ ಭಾದೆ ಎಲ್ಲಾ ಇರಲು ಸಾಧ್ಯವೇ ಇಲ್ಲ. ಪಲ್ಕೆಯ ಉಮೇಶ್ ಶೆಟ್ಟಿಯವರ ಮನೆಯಲ್ಲಿ ಪ್ರೇತವೂ ಇಲ್ಲ, ಏನೂ ಇಲ್ಲ ಎಲ್ಲಾ ಸುಳ್ಳು ಅಂತ ಹೇಳುವವರೂ ಇದ್ದಾರೆ. ಹಾಗಂತ, ಈ ವಿಚಾರದಲ್ಲಿ ವಾದ ಪ್ರತಿವಾದ ನಡೆಯುತ್ತಲೇ ಇರುತ್ತದೆ.
ಪ್ರೇತ ಉಚ್ಛಾಟನೆಗೂ ಕಾಸಿಲ್ಲ ಅಂತಿದ್ದಾರೆ ಮನೆ ಮಂದಿ: ಮೂರು ತಿಂಗಳಿನಿಂದ ಉಮೇಶ್ ಶೆಟ್ಟಿಯವರು ಹಲವೆಡ ಬಲಿಮೆ ಕೇಳಿದ್ದಾರೆ. ಒಬ್ಬರೇ ದುಡಿದು ಸಂಸಾರ ಸಾಗಿಸುತ್ತಿರುವ ಉಮೇಶ್ ಶೆಟ್ಟಿಯವರು ಈ ಪ್ರೇತದ ಉಚ್ಛಾಟನೆ ಹೇಗೆ ಅಂತೆಲ್ಲ ಚಿಂತಿಸುತ್ತಿದ್ದಾರೆ. ಆದರೆ ಆ ಕಾರ್ಯಕ್ಕೆ ಖರ್ಚು ಎಷ್ಟಾಗುತ್ತದೆ, ಅದಕ್ಕೆ ಖರ್ಚು ಮಾಡಲು ಹಣವಿಲ್ಲ ಅನ್ನುವ ಚಿಂತೆಯಲ್ಲಿದ್ದಾರೆ ಉಮೇಶ್ ಶೆಟ್ಟಿ.
ಸಂಜೆ 5ರಿಂದ ಶುರುವಾಗುತ್ತೆ ಪ್ರೇತದ ಬಾಧೆ: ಪ್ರತಿನಿತ್ಯ ಸಂಜೆ ಐದು ಗಂಟೆಯ ನಂತರ ಮನೆಯಲ್ಲಿ ಪ್ರೇತ ಬಾಧೆ ಶುರುವಾಗುತ್ತದೆ. ಕತ್ತಲಾಗುತ್ತಿದ್ದಂತೆಯೇ ಒಂದಲ್ಲ ಒಂದು ಘಟನೆಗಳು ನಡೆಯುತ್ತದೆ. ಒಳಗಿದ್ದ ಬಟ್ಟೆಗೆ ಬೆಂಕಿ ತಗುಲುವುದು, ಹೊರಗಿದ್ದ ಬಟ್ಟೆ ಒಳಗೆ ಹೇಗೆ ಹೋಗುತ್ತೆ, ಅಲ್ಲಿ ಬೆಂಕಿ ತಗುಲುತ್ತೆ ಅಂತಾರೆ ಕುಟುಂಬದವರು.
ಬಂಗಾರ ಮಾಯ, ಕಪಾಟು ಲಾಕ್: ಉಮೇಶ್ ಶೆಟ್ಟಿಯವರ ಮಡದಿ ವಿನೋದಾರವರ ಕಿವಿಯೋಲೆ ಸೇರಿದಂತೆ ಕೆಲ ಆಭರಣಗಳು ಮಾಯವಾಗಿವೆ. ಅದರಲ್ಲೂ ಕಪಾಟಿಗೆ ಲಾಕರ್ ಇದ್ದರೂ ಅಲ್ಲಿಂದ ಮಾಯವಾಗಿದೆ. ಮನೆಯಲ್ಲಿ ಪ್ರೇತ ಬಾದೆ ಇದ್ದು ಅದನ್ನು ತಪ್ಪಿಸಲು ಕೆಲವು ದೇವಸ್ಥಾನಗಳ ತೀರ್ಥ ಮತ್ತು ಪ್ರಸಾದ ತಂದರೆ ಅದು ಕೂಡ ಬೆಳಗ್ಗೆ ಆಗುವಾಗ ಮಾಯವಾಗಿರುತ್ತದೆ. ಕಿಟಕಿಗೆ ಪ್ರಸಾದವನ್ನು ದಾರದಿಂದ ಕಟ್ಟಿದರೂ ಬೆಳಗ್ಗಾಗುವಾಗ ದಾರ ಮಾತ್ರ ಇರುತ್ತದೆ ಅಂತಾರೆ ಉಮೇಶ್ ಶೆಟ್ಟಿ.
ಇಪ್ಪತ್ತು ವರ್ಷಗಳ ಹಿಂದೆ ಒಂದು ಘಟನೆ ನಡೆದಿತ್ತು
ಇಪ್ಪತ್ತು ವರ್ಷಗಳ ಮೊದಲು ಕೊಲ್ಪೆದ ಬೈಲಿನಿಂದ ಮೂಡಾರಿಗೆ ಹೋಗುವ ರಸ್ತೆಯಲ್ಲಿ ಕ್ರಿಶ್ಚಿಯನ್ ಒಬ್ಬರ ಮನೆಗೆ ಕಲ್ಲು ಬೀಳುವುದು ಘಟನೆ ನಡೆದಿತ್ತು. ಕಲ್ಲು ಬಿದ್ದಾಗ ಜನರು ಸೇರುತ್ತಿದ್ದರು. ಕಿಟಕಿಯ ಗ್ಲಾಸ್‌ಗೆ ಕಲ್ಲು ಬೀಳುವುದು, ಈ ಸುದ್ದಿ ಹರಡಿದ್ದರಿಂದ ಪೊಲೀಸ್ ಅಧಿಕಾರಿಗಳು ಬಂದಿದ್ದರು. ಆದರೆ ಆ ಘಟನೆ ಏನು ಅಂತ ಗೊತ್ತಾಗಲೇ ಇಲ್ಲ. ಆ ಬಾಡಿಗೆ ಮನೆಯಲ್ಲಿದ್ದವರು ಮನೆಯನ್ನೇ ಬಿಟ್ಟು ಹೋದರು. ಮನೆಯೊಳಗಿದ್ದ ಹಾಲು, ಔಷಧ ಬಾಟಲಿಗಳು ಬೀಳುವುದು ಎಲ್ಲಾ ಮಾಡುತ್ತಿದ್ದರು ಅಂತಾ ಸ್ಥಳೀಯರು ಸುದ್ದಿಗೆ ತಿಳಿಸಿದ್ದಾರೆ.
ನಾನು ಸೋತು ಹೋಗಿದ್ದೇನೆ: ಉಮೇಶ್ ಶೆಟ್ಟಿ
ಮೂರು ತಿಂಗಳ ಹಿಂದೆ ನನ್ನ ಕಿಸೆಯಲ್ಲಿ ಪ್ರಸಾದ ಇಡುವುದು, ಅದಾದ ನಂತರ ಗಾಡಿಯಲ್ಲಿ ಪ್ರಸಾದ ಸಿಗುತ್ತಿತ್ತು. ಇದರ ಜೊತೆಗೆ ಪತ್ರವೂ ಕೂಡ ಸಿಕ್ಕಿದೆ. ಆ ನಂತರ ಮನೆಯೊಳಗ ಪಾತ್ರೆಯೆಲ್ಲ ಬಿಸಾಡುವುದು ಆಗ್ತಿತ್ತು. ನಂತರ ಹೆಂಡತಿಯ ಬಟ್ಟೆಗೆ ಬೆಂಕಿಯಿಡುವುದು ನಡೆದಿದೆ. ಇದನ್ನು ಪ್ರಶ್ನಾ ಚಿಂತನೆಯಲ್ಲಿ ಕೇಳಿದಾಗ ಪ್ರೇತವೊಂದು ದೈವದ ಜೊತೆಗಿದೆ. ನೀವು ಈ ಮನೆಯಲ್ಲಿ ಇರಬಾರದು ಅಂತ ಮಾಡಿ ಬಿಟ್ಟಿರುವುದು ಅಂತ ಹೇಳಿದ್ದಾರೆ. ಆದರೆ ಈಗ ಪ್ರತಿ ದಿವಸ ನನ್ನ ಮಡದಿಯ ಕುತ್ತಿಗೆ ಹಿಡಿಯುವುದು ಎಲ್ಲಾ ಆಗುತ್ತದೆ. ಮತ್ತೆ ಕಾಲು ಎಳೆಯುವುದು, ಬೆಂಕಿ ಹಚ್ಚುವುದು ಇತ್ಯಾದಿ ಆಗುತ್ತಲೇ ಇದೆ. ೧೫ ವರ್ಷದಿಂದ ಇಲ್ಲಿ ವಾಸಿಸುತ್ತಿzವೆ, ಆದರೆ ಇಲ್ಲಿಯವರೆಗೆ ಯಾವುದೇ ಸಮಸ್ಯೆಗಳು ಬಂದಿಲ್ಲ. ಇದಕ್ಕೆ ಏನು ಪರಿಹಾರ ಏನು ಗೊತ್ತಿಲ್ಲ. ನನ್ನಲ್ಲಿ ಹಣವೂ ಇಲ್ಲ. ದೋಸ್ತಿಯವರ ಹತ್ತಿರ ಹೇಳಿದ್ದಕ್ಕೆ ಜನರು ಎಲ್ಲರೂ ಕೂಡ ಇಲ್ಲಿಗೆ ಬರ್ತಿದ್ದಾರೆ. ನಾವು ನಾವುಂಡದ ಪ್ರಸಾದವನ್ನು ತಲೆಕೆಳಗೆ ಇಟ್ಟರೆ ಏನೂ ಆಗುವುದಿಲ್ಲ. ಮರೆತರೇ ಮಕ್ಕಳ ಕಣ್ಣಿಗೆ ಕಾಣುತ್ತದೆ. ಇದರಿಂದ ನಾನು ಸೋತು ಹೋಗಿzನೆ ಎನ್ನುತ್ತಾರೆ ಮನೆಯ ಒಡೆಯ ಉಮೇಶ್ ಶೆಟ್ಟಿ.
ಪ್ರೇತದ ಫೋಟೋ ತೆಗೆದಿದ್ದು ಕಿರಿ ಮಗಳಂತೆ
ಉಮೇಶ್ ಶೆಟ್ಟಿಯವರ ಮಗಳ ಮೊಬೈಲ್ ಫೋನ್‌ನಲ್ಲಿ ಇದ್ದ ವಿಲಕ್ಷಣ ರೂಪವುಳ್ಳ ಒಂದು ಫೋಟೋ ಎಲ್ಲೆಡೆ ವೈರಲ್ ಆಗಿದೆ. ಮುಖವಾಡದಂತೆ ಕಾಣುವ ಫೋಟೋ ತೆಗೆದಿದ್ದು ಉಮೇಶ್ ಶೆಟ್ಟಿಯವರ ಕಿರಿಮಗಳು. ಹಿರಿಮಗಳು ಮೊಬೈಲ್ ನೋಡುತ್ತಿದ್ದಾಗ ಕಿರಿಮಗಳಿಗೆ ವಿಲಕ್ಷಣ ರೂಪ ಕಾಣಿಸಿದೆ. ಕೂಡಲೇ ಅಕ್ಕನಲ್ಲಿ ಫೋಟೋ ತೆಗೆಯಲು ಹೇಳಿದಾಗ ಅವಳು ಭಯಪಟ್ಟು, ಮೊಬೈಲ್ ಕಿರಿಮಗಳಿಗೆ ನೀಡಿದ್ದು, ಆಕೆ ಫೋಟೋ ತೆಗೆದಿದ್ದಾಳೆ. ಈ ಫೋಟೋದ ಬಗ್ಗೆಯೂ ಕೂಡ ಸಾರ್ವಜನಿಕರಲ್ಲಿ ಹಲವು ರೀತಿಯ ಚರ್ಚೆಗಳನ್ನು ಹುಟ್ಟುಹಾಕಿದೆ. ಇದು ನಿಜವೋ ಸುಳ್ಳೋ ಅನ್ನುವುದು ತಾಂತ್ರಿಕ ತನಿಖೆ ನಡೆಸಿದರಷ್ಟೇ ಗೊತ್ತಾಗಬಹುದಾಗಿದೆ.
ನನ್ನ ಕುತ್ತಿಗೆ ಹಿಡಿಯುತ್ತದೆ-ಕಾಲು ಎಳೆಯುತ್ತದೆ
ಪ್ರಸಾದ ಸಿಕ್ಕಿದ ನಂತರ ಕಿವಿಯೋಲೆ ಇಲ್ಲ. ಅದು ಎಲ್ಲಿ ಉಂಟು ಅಂತ ಗೊತ್ತಿಲ್ಲ. ಗಾಡ್ರೆಜ್‌ನಲ್ಲಿಟ್ಟ ಚಿನ್ನವಿಲ್ಲ. ನನಗೆ ಮಲಗಲು ಬಿಡುವುದಿಲ್ಲ, ಕುತ್ತಿಗೆಯಲ್ಲಿ ಹಿಡಿದು ಒತ್ತುವುದು, ಮಲಗುವಾಗ ಕಾಲು ಎಳೆಯುವುದು ಮಾಡುತ್ತದೆ. ಸಂಜೆ ಐದು ಗಂಟೆಯ ನಂತರ ಉಪದ್ರ ಶುರುವಾಗುತ್ತದೆ. ಮನೆಯೊಳಗೆ ಹೋಗಲು ಬಿಡುವುದಿಲ್ಲ ಎಂದು ವಿನೋದಾ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ನನಗೆ ಮನೆಯಲ್ಲಿ ಇದ್ದಾಗ ಯಾರೋ ಹೋದ ಹಾಗೇ ಅನ್ನಿಸುತ್ತದೆ
ನನಗೆ ಮನೆಯಲ್ಲಿ ನಡೆದ ಘಟನೆಯ ಬಗ್ಗೆ ತುಂಬಾ ಭಯವಿದೆ. ಅಮ್ಮನ ಕುತ್ತಿಗೆ ಹಿಡಿಯುವುದು, ಉಸಿರುಗಟ್ಟುವುದು ಆಗ್ತಿತ್ತು. ಕಿನ್ನಿಗೋಳಿಯಲ್ಲಿ ಕೇಳಿದಾಗ ಗಾಡಿಯಲ್ಲಿ ಭಸ್ಮ ಇಟ್ಟಿದ್ದಾರೆ ಅಂತ ಹೇಳಿದ್ದರು. ನಮ್ಮ ದೈವ ಹೊರಗಿದೆ, ಭಸ್ಮ ಇಟ್ಟ ದೈವ ಒಳಗಿದೆ ಅಂತ ಹೇಳಿದ್ದರು. ಅಮ್ಮ ಅಪ್ಪ ಇಲ್ಲದಿದ್ದಾಗ ನಾನು ಮನೆಯೊಳಗೆ ಹೋದರೆ ಆಚೀಚೆ ಯಾರೋ ಬಂದ ಹಾಗೇ ಆಗುತ್ತದೆ ಎಂದು ಉಮೇಶ್ ಶೆಟ್ಟಿಯವರ ಹಿರಿಮಗಳು ನಿಖಿತಾ ಹೇಳಿದ್ದಾರೆ.
ಕುತ್ತಿಗೆ ಕಟ್ಟಿದ ನೂಲು ಮಾಯ, ಸಂಜೆಯಾಗುವಾಗ ಸೊಂಟದಲ್ಲಿ ನೂಲು
ನನಗೆ ಉಮೇಶ್ ಶೆಟ್ಟಿಯವರು ಸಮಸ್ಯೆ ಬಗ್ಗೆ ಹೇಳಿದ್ದರು. ಒಂದು ದಿವಸ ರಾತ್ರಿ ಬಟ್ಟೆಗೆ ಬೆಂಕಿ ಬಿದ್ದಿದೆ ಅಂದಾಗ ನಾವು ಮೂರು ಜನ ಬಂದೆವು. ಮಕ್ಕಳಲ್ಲಿ ಕೇಳಿದಾಗ ಅವರು ಹೇಳಿದರು. ಪ್ರಶ್ನೆ ಕೇಳಲು ಹೋದಾಗ ಅಲ್ಲಿಂದ ತಂದ ತೀರ್ಥ ಮಾಯವಾಗಿ ಹೋಗಿತ್ತು. ಅಲ್ಲದೆ ಉಮೇಶ್‌ರವರ ಹೆಂಡತಿಯ ಕುತ್ತಿಗೆಗೆ ಕಟ್ಟಿದ್ದ ನೂಲು ಮಾಯವಾಗಿತ್ತು. ಸಂಜೆಯಾಗುವಾಗ ಅದೇ ನೂಲು ಸೊಂಟದಲ್ಲಿತ್ತಂತೆ ಎಂದು ಉಮೇಶ್‌ರ ಸ್ನೇಹಿತ ವಸಂತ್ ಕೋಟ್ಯಾನ್ ತಿಳಿಸಿದ್ದಾರೆ.
ನಾನೇ ಫೋಟೋ ತೆಗೆದಿದ್ದು
ಟೇಬಲ್ ಮೇಲೆ ಕುಳಿತು ಬರೆಯುತ್ತಿದ್ದೆ, ಆವಾಗ ಸೌಂಡ್ ಆದಾಗ ಬಿಳಿಬಿಳಿ ಕಾಣಿಸಿತ್ತು. ಆವಾಗ ಅಕ್ಕ ಮೊಬೈಲ್‌ನಲ್ಲಿ ಯೂ ಟ್ಯೂಬ್ ನೋಡ್ತಾ ಇದ್ಳು. ಅವಳಿಗೆ ಹೇಳಿದೆ, ಅವಳು ಭಯ ಪಟ್ಟಿದ್ದಕ್ಕೆ ನಾನು ಫೋಟೋ ತೆಗೆದೆ, ಆನಂತರ ಫೋಟೋದಲ್ಲಿ ಕಾಣಿಸಿತು. ಇದರಿಂದ ತುಂಬಾನೇ ಭಯವಾಗುತ್ತಿದೆ. ನನಗೆ ಓದುವಾಗ ಯಾವುದೇ ತೊಂದರೆಯಾಗಿಲ್ಲ. ಮಲಗುವಾಗ ಕಣ್ಣಿಗೆ ಕಾಣಿಸುತ್ತದೆ, ಆಗ ಕಿರುಚಾಡಿದ್ದೇನೆ. ಕೆಲ ಪ್ರಸಾದ ಹಾಕಿದ್ರೆ ಏನೂ ಭಯ ಆಗುವುದಿಲ್ಲ ಎಂದು ಉಮೇಶ್‌ರ ಕಿರಿಮಗಳು ರಕ್ಷಿತಾ ತಿಳಿಸಿದ್ದಾರೆ.
ಸುದ್ದಿ ನ್ಯೂಸ್ ಬೆಳ್ತಂಗಡಿ ಯೂಟ್ಯೂಬ್‌ನಲ್ಲಿ ವೀಡಿಯೋ ಸ್ಟೋರಿ
ಮಾಲಾಡಿಯ ಪಲ್ಕೆಯಲ್ಲಿ ಸೇರಿದ ಜನರು ಏನಂದ್ರು, ಸ್ಥಳೀಯರ ಮನದ ಮಾತುಗಳೇನು, ಮನೆಯವರ ಆತಂಕ, ಭಯ, ಅನುಭವಗಳೇನು, ಇದನ್ನು ಸುಳ್ಳು ಅಂತ ಹೇಳಿದ್ಯಾರು ಎಂಬ ಎಲ್ಲಾ ಪ್ರಶ್ನೆಗಳಿಗೆ ಸುದ್ದಿ ನ್ಯೂಸ್ ಬೆಳ್ತಂಗಡಿ ಚಾನೆಲ್‌ನಲ್ಲಿ ಪ್ರಸಾರವಾಗುವ ವೀಡಿಯೋ ಉತ್ತರ ನೀಡಲಿದೆ.